ಹರಪನಹಳ್ಳಿಯ ಶಿಕ್ಷಕರ ಕಾಲನಿಯಲ್ಲಿ ನಗರೋತ್ಥಾನ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಒವರ್‌ಹೆಡ್‌ಟ್ಯಾಂಕ್. 
ಜಿಲ್ಲೆ

64 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಸಂಭವ, ಹರಪನಹಳ್ಳಿ ತಾಲೂಕಿನಲ್ಲಿ ಸಮರ್ಪಕ ಅನುಷ್ಠಾನವಾಗಲಿ ಬಹುಗ್ರಾಮ ಯೋಜನೆ

ಕರಿಬಸಪ್ಪ ಪರಶೆಟ್ಟಿ ಹರಪನಹಳ್ಳಿ
ಬರಗಾಲ ಪೀಡಿತ ಬಯಲು ಸೀಮೆಯಾಗಿರುವ ತಾಲೂಕಿನಲ್ಲಿನ ನೀರಿನ ಬವಣೆ ನೀಗಲು ತುಂಗಭದ್ರಾ ನದಿಯೊಂದೇ ಆಸರೆಯಾದೆ.

ತಾಲೂಕಿನ ನೀಲಗುಂದ, ಬಾಗಳಿ, ಬೆಣ್ಣಿಹಳ್ಳಿ, ನಂದಿಬೇವೂರು, ನಿಟ್ಟೂರು, ನಿಚ್ಚವ್ವನಹಳ್ಳಿ, ಹಿರೇಮೆಗಳಗೆರೆ, ಲಕ್ಷ್ಮೀಪುರ, ಶಿಂಗ್ರಿಹಳ್ಳಿ, ಮಾಡ್ಲಿಗೇರಿ, ಮತ್ತಿಹಳ್ಳಿ, ಮೈದೂರು ಚಿರಸ್ತಹಳ್ಳಿ, ಯಡಿಹಳ್ಳಿ, ಚಿಗಟೇರಿ, ಅರಸೀಕೆರೆ, ರಾಗಿಮಸಲವಾಡ, ಹಲುವಾಗಲು, ಉಚ್ಚಂಗಿದುರ್ಗ, ಹಾರಕನಾಳು, ಹೊಸಕೋಟೆ, ಕಂಚಿಕೇರಿ, ಕೂಲಹಳ್ಳಿ, ಕಡಬಗೇರಿ, ಕೆ.ಕಲ್ಲಹಳ್ಳಿ, ಗುಂಡಗತ್ತಿ, ತೆಲಿಗಿ, ದುಗ್ಗಾವತಿ, ಚಟ್ನಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 64 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಲಿದೆ. ಅಂದಾಜು ಕ್ರಿಯಾಯೋಜನೆ ರಚಿಸಿರುವ ಅಧಿಕಾರಿಗಳು ಮುಂಜಾಗ್ರತೆ ವಹಿಸಲು ಮುಂದಾಗಿದ್ದಾರೆ.

ಒಟ್ಟು 37 ಗ್ರಾಪಂ ಹೊಂದಿರುವ ಈ ತಾಲೂಕಿನಲ್ಲಿ 280ಕ್ಕೂ ಹಳ್ಳಿಗಳಿದ್ದು, ಈ ಪೈಕಿ 190ಕ್ಕೂ ಹೆಚ್ಚು ಗ್ರಾಮಗಳಿಗೆ 2009ರಿಂದ ಇಲ್ಲಿಯವರೆಗೂ ಬಹುಗ್ರಾಮ ಯೋಜನೆಯಡಿ ನೀರೊದಗಿಸಲು ಯತ್ನಿಸಲಾಗುತ್ತಿದೆ. ಆದರೆ, ಸಮರ್ಪಕ ಅನುಷ್ಠಾನವಾಗಿಲ್ಲ. ತುಂಗಭದ್ರಾ ನದಿ ನೀರನ್ನು ತಾಲೂಕಿನ ಹಲುವಾಗಲು, ಗರ್ಭಗುಡಿ ಬಳಿಯ ಬೃಹತ್ ಓವರ್‌ಹೆಡ್‌ಟ್ಯಾಂಕ್‌ನಲ್ಲಿ ಸಂಗ್ರಹಿಸಿ, ಶುದ್ಧೀಕರಿಸಿ ಕೊಡಲಾಗುತ್ತಿದೆ.

ಹರಪನಹಳ್ಳಿಯ ಹಿರೆಕೇರಿ ಕೆರೆಯಲ್ಲಿ ಜಾಲಿಗೀಡ ಬೆಳೆದಿರುವುದು.

ಕಣವಿ ಸೇರಿ 20 ಗ್ರಾಮಗಳು, ತೆಲಿಗಿ ಸೇರಿ 56 ಹಳ್ಳಿಗಳಿಗೆ, ಹಾರಕನಾಳು ಒಳಗೊಂಡಂತೆ 29 ಹಾಗೂ ಚಿಗಟೇರಿ, ನಿಚ್ಚವ್ವನಹಳ್ಳಿ ಸೇರಿ 105 ಗ್ರಾಮಗಳಿಗೆ ನೀರು ಒದಗಿಸುವ ಯೋಜನೆ ಇದಾಗಿದೆ. ತೆಲಿಗಿ ಹಾಗೂ ಹಾರಕನಾಳು ಮತ್ತಿತರ ಹಳ್ಳಿಗಳಿಗೆ ನೀರು ಸರಬರಾಜಾಗಾತ್ತಿದ್ದು, ಸಮರ್ಪಕ ನಿರ್ವಹಣೆ ಅಗತ್ಯವಿದೆ. ಕಣಿವಿ ಮತ್ತಿರ ಹಳ್ಳಿಗಳಿಗೆ ನೀರು ಪೂರೈಕೆಯಾಗುತ್ತಿದೆಯಾದರೂ ಪೈಪ್‌ಗಳು ಹಳೆಯದಾಗಿವೆ. ಇವುಗಳನ್ನು ದುರಸ್ತಿಗೊಳಿಸುವ ಬದಲು ಜೆಜೆಎಂ ಯೋಜನೆಯಡಿ ಹೊಸ ಪೈಪ್‌ಲೈನ್ ಕಾಮಗಾರಿ ಆರಂಭಗೊಂಡಿದೆ. ಚಿಗಟೇರಿ ಮತ್ತು ಇತರೆ ಹಳ್ಳಿಗಳಿಗೆ ಯೋಜನೆ ಅನುಷ್ಠಾನಕ್ಕೆ ಗುತ್ತಿಗೆದಾರರೊಂದಿಗೆ ಒಪ್ಪಂದವಾಗಿದ್ದು, 2 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.

ಬಾಡಿಗೆಗೆ ಕೊಳವೆಬಾವಿ ಬಳಕೆ
ತಾಲೂಕಿನಲ್ಲಿ 1597 ಕೊಳವೆಬಾವಿಗಳಿದ್ದು, 1432 ದುರಸ್ತಿಗೆ ಬಂದಿವೆ. 165 ಕೊಳವೆ ಬಾವಿಗಳು ಚಾಲ್ತಿಯಲ್ಲಿವೆ. ಗ್ರಾಮೀಣ ಪ್ರದೇಶಗಳಲ್ಲಿ 989 ಕೊಳವೆಬಾವಿಗಳಿದ್ದು, ಈ ಪೈಕಿ 825 ಚಾಲ್ತಿಯಲ್ಲಿದ್ದರೆ, 140 ಕೊಳವೆಬಾವಿಗಳು ವಿಫಲಗೊಂಡಿವೆ. ವಿವಿಧ ಕಾರಣಗಳಿಂದ ಚಿಗಟೇರಿ, ಕೆರೆಗುಡಿಹಳ್ಳಿ, ಇಟ್ಟಿಗುಡಿ, ಕಂಚಿಕೇರಿ 4ನೇವಾರ್ಡ್, ನೀಲಗುಂದ, ತೌಡೂರು ವ್ಯಾಪ್ತಿಯಲ್ಲಿ ಬಾಡಿಗೆ ರೂಪದಲ್ಲಿ ಪಡೆದು ನೀರನ್ನು ಸರಬರಾಜು ಮಾಡಲಾಗುತ್ತಿದೆ. ಇನ್ನು ಜೆಜೆಎಂ ಯೋಜನೆಯಡಿ ಹೊಸದಾಗಿ ಒಟ್ಟು 91 ಓವರ್‌ಹೆಡ್‌ಟ್ಯಾಂಕ್‌ಗಳು 2024ರೊಳಗೆ ನಿರ್ಮಾಣಗಳ್ಳಲಿವೆ. ಜೆಜೆಎಂ ಯೋಜನೆಯ ಭಾಗವಾಗಿ ಓವರ್‌ಹೆಡ್‌ಟ್ಯಾಂಕ್ ನಿರ್ಮಾಣ, ಪೈಪ್‌ಲೈನ್ ಅಳವಡಿಕೆ, ನಲ್ಲಿಗಳ ಜೋಡಣೆ ಕಾಮಗಾರಿ ಪ್ರಗತಿಯಲ್ಲಿದೆ. ಪೂರ್ಣಗೊಂಡ ಗ್ರಾಮಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದ್ದು, ಇದನ್ನು 2024ಕ್ಕೆ ಕೊನೆಗೊಳಿಸಿ ನೀರು ಸರಬರಾಜು ಮಾಡಲು ಇಲಾಖೆ ಮುಂದಾಗುತ್ತಿದೆ.

ಹರಪನಹಳ್ಳಿಯ ಹರಿಹರ ರಸ್ತೆಯ ಆಶ್ರಯ ಕ್ಯಾಂಪ್ ಬಳಿ ಇರುವ ಶುದ್ಧಕುಡಿಯುವ ನೀರಿನ ಘಟಕ ದುರಸ್ಥಿಯಲ್ಲಿರುವುದು.

ಹಾಳಾದ ಆರ್‌ಒ ಘಟಕಗಳು
ತಾಲೂಕಿನಲ್ಲಿ ಪ್ಲೋರೈಡ್ ನೀರು ಹೆಚ್ಚಿದ್ದ ಕಾರಣ ಸರ್ಕಾರ ಗ್ರಾಮೀಣ ಭಾಗದ ಪ್ರದೇಶಗಳಿಗೆ 173 ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ಮಾಣ ಮಾಡಲಾಗಿದೆ. ಪಟ್ಟಣದ ಹರಿಹರ ರಸ್ತೆ ಆಶ್ರಯ ಕಾಲನಿ, ಸಾಳೇರ ಓಣಿ, ಕಂಚಿಕೇರಿ ರಸ್ತೆ, ಮೈಲಾರ ರಸ್ತೆ, ಐ.ಬಿ.ವೃತ್ತ, ಬಣಗಾರಪೇಟೆ ಸೇರಿ 10 ಕಡೆಗಳಲ್ಲಿ ಘಟಕಗಳು ಇವೆಯಾದರೂ ನಿರ್ವಹಣೆ ಕೊರತೆ ಹಾಗೂ ಇತರೆ ಸಮಸ್ಯೆಗಳಿಂದ ನಿರುಪಯುಕ್ತವಾಗಿವೆ.

ಸದ್ಯಕ್ಕೆ ಪಟ್ಟಣಕ್ಕಿಲ್ಲ ತೊಂದರೆ
ಹರಪನಹಳ್ಳಿ ಪಟ್ಟಣಕ್ಕೆ ನದಿ ನೀರು ಮತ್ತು ಕೊಳವೆಬಾವಿ ಸರಬರಾಜಿನಿಂದ ಸದ್ಯಕ್ಕೆ ತೊಂದರೆಯಿಲ್ಲ. ಜನಸಂಖ್ಯೆ ಹೆಚ್ಚಿದ್ದು, ಅದಕ್ಕೆ ಅನುಗುಣವಾಗಿ ನೀರಿನ ಯೋಜನೆಯನ್ನು ಅನುಷ್ಠಾನವಾಗಬೇಕಿದೆ. ಗರ್ಭಗುಡಿ ಗ್ರಾಮದಿಂದ 38 ಕಿ.ಮೀ.ದೂರದಿಂದ ಪಟ್ಟಣದ 27 ವಾರ್ಡ್‌ಗಳಿಗೆ ನದಿನೀರು ಶೇ.80 ಪೂರೈಕೆಯಾಗುತ್ತಿದ್ದು, ಶೇ.20 ಕೊಳವೆಬಾವಿಗಳ ಮೂಲಕ ಸರಬರಾಜಾಗುತ್ತಿದೆ. ಗರ್ಭಗುಡಿ ಬಳಿ ಇರುವ ಜಾಕ್‌ವೆಲ್ 20ವರ್ಷ ಹಳೆಯದು. ಪೈಪ್‌ಗಳು, ಏರ್‌ವಾಲ್ವ್‌ಗಳು ದುರಸ್ತಿಯಲ್ಲಿವೆ. ಪುರಸಭೆ ನಿರ್ವಹಣೆ ಮಾಡುತ್ತಿದ್ದು, ನಗರತ್ಥೋನಾನ ಫೇಸ್ 3 ಮತ್ತು 4ರಲ್ಲಿ ಹೊಸದಾಗಿ ಯೋಜನೆ ರೂಪಿಸಿ ನವೀಕರಿಸಲು ಟೆಂಡರ್ ಪ್ರಕ್ರಿಯೆ ಆಗಿದೆ. ಆದರೆ, ಜನಸಂಖ್ಯೆ ಹೆಚ್ಚುತ್ತಿರುವ ಕಾರಣ 2ನೇ ಹಂತದ ಕುಡಿಯುವ ನೀರಿನ ಯೋಜನೆಗೆ ಈಗಾಗಲೇ ಸರ್ಕಾರಕ್ಕೆ ಡಿಪಿಆರ್ ತಯಾರಿಸಲು ಕುಡಿಯುವ ನೀರಿನ ಇಲಾಖೆಗೆ ಯೋಜನಾ ವರದಿ ಸಲ್ಲಿಸಿದ್ದು ಅನುಷ್ಠಾನಕ್ಕೆ ಅಂತಿಮ ಅಂತದಲ್ಲಿದ್ದು, ಇದು ಪಟ್ಟಣಕ್ಕೆ ಅನಿವಾರ್ಯವಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪೂರ್ಣಗೊಂಡಿದ್ದು, ನೀರನ್ನು ಕೆರೆಗಳಿಗೆ ಸರಬರಾಜು ಮಾಡಲು ಉದ್ಘಾಟನೆಗೆ ಸಿದ್ದಗೊಂಡಿದ್ದು, ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಪೂರ್ಣಗೊಂಡಲ್ಲಿ ತಾಲೂಕಿನಲ್ಲಿ ಅಂತರ್ಜಜಲ ಹೆಚ್ಚಿಸಿಕೊಳ್ಳುವ ಮೂಲಕ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ.

ಹರಪನಹಳ್ಳಿಗೆ ಸರಬರಾಜು ಆಗುವ ತಾಲೂಕಿನ ಗರ್ಭಗುಡಿ ಬಳಿ ಇರುವ ಜಾಕವೆಲ್ ಘಟಕ.
ಕೆರೆ ನೀರು ತುಂಬಿಸುವ ಯೋಜನೆಯಲ್ಲಿ ಪಟ್ಟಣದ 3 ಕೆರೆಗಳಿಗೆ ನದಿ ನೀರು ತುಂಬಿಸಲಾಗುವುದು ಇದರಲ್ಲಿ ಕುಡಿಯುವ ನೀರಿಗಾಗಿಯೇ ಹಿರೇಕೆರಿ ಕೆರೆಯನ್ನು ಮೀಸಲಿಡಲು ಯೋಜಿಸಲಾಗುವುದು. 2ನೇ ಯೋಜನೆ ಅನುಷ್ಠಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಟೆಂಡರ್ ಹಂತದಲ್ಲಿದೆ. ಜೆ.ಜೆ.ಎಂ.ಪೂರ್ಣಗೊಂಡರೆ ಮನೆಗಳಿಗೆ ನೀರು ಸರಬರಾಜು, ಕೆರೆಗಳಿಗೆ ನೀರು ತುಂಬಿಸಿದ ಬಳಿಕ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್ ಪೂರ್ಣಗೊಂಡಲ್ಲಿ ತಾಲೂಕಿನ ನೀರಿನ ಸಮಸ್ಯೆ ಕೊನೆಯಾಗಲಿದೆ.ಜಿ.ಕರುಣಾಕರರೆಡ್ಡಿಹರಪನಹಳ್ಳಿ ಶಾಸಕ
ಹರಪನಹಳ್ಳಿ ತಾಲೂಕಿನ ಶೃಂಗಾರತೋಟ ಗ್ರಾಮದಲ್ಲಿ ಜಲ ಜೀವನ ಮೀಷನ್ ಯೋಜನೆಯಲ್ಲಿ ಮನೆ ಮನೆ ನಲ್ಲಿಯ ಮೂಲಕ ನೀರು ಸರಬರಾಜು ಪ್ರಾಯೋಗಿಕವಾಗಿ ಪರಿಶೀಲಿಸಿರುವುದು.
ಇತರೆ ನಗರ, ಪಟ್ಟಣಕ್ಕೆ ಹೋಲಿಸಿದಲ್ಲಿ ಸದ್ಯಕ್ಕೆ ನಮ್ಮಲ್ಲಿ ನೀರಿನ ಸಮಸ್ಯೆ ಇಲ್ಲ. ಪುರಸಭೆ ನಿರ್ವಹಣೆಯಿರುವುದರಿಂದ ಯಾವುದೇ ತೊಂದರೆ ಇಲ್ಲ. 2ನೇ ಹಂತದ ಯೋಜನೆ ಅನಿರ್ವಾಯವಾಗಿದೆ. ಸಾರ್ವಜನಿಕರು ನದಿ ನೀರನ್ನು ಕಾಯಿಸಿ, ಅರಿಸಿ ಕುಡಿಯಬೇಕು. ನಳಸಂಪರ್ಕಕ್ಕೆ ಅನುಮತಿ ಪಡೆಯಬೇಕು. ವ್ಯರ್ಥ ಮಾಡದೆಯೆ ಪುರಸಭೆಗೆ ಸಹಕರಿಸಬೇಕು.ಎರಗುಡಿ ಶಿವಕುಮಾರಹರಪನಹಳ್ಳಿ ಪುರಸಭೆ ಮುಖ್ಯಾಧಿಕಾರಿ
ತಾಲೂಕಿನಲ್ಲಿ ಎಲ್ಲೆಲ್ಲಿ ನೀರಿನ ಸಮಸ್ಯೆ ಉಂಟಾಗಲಿದೆ ಎನ್ನುವ ಮಾಹಿತಿಯನ್ನು ಸಂಬಂಧಿಸಿದ ಇಲಾಖೆಗಳಿಂದ ವರದಿ ಪಡೆಯಲಾಗಿದೆ. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ವರದಿಯನ್ನು ಜಿಲ್ಲಾಧಿಕಾರಿಗೆ ಕಳಿಸಿಕೊಡಲಾಗುವುದು.ಶಿವಕುಮಾರ ಬಿರಾದಾರಹರಪನಹಳ್ಳಿ ತಹಸೀಲ್ದಾರರ್
ಹರಪನಹಳ್ಳಿಯ ಶಿಕ್ಷಕರ ಕಾಲನಿಯಲ್ಲಿ ನಗರೋತ್ಥಾನ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಟ್ಯಾಂಕ್.
ಬೆಸಿಗೆ ಹಿನ್ನೆಲೆಯಲ್ಲಿ ಗ್ರಾಪಂ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ವಿವಿಧ ಕಾರಣದಿಂದ ನೀರಿನ ಅಭಾವ ಉಂಟಾಗಲಿದೆ. ಈ ಬಗ್ಗೆ ಟಾಸ್ಕ್‌ಪೋರ್ಸ್ ಸಮಿತಿಗೆ ವರದಿ ನೀಡಲಾಗುವುದು. ಸಮಸ್ಯೆಯಾಗದಂತೆ ಮುಂಜಾಗೃತೆ ಕ್ರಮಕೈಗೊಳ್ಳಲು ಪಿಡಿಒಗಳಿಗೆ ಸೂಚಿಸಲಾಗುವುದು.ಕೆ.ಆರ್.ಪ್ರಕಾಶನಾಯ್ಕಹರಪನಹಳ್ಳಿ ತಾಪಂ ಇಒ