ಮಣಿಪಾಲದಲ್ಲಿ ಆಯೋಜಿಸಿದ್ದ ನೀರಿನ ಬಿಕ್ಕಟ್ಟು ವಿಚಾರ ಸಂಕಿರಣವನ್ನು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಉದ್ಘಾಟಿಸಿದರು. ವರದೇಶ್​ ಹಿರೇಗಂಗೆ, ಪ್ರೊ. ಮುರಳೀಧರ ಉಪಾಧ್ಯ, ಡಾ. ಉದಯಶಂಕರ್​, ಬಡ್ಡಿ ಮುರಳಿ ಕೃಷ್ಣ, ರಾಜಾರಾಂ ತಲ್ಲೂರು ಇದ್ದರು. 
ಜಿಲ್ಲೆ

ಕರಾವಳಿಯಲ್ಲೂ ಕಾಡುತ್ತಿದೆ ಕುಡಿಯುವ ನೀರಿನ ಸವಾಲು

ಪ್ರಶಾಂತ ಜಿ. ಭಾಗ್ವತ

ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಆತಂಕ | ವಿಚಾರ ಸಂಕಿರಣ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಕುಡಿಯುವ ನೀರಿನ ಸಮಸ್ಯೆ ಮಾನವ ನಿರ್ಮಿತವೋ, ಪ್ರಕೃತಿಯ ಮುನಿಸೋ ತಿಳಿಯದಾಗಿದೆ. ಹೆಚ್ಚು ಮಳೆಯಾಗುವ ಕರಾವಳಿ ಭಾಗವಾದ ಉಡುಪಿಯಲ್ಲೂ ಸಹ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುತ್ತಿದೆ. ಇದು ಚಿಂತಿಸುವ, ಚರ್ಚಿಸುವ ಗಂಭೀರ ಸಮಸ್ಯೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಆತಂಕ ವ್ಯಕ್ತಪಡಿಸಿದರು.

ಮಣಿಪಾಲದ ಗಾಂಧಿಯನ್​ ಸೆಂಟರ್ ​ಫಾರ್​ ಫಿಲಾಸಫಿಕಲ್​ ಆರ್ಟ್ಸ್​ ಆ್ಯಂಡ್​ ಸೈನ್ಸ್​ಸ್​ ಮಾಹೆ ಸಹಯೋಗದಲ್ಲಿ ಹಿರಿಯಡ್ಕದ ಸಂಸ್ಕೃತಿ ಸಿರಿ ಟ್ರಸ್ಟ್​ ಆಶ್ರಯದಲ್ಲಿ ಸವೋರ್ದಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 'ಉಡುಪಿ ಜಿಲ್ಲೆಯ ನೀರಿನ ಬಿಕ್ಕಟ್ಟು' ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಸವಾಲಿನ ಸಂದರ್ಭ

ಎಲ್ಲವನ್ನೂ ಭೂಮಿಯಿಂದ ಪಡೆಯುತ್ತೇವೆ. ಆದರೆ, ತಿರುಗಿ ಭೂಮಿಗೆ ನಾವೇನು ಕೊಡಬೇಕು ಎಂದು ಜನರಿಗೆ ಗೊತ್ತಿಲ್ಲ. ಮಳೆಯ ಕೊರತೆಯಿಂದಾಗಿ ಪ್ರತಿವರ್ಷವೂ ಭತ್ತ ಬೆಳೆಯುವ ಪ್ರಮಾಣ ಕಡಿಮೆಯಾಗುತ್ತಿದ್ದು, ಅಡಕೆ ಬೆಳೆಯುತ್ತಿದ್ದು ಬೇಸಿಗೆಯಲ್ಲಿ ನೀರಿನ ಕೊರತೆಗೆ ಕಾರಣ ಆಗುತ್ತಿದೆ. ಹೀಗಾಗಿ ನೀರು ಉಳಿಸಲು ನಾವುಗಳು ಏನು ಮಾಡಬೇಕೆಂಬ ಸವಾಲಿನ ಸಂದರ್ಭ ಎದುರಾಗಿದೆ. ಇಂತಹ ವಿಚಾರ ಸಂಕಿರಣಗಳ ಮೂಲಕ ಜನರಲ್ಲಿ ಜಾಗೃತಿ, ಅರಿವು ಮೂಡುವಂತಾಗಬೇಕು ಎಂದರು.

ಪ್ರಾಥಮಿಕ ಜ್ಞಾನ

ಜಲವಿಜ್ಞಾನಿ ಡಾ. ಉದಯಶಂಕರ್​ ಮಾತನಾಡಿ, ಜಿಲ್ಲಾಡಳಿತ ಪ್ರತಿವರ್ಷವೂ ಡ್ಯಾಂಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಿದರೆ ಬೇಸಿಗೆಯಲ್ಲಿನ ನೀರಿನ ಬವಣೆ ಇನ್ನಷ್ಟು ದಿನ ಮುಂದೂಡಬಹುದು. ಹಾಲು ಎಲ್ಲಿಂದ ಬರುತ್ತೆ ಎಂದು ಕೇಳಿದರೆ ನಂದಿನಿ ಪ್ಯಾಕೆಟ್​ನಿಂದ ಎಂದು ಉತ್ತರಿಸುವ ಮಕ್ಕಳಿದ್ದಾರೆ. ಹೀಗಾಗಿ ಶಾಲೆಗಳಲ್ಲಿಯೇ ಮಕ್ಕಳಿಗೆ ನೀರಿನ ಮೂಲ, ಮಹತ್ವ, ಉಳಿತಾಯ ಕುರಿತು ಪ್ರಾಥಮಿಕ ಜ್ಞಾನ ನೀಡಬೇಕಿದೆ. ಪ್ರಕೃತಿಯನ್ನು ನಾವು ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸುತ್ತದೆ ಎಂದು ತಿಳಿಸಿದರು.

ಪ್ರಾತ್ಯಕ್ಷಿಕೆ

ಮಂಗಳೂರಿನ ಎಂಆರ್​ಪಿಎಲ್​ನ ಜನರಲ್​ ಮೆನೇಜರ್​ ಬಡ್ಡಿ ಮುರಳಿ ಕೃಷ್ಣ ಅವರು, ಸಮುದ್ರದ ನೀರನ್ನು ಶುದ್ಧೀಕರಿಸಿ 40 ಎಂಎಲ್​ಡಿ ನೀರನ್ನು ಎಂಆರ್​ಪಿಎಲ್​ನಲ್ಲಿ ಯಾವ ರೀತಿಯಲ್ಲಿ ಕೈಗಾರಿಕೆಯ ಕಾರ್ಯಕ್ಕೆ ಬಳಸಲಾಗುತ್ತಿದೆ ಎನ್ನುವುದುನ್ನು ಪ್ರಾತ್ಯಕ್ಷಿಕೆ ನೀಡಿದರು. ಬರಹಗಾರ ರಾಜಾರಾಂ ತಲ್ಲೂರು ಮಾತನಾಡಿ, ನೀರಿನ ಸಮಸ್ಯೆ ಹಾಗೂ ರಕ್ಷಣೆಯ ಮಾಗೋರ್ಪಾಯಗಳ ಕುರಿತು ವಿವಿರ ನೀಡಿದರು.

ಜಿಸಿಪಿಎಎಸ್​ ಮುಖ್ಯಸ್ಥ ವರದೇಶ್​ ಹಿರೇಗಂಗೆ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಅಭಿಜಿತ್​ ಕಾರ್ಯಕ್ರಮ ನಿರೂಪಿಸಿದರು.

ಮಣಿಪಾಲದಲ್ಲಿ ಆಯೋಜಿಸಿದ್ದ ನೀರಿನ ಬಿಕ್ಕಟ್ಟು ವಿಚಾರ ಸಂಕಿರಣವನ್ನು ಡಾ. ಕೆ.ವಿದ್ಯಾಕುಮಾರಿ ಉದ್ಘಾಟಿಸಿದರು. ವರದೇಶ್​ ಹಿರೇಗಂಗೆ, ಪ್ರೊ. ಮುರಳೀಧರ ಉಪಾಧ್ಯ, ಡಾ. ಉದಯಶಂಕರ್​, ಬಡ್ಡಿ ಮುರಳಿ ಕೃಷ್ಣ, ರಾಜಾರಾಂ ತಲ್ಲೂರು ಇದ್ದರು.

ಕರ್ನಾಟಕ ಸರ್ಕಾರಕ್ಕೆ ಏಕಿಲ್ಲ ಆಸಕ್ತಿ?

ಸಾಹಿತಿ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಮಾತನಾಡಿ, ಸೌದಿ ಅರೆಬಿಯಾ, ಯುಎಇ, ಇಸ್ರೇಲ್​ ದೇಶಗಳು ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸಿ, ಬಳಸುತ್ತಿದೆ. ಗುಜರಾತ್​ನಲ್ಲಿ 1,600 ಕಿಮೀ. ಸಮುದ್ರ ಇದ್ದು ಇಲ್ಲಿಯೂ ಸಹ 15ಕ್ಕಿಂತ ಹೆಚ್ಚು ಘಟಕಗಳು ಸಮುದ್ರದ ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸುವ ಕಾರ್ಯ ಮಾಡುತ್ತಿದೆ. ತಮಿಳುನಾಡು, ಮುಂಬಯಿಯಲ್ಲಿಯೂ ಘಟಕಗಳಿವೆ. ಮಂಗಳೂರಿನ ಎಂಆರ್​ಪಿಎಲ್​ ಸಹ ಸಮುದ್ರ ನೀರನ್ನು ಶುದ್ಧೀಕರಿಸಿ ಕೈಗಾರಿಕೆಗೆ ಬಳಸುತ್ತಿದೆ. ಆದರೆ, ಕಡಲ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸಲು ಕರ್ನಾಟಕ ಸರ್ಕಾರ ಏಕೆ ಆಸಕ್ತಿ ತಾಳುತ್ತಿಲ್ಲ? ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ 25 ವರ್ಷದಿಂದ 22 ಸಾವಿರ ಕೋಟಿ. ರೂ. ವ್ಯಯಿಸುತ್ತಿದೆ. ಆದರೂ ನೀರಿನ ಬವಣೆ ನಿಂತಿಲ್ಲ. ವಾರಾಹಿ ಎಂದೂ ಮುಗಿಯದ ಯೋಜನೆ. ಹೀಗಾಗಿ ನಮ್ಮಲ್ಲೂ ಸಮುದ್ರ ಇದ್ದು, ಶುದ್ಧೀಕರಿಸಿದರೆ ಕುಡಿಯುವ ನೀರಿಗಲ್ಲದಿದ್ದರೂ ಇನ್ನಿತರ ಕಾರ್ಯಗಳಿಗೆ ಬಳಸಿಕೊಳ್ಳಬಹುದಲ್ಲವೇ ಎಂಬ ವಿಚಾರ ಮಂಡಿಸಿದರು.