-ಹರಿಪ್ರಸಾದ್ ನಂದಳಿಕೆ ಕಾರ್ಕಳ
ಏರುತ್ತಿರುವ ತಾಪಮಾನದ ಪರಿಣಾಮ ಎಲ್ಲೆಡೆ ನೀರಿಗಾಗಿ ಹಾಹಾಕಾರ ಎದ್ದಿದೆ. ಬಿಸಿಲ ಬೇಗೆಯಿಂದ ಇದೀಗ ಬಹುತೇಕ ಭಾಗದಲ್ಲಿ ನದಿ ತೊರೆ ಬತ್ತುತ್ತಿದ್ದರೆ ಇತ್ತ ಮಲೆನಾಡಿನ ತಪ್ಪಲಿನ ಪ್ರದೇಶವಾದ ಕಾರ್ಕಳದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದ್ದಿದೆ. ಏಪ್ರಿಲ್‌ನಲ್ಲಿ ಮಳೆ ಸುರಿಯದಿದ್ದರೆ ಜಲಮೂಲಗಳೆಲ್ಲ ಬತ್ತಿ ಬರಡಾಗುವ ಭೀತಿ ಆವರಿಸಿದೆ.
ಹಿಂದಿನ ವರ್ಷಗಳಿಗೆ ಹೋಲಿಸಿದರೆ ತಾಲೂಕಿನಲ್ಲಿ ಈ ಬಾರಿ ಬಹುಬೇಗನೇ ನದಿ, ತೊರೆ, ಬಾವಿಗಳು ಬತ್ತಿ ಹೋಗಿ ನೀರಿನ ಸಮಸ್ಯೆ ಕಾಡುತ್ತಿದೆ. ತಾಲೂಕಿನ ಶಾಂಭವಿ ನದಿ, ಎಣ್ಣೆಹೊಳೆಯ ನದಿ ಜತೆಗೆ ಸಣ್ಣ ಪುಟ್ಟ ನದಿಗಳಲ್ಲಿ, ಅಣೆಕಟ್ಟೆಯಲ್ಲಿ ನೀರಿಲ್ಲದೆ ಕೃಷಿಕರು ಕಂಗಾಲಾಗಿದ್ದಾರೆ.
ಸಾವಿರಾರು ಎಕರೆ ಕೃಷಿಭೂಮಿಗೆ ವರದಾನವಾಗಿದ್ದ ಮುಂಡ್ಲಿ ಡ್ಯಾಂ ಸಂಪೂರ್ಣ ಬತ್ತಿದ್ದು, ಪರಿಸರದ ಜನರಲ್ಲಿ ಆತಂಕ ಎದುರಾಗಿದೆ. ಕಾರ್ಕಳ ನಗರ ವ್ಯಾಪ್ತಿಗೆ ಕುಡಿಯುವ ನೀರು ಪೂರೈಕೆಯಾಗುವ ಮುಂಡ್ಲಿ ಅಣೆಕಟ್ಟೆಯಲ್ಲಿ ನೀರು ಸಂಪೂರ್ಣ ಬತ್ತಿಹೋಗಿದ್ದು, ನಗರಕ್ಕೆ ನೀರು ಪೂರೈಕೆಗೆ ಸಮಸ್ಯೆ ಎದುರಾಗಿದೆ. ಇದೀಗ ತಾಲೂಕಿನ ರಾಮ ಸಮುದ್ರವನ್ನು ಆಶ್ರಯಿಸಲಾಗುತ್ತಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹುಟ್ಟುವ ಉಡುಪಿಯ ಜೀವನಾಡಿಯಾಗಿರುವ ಸ್ವರ್ಣ ನದಿಗೆ ಕಡಾರಿ, ಕೆರ್ವಾಶೆ, ಮುಂಡ್ಲಿ, ಎಣ್ಣೆಹೊಳೆ ಏತ ನೀರಾವರಿ ಯೋಜನೆ, ಕುಕ್ಕುಜೆ ಪಟ್ಟಿಬಾವು, ಶಿರೂರು ಡ್ಯಾಂ, ಬಜೆ ಡ್ಯಾಂ ಸೇರಿದಂತೆ 8 ಡ್ಯಾಂಗಳನ್ನು ನಿರ್ಮಿಸಲಾಗಿದ್ದು, ಎಲ್ಲ ಕಡೆ ನೀರಿಗೆ ಕೊರತೆಯುಂಟಾಗಿದೆ.
ಮುಂಡ್ಲಿ ಡ್ಯಾಂನಲ್ಲಿ 3 ಎಂಎಲ್‌ಡಿ ಸಂಗ್ರಹ ಸಾಮರ್ಥ್ಯವಿದ್ದು ಅಲ್ಲಿಂದ ಕಾರ್ಕಳ ನಗರದ ರಾಮಸಮುದ್ರ ಸಮೀಪದ ಸಂಗ್ರಹಾಗಾರಕ್ಕೆ ತಲುಪಿಸಲಾಗುತ್ತದೆ. ಅಲ್ಲಿಂದ ಬಂಡಿಮಠ ಬಳಿಯ ಸಂಪ್ ಮೂಲಕ ಪುರಸಭೆ ವ್ಯಾಪ್ತಿಗೆ ಸರಬರಾಜು ಮಾಡಲಾಗುತ್ತಿತ್ತು. ಆದರೆ ಈ ಬಾರಿ ಡ್ಯಾಂ ಸಂಪೂರ್ಣ ಬತ್ತಿದ ಪರಿಣಾಮ ನೀರಿನ ಸಮಸ್ಯೆ ಕಾಡಿದೆ. ಮಳೆ ಇಲ್ಲದೆ, ಒಳಹರಿವು ಇಲ್ಲದೆ ನಗರದ ಹತ್ತಿರದಲ್ಲಿರುವ ರಾಮ ಸಮುದ್ರ ಆಶ್ರಯಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕೃಷಿ ಭೂಮಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಪ್ರಾರಂಭಿಸಲಾದ ಮಹತ್ವಾಕಾಂಕ್ಷಿ ಎಣ್ಣೆಹೊಳೆ ಏತ ನೀರಾವರಿ ಯೋಜನೆ ಬಿಸಿಲ ಬೇಗೆಗೆ ಫೆಬ್ರವರಿ ತಿಂಗಳ ಕೊನೆ ವಾರದಲ್ಲಿ ಸಂಪೂರ್ಣ ಬತ್ತಿಹೋಗಿದೆ.
ಕಾರ್ಕಳದ ಅಜೆಕಾರು, ಮಿಯ್ಯರು, ಕಡಾರಿ, ಇರ್ವತ್ತೂರು, ಶಿರ್ಲಾಲು, ಈದು, ಕುಕ್ಕಂದೂರು, ಅಯ್ಯಪ್ಪ ನಗರ, ಬೈಲೂರು ಕೌಡೂರು, ಮುನಿಯಾಲು, ಅಂಡಾರು, ಬೆಳ್ಮಣ್, ನಿಟ್ಟೆ, ಬೋಳ, ಮುಂಡ್ಕೂರು ಗ್ರಾಮಗಳಲ್ಲಿ ಬಾವಿ ನೀರು ಸಂಪೂರ್ಣ ಬತ್ತಿಹೋಗಿದೆ. ಕೆಲವು ಭಾಗಗಳಲ್ಲಿ 400 ಅಡಿ ಕೊಳವೆ ಬಾವಿ ತೋಡಿದರೂ ನೀರಿನ ಒರತೆ ದೊರಕದೆ ಕೊಳವೆ ಬಾವಿ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ.
ನದಿ, ಕೊಳವೆ ಬಾವಿ ಹಾಗೂ ಬಾವಿಗಳನ್ನು ನಂಬಿಕೊಂಡು ಬದುಕುತಿದ್ದ ಕೃಷಿಕರು ಈ ಬಾರಿ ಕಂಗಾಲಾಗಿದ್ದಾರೆ. ಕುಡಿಯುವ ನೀರಿಗಾಗಿ ಪರಿತಪಿಸುವ ಹೊತ್ತಿನಲ್ಲಿ ಕೃಷಿಗೆ ನೀರು ಉಣಿಸಲು ಕೃಷಿಕರು ಪರದಾಡುತಿದ್ದಾರೆ. ನದಿಯನ್ನು ನಂಬಿದ ಕೃಷಿಕರ ಮೇಲೆ ನೀರಿನ ಮಿತ ಬಳಕೆ ಮಾಡುವಂತೆ ಸ್ಥಳಿಯಾಡಳಿತದ ಮೂಲಕ ಒತ್ತಡ ಹೇರಲಾಗುತ್ತಿದೆ. ಅಡಿಕೆ, ಕೊಕ್ಕೋ ಸೇರಿದಂತೆ ತೋಟಗಾರಿಕಾ ಬೆಳೆಗಳು ಬಾಡಿ ಹೋಗುತ್ತಿವೆ. ನದಿಯಲ್ಲಿ ಅಲ್ಲಲ್ಲಿ ಗುಂಡಿಗಳಲ್ಲಿ ತುಂಬಿರುವ ನೀರನ್ನು ಕೃಷಿಕರು ಕೃಷಿ ಭೂಮಿಗಾಗಿ ಬಳಸುತ್ತಿದ್ದಾರೆ. ಹೀಗೆ ಒಂದೆರಡು ವಾರ ಕಳೆದರೆ ನದಿಯೂ ಸಂಪೂರ್ಣ ಬತ್ತಿ ಹೋಗಿ ಕೃಷಿ ಚಟುವಟಿಕೆಗೂ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗುವಂತಿದೆ.
ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಟ್ಯಾಂಕರ್ ಮೂಲಕ ನೀರು ಪೂರೈಕೆಗಾಗಿ ಟೆಂಡರ್ ಕರೆಯಲಾಗಿದೆ. ಕುಡಿಯುವ ನೀರಿಗೆ ಹೆಚ್ಚಿನ ಒತ್ತು ನೀಡಿ ನೀರು ಪೋಲಾಗದಂತೆ ಕ್ರಮವಹಿಸಲಾಗುವುದು.-ರೂಪಾ ಶೆಟ್ಟಿ, ಮುಖ್ಯಾಧಿಕಾರಿ ಕಾರ್ಕಳ ಪುರಸಭೆ ನಾವು ಇಷ್ಟು ವರ್ಷಗಳಲ್ಲಿ ಈ ರೀತಿಯ ನೀರಿನ ಸಮಸ್ಯೆ ಕಂಡವರಲ್ಲ. ಈ ಬಾರಿ ಏರುತ್ತಿರುವ ತಾಪಮಾನದಿಂದ ನದಿ, ತೊರೆ, ಬಾವಿ ಎಲ್ಲವೂ ಬತ್ತಿ ಹೋಗುತ್ತಿದೆ.-ರಮೇಶ್ ಪೂಜಾರಿ, ಕೃಷಿಕ