ಬೆಂಗಳೂರು: ಮುಂಗಾರು ಆರಂಭವಾಗಿದ್ದರೂ, ರಾಜಧಾನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವಂತೆ ಕಾಣುತ್ತಿಲ್ಲ. ಮೇ ಅಂತ್ಯದಿಂದ ಹಲವು ಪ್ರದೇಶಗಳಲ್ಲಿ ಮಳೆಯಾಗಿದ್ದರೂ, ಹೊರವಲಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತೆ ಮುನ್ನಲೆಗೆ ಬಂದಿದೆ.
ಕಳೆದ ಬೇಸಿಗೆ ಅವಧಿಯಲ್ಲಿ ಎದುರಾಗಿದ್ದ ಬರ ಪರಿಸ್ಥಿತಿಯಿಂದ ರಾಜಧಾನಿ ಜನತೆ ಸಂಕಷ್ಟ ಎದುರಿಸಿದ್ದರು. ಅಂತರ್ಜಲ ಕುಸಿತ ಪರಿಣಾಮ ದುಬಾರಿ ಬೆಲೆಗೆ ಟ್ಯಾಂಕರ್ ನೀರು ತರಿಸಿಕೊಳ್ಳಬೇಕಾದ ಸಂದರ್ಭ ಎದುರಾಗಿತ್ತು. ಟ್ಯಾಂಕರ್ ಮಾಫಿಯಾವೂ ಮುನ್ನಲೆಗೆ ಬಂದಿತ್ತು. ಈ ಅವಧಿಯಲ್ಲಿ ಬೆಂಗಳೂರು ಜಲಮಂಡಳಿ ಕೈಗೊಂಡ ತ್ವರಿತ ನಿರ್ಧಾರಗಳು ಕುಡಿಯುವ ನೀರಿನ ಸಮಸ್ಯೆಯನ್ನು ನಿಯಂತ್ರಿಸಿತ್ತು. ವೈಟ್ಫೀಲ್ಡ್, ಕನಕಪುರ ರಸ್ತೆ ಪ್ರದೇಶ, ಕೆಂಗೇರಿ, ಯಶವಂತಪುರ ಸೇರಿ ಹೊರವಲಯದ ವಿವಿಧ ಬಡಾವಣೆಗಳಲ್ಲಿ ಮತ್ತೆ ಕುಡಿಯುವ ನೀರಿನ ಬಿಕ್ಕಟ್ಟು ಸೃಷ್ಟಿಯಾಗುತ್ತಿದೆ. ಹೀಗಾಗಿ ನಿತ್ಯ ಬಳಕೆಗೆ ಮತ್ತೆ ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿರುವುದಾಗಿ ನಿವಾಸಿಗಳು ಸಮಸ್ಯೆ ಹಂಚಿಕೊಂಡಿದ್ದಾರೆ.
ಹೊರವಲಯದಲ್ಲಿರುವ ಅಪಾರ್ಟ್ಮೆಂಟ್ ನಿವಾಸಿಗಳು ದಿನಬಳಕೆಗೆ ಹೆಚ್ಚಾಗಿ ಬೋರ್ವೆಲ್ ನೀರನ್ನೇ ಅವಲಂಬಿಸಿರುತ್ತಾರೆ. ಕಳೆದ ಬೇಸಿಗೆಯಲ್ಲಿ ಹಲವೆಡೆ ಸಾಕಷ್ಟು ಕೊಳವೆ ಬಾವಿಗಳು ಬತ್ತಿ ಹೋಗಿವೆ. ಹೀಗಾಗಿ ಇಂದಿಗೂ ನೀರಿನ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಬತ್ತಿರುವ ಕೊಳವೆ ಬಾವಿಗೆ ಮಳೆ ನೀರು ಇಂಗಿಸುವಿಕೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದರೂ, ಪ್ರಸ್ತುತ ನೀರು ಲಭ್ಯವಾಗುತ್ತಿಲ್ಲ. ಈ ಪ್ರಯತ್ನ ಲ ನೀಡಲು ಕನಿಷ್ಟ ಎರಡು ವರ್ಷಗಳ ಸಮಯ ಬೇಕೆಂಬುದು ಜಲತಜ್ಞರ ಅಭಿಪ್ರಾಯ.
ಹೊರವಲಯದ ವಿವಿಧ ಬಡಾವಣೆ ನಿವಾಸಿಗಳು ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ಹೆಚ್ಚು ಮೊತ್ತ ಪಾವತಿಸಿ, ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ನೀರಿನ ಸಮಸ್ಯೆಯಿಂದ ನಿತ್ಯದ ಚಟುವಟಿಕೆಗೆ ಸಮಸ್ಯೆಯಾಗುತ್ತಿದೆ. ಕೂಡಲೇ ಜಲಮಂಡಳಿ ನಾಗರಿಕ ಸಮಸ್ಯೆಯತ್ತ ಗಮನಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹೊರವಲಯದಲ್ಲಿ ನೀರಿನ ಸಮಸ್ಯೆ ಎದುರಾಗಿದೆ ಎಂಬುದು ಗಮನಕ್ಕೆ ಬಂದಿದೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾದ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ ಕಾವೇರಿ 5ನೇ ಹಂತದ ಯೋಜನೆ ಜುಲೈ ಮೊದಲ ವಾರದಲ್ಲಿ ಕಾರ್ಯಾರಂಭವಾಗಲಿದೆ. ಬಳಿಕ ಹೊರವಲಯಕ್ಕೂ ಕಾವೇರಿ ನೀರು ಸರಬರಾಜಾಗುತ್ತದೆ. ಈಗಾಗಲೇ ಸಂಪರ್ಕ ಪಡೆದುಕೊಂಡಿದ್ದರೆ ಸಮಸ್ಯೆ ಬಗೆಹರಿಯಲಿದೆ.
- ಡಾ. ವಿ.ರಾಮ್ ಪ್ರಸಾತ್ ಮನೋಹರ್, ಅಧ್ಯಕ್ಷ, ಜಲಮಂಡಳಿ