ಅನ್ಸಾರ್ ಇನೋಳಿ ಉಳ್ಳಾಲ
ಬಹುನಿರೀಕ್ಷಿತ ಹರೇಕಳ-ಅಡ್ಯಾರ್ ಸೇತುವೆ ಕಾಮಗಾರಿ ಆರಂಭಕ್ಕೆ ದಿನಗಣನೆ ನಡೆಯುತ್ತಿದೆ. ಕಾಮಗಾರಿ ನೀಲಿನಕ್ಷೆ ಸಿದ್ಧಗೊಂಡಿದ್ದು, ಪರಿಕರಗಳು ಈಗಾಗಲೇ ಗ್ರಾಮಕ್ಕೆ ತಲುಪಿವೆ. ನೀರಾವರಿ ಸಚಿವರ ಆಗಮನದ ನಿರೀಕ್ಷೆಯಲ್ಲಿ ಗ್ರಾಮಸ್ಥರಿದ್ದು, ಅದರೊಂದಿಗೆ ಕಾಮಗಾರಿ ಆರಂಭಗೊಳ್ಳಲಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯ ಬಜೆಟ್‌ನಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಅಣೆಕಟ್ಟು ಮತ್ತು ಮೇಲ್ಸೇತುವೆ ನಿರ್ಮಾಣ ಜತೆಗೆ ಪೈಪ್‌ಲೈನ್‌ಗಾಗಿ 226 ಕೋಟಿ ರೂ. ಅನುದಾನ ಘೋಷಿಸಲಾಗಿತ್ತು. ಆರಂಭಿಕ ಹಂತದ ಕಾಮಗಾರಿ 194 ಕೋಟಿ ರೂ. ಅನುದಾನದಲ್ಲಿ ನಡೆಯಲಿದ್ದು, ಗುತ್ತಿಗೆದಾರರಿಗೆ ಎರಡು ವರ್ಷದ ಗಡುವು ನೀಡಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇದು ಸಣ್ಣ ನೀರಾವರಿ ಇಲಾಖೆಯಿಂದ ನಡೆಯಲಿರುವ ರಾಜ್ಯದಲ್ಲೇ ಅತಿ ದೊಡ್ಡ ಯೋಜನೆ ಎನಿಸಿಕೊಳ್ಳಲಿದೆ.
ಯೋಜನೆಯಿಂದ ಬಹು ಲಾಭ: ಯೋಜನೆ ಆರಂಭದಲ್ಲಿದ್ದ ಮೂಲ ಉದ್ದೇಶ ಎಂದರೆ ಉಳ್ಳಾಲ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದಾಗಿತ್ತು. ಆದರೆ ಈಗ ರೂಪಿಸಿರುವ ಯೋಜನೆಯಿಂದ ಎರಡು ಪ್ರಯೋಜನಗಳು ಸ್ಥಳೀಯರಿಗೆ ಲಭಿಸಲಿವೆ. ಹಿಂದಿನಿಂದಲೂ ಹರೇಕಳ, ಪಾವೂರು ಹಾಗೂ ಇನೋಳಿ ಭಾಗದ ಜನ ಮಂಗಳೂರಿಗೆ ಹೋಗಲು ದೋಣಿ ಬಳಸುತ್ತಿದ್ದಾರೆ. ಏಕೆಂದರೆ ರಸ್ತೆ ಪ್ರಯಾಣದಲ್ಲಿ ಒಂದೂವರೆ ಗಂಟೆ ಬೇಕಿದ್ದು, ಜತೆಗೆ ಟ್ರಾಫಿಕ್ ಜಾಮ್, ಧೂಳಿನ ಸಮಸ್ಯೆ ಎದುರಿಸಬೇಕು. ಆದರೆ ದೋಣಿಯಲ್ಲಿ ಕೇವಲ 30 ನಿಮಿಷದಲ್ಲಿ ತಲುಪಬಹುದು.
ಹರೇಕಳ ಮತ್ತು ಪಾವೂರು ನಿವಾಸಿಗಳು ಅಡ್ಯಾರ್ ಮೂಲಕ ಹಾಗೂ ಇನೋಳಿಯವರು ಫರಂಗಿಪೇಟೆ ಮೂಲಕ ಮಂಗಳೂರಿಗೆ ಸಂಚರಿಸುತ್ತಾರೆ. ಅದಲ್ಲದೆ ಇದು ಮೆಲ್ಕಾರ್, ಬಿ.ಸಿ.ರೋಡ್‌ಗೂ ಹತ್ತಿರದ ದಾರಿ. ಈ ಹಿನ್ನೆಲೆಯಲ್ಲಿ ಸೇತುವೆ ಆಗಬೇಕು ಎಂಬ ಕನಸು ಸ್ಥಳೀಯದ್ದಾಗಿತ್ತು. ಅದರಂತೆ ಹರೇಕಳದಲ್ಲಿ ನೀರಿಗಾಗಿ ಅಣೆಕಟ್ಟು, ಜನರ ಸಂಚಾರಕ್ಕೆ ಸೇತುವೆ ಯೋಜನೆ ಕಾರ್ಯಗತಗೊಳ್ಳುವ ಸಮಯ ಸನ್ನಿಹಿತವಾಗಿದೆ. ಇದರಿಂದ ಕ್ಷೇತ್ರದಲ್ಲಿ ಶಾಶ್ವತ ನೀರು ದೊರಕಲಿದ್ದು, 2261.2 ಹೆಕ್ಟೇರ್ ನೀರಾವರಿ ಪ್ರದೇಶವಾಗಲಿದೆ. ಪಾವೂರು, ಹರೇಕಳ, ಪಜೀರು, ಕೊಣಾಜೆ, ಬೆಳ್ಮ, ಮಂಜನಾಡಿ ಸಹಿತ ಇತರ ಗ್ರಾಮದ ಜನರು ಟ್ರಾಫಿಕ್, ಧೂಳು ರಹಿತವಾಗಿ ಸೇತುವೆಯಲ್ಲಿ ಪ್ರಯಾಣಿಸಬಹುದು.
ಹೇಗಿರುತ್ತದೆ ಬ್ರಿಡ್ಜ್ ಕಂ ಡ್ಯಾಂ? ಸೇತುವೆ 520 ಮೀಟರ್ ಉದ್ದವಿರಲಿದ್ದು, 10.6 ಮೀಟರ್ ಎತ್ತರ, 10 ಮೀಟರ್ ಅಗಲ ಇರಲಿದೆ. ಸೇತುವೆ ಎರಡೂ ಕಡೆ 1.25 ಮೀಟರ್ ಅಳತೆಯಲ್ಲಿ ಪಾದಚಾರಿಗಳಿಗೆ ಕಾಲುದಾರಿ ಇರಲಿದೆ. ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ. ಅಣೆಕಟ್ಟೆಯಲ್ಲಿ 4 ಮೀ. ನೀರು ನಿಲ್ಲುವ ವ್ಯವಸ್ಥೆ ಇದ್ದರೂ, ಆರಂಭದಲ್ಲಿ ಎರಡು ಮೀಟರ್‌ನಲ್ಲಿ 18.7 ಕ್ಯೂಬಿಕ್ ನೀರು ನಿಲ್ಲಿಸಲಾಗುವುದು.
ಯೋಜನೆ ಬಗ್ಗೆ ತಿಳಿಸಿದಾಗ ಜನರು ಲೇವಡಿ ಮಾಡಿದ್ದರು. ಈಗ ಟೆಂಡರ್ ಆಗಿದ್ದರೂ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ 30 ವರ್ಷಗಳ ಅವಧಿಗೆ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಮೇಲ್ಸೇತುವೆಯಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ. ಯು.ಟಿ.ಖಾದರ್, ಶಾಸಕ ಉಳ್ಳಾಲ ಭಾಗದಲ್ಲಿ ಹಿಂದಿನಿಂದಲೂ ಕುಡಿಯುವ ನೀರಿನ ಗಂಭೀರ ಸಮಸ್ಯೆಯಿದೆ. ಇದೀಗ ಹರೇಕಳದಲ್ಲಿ ಅಣೆಕಟ್ಟು ನಿರ್ಮಿಸಿ ಕ್ಷೇತ್ರದ ಜನರಿಗೆ ನೀರು ನೀಡುವ ಯೋಜನೆಯಿಂದ ಸಮಸ್ಯೆಗೆ ಪರಿಹಾರದ ಜತೆ ಮೇಲ್ಸೇತುವೆಯಿಂದಾಗಿ ಸಾರ್ವಜನಿಕರಿಗೂ ಅನುಕೂಲ ಆಗಲಿದೆ. ವಿಶ್ವನಾಥ ನಾಯ್ಕ, ಧಾರ್ಮಿಕ ಮುಖಂಡ