ಅನುದಾನವಿಲ್ಲದೆ ಬೀಗ ಹಾಕುವ ಸ್ಥಿತಿಗೆ ಬಂದು ನಿಂತಿರುವ ಇಂದಿರಾ ಕ್ಯಾಂಟೀನ್ಗಳಿಗೆ ಈಗ ನೀರಿನ ಸಂಕಷ್ಟ ಎದುರಾಗಿದೆ. ಜಲಮಂಡಳಿಗೆ ಒಟ್ಟು 3.58 ಕೋಟಿ ರೂ. ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವುದು ಇದಕ್ಕೆ ಕಾರಣ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಗರದ ಎಲ್ಲ ವಾರ್ಡ್ಗಳಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 174 ಕ್ಯಾಂಟೀನ್ಗಳ ಪೈಕಿ 146 ಕ್ಯಾಂಟೀನ್ಗಳಿಗೆ ಜಲಮಂಡಳಿ ಕಾವೇರಿ ನೀರು ಸರಬರಾಜು ಮಾಡುತ್ತಿದೆ. ಆದರೆ, ಈವರೆಗೂ ನೀರಿನ ಬಿಲ್ ಪಾವತಿಯಾಗಿಲ್ಲ.
ಅನುದಾನ ಇಲ್ಲದೆ ಸೊರಗಿದ ಕ್ಯಾಂಟೀನ್: 174 ಸ್ಥಿರ ಮತ್ತು 18 ಮೊಬೈಲ್ ಇಂದಿರಾ ಕ್ಯಾಂಟೀನ್ಗಳಿವೆ. 2017-18ರಲ್ಲಿ 4.6 ಕೋಟಿ ಮಂದಿ, 2018-19ರಲ್ಲಿ 7.70 ಕೋಟಿ ಹಾಗೂ 2019-20ರಲ್ಲಿ 2.70 ಕೋಟಿ ಜನ ಕ್ಯಾಂಟೀನ್ನಲ್ಲಿ ಆಹಾರ ಸೇವಿಸಿದ್ದಾರೆ.
ಯೋಜನೆ ಅನುಷ್ಠಾನಕ್ಕೆ ಸರ್ಕಾರ 2017-18ರಲ್ಲಿ 100 ಕೋಟಿ ರೂ. ನೀಡಿತ್ತು. ಆದರೆ, ಅನುಷ್ಠಾನದ ವೇಳೆ ಬಿಬಿಎಂಪಿ ಹೆಚ್ಚುವರಿಯಾಗಿ 24.37 ಕೋಟಿ ರೂ. ವ್ಯಯಿಸಿದೆ. 2018-19ರಲ್ಲಿ 115 ಕೋಟಿ ರೂ. ಬಿಡುಗಡೆ ಮಾಡಿತ್ತಾದರೂ 145 ಕೋಟಿ ರೂ. ವೆಚ್ಚವಾಗಿದೆ. ಉಳಿದ 21.67 ಕೋಟಿ ರೂ. ಬಿಬಿಎಂಪಿಯೇ ಭರಿಸಿದೆ.
ಗುತ್ತಿಗೆದಾರರದ್ದೇ ಹೊಣೆಗಾರಿಕೆ
ನೀರು, ವಿದ್ಯುತ್ ಸೇರಿ ಯಾವುದೇ ಸೌಲಭ್ಯ ಪಡೆದು ಕೊಂಡಿದ್ದರೂ ಗುತ್ತಿಗೆದಾರರೇ ನಿರ್ವಹಿಸಬೇಕು. ಟೆಂಡರ್ನ ಷರತ್ತಿನ ಪ್ರಕಾರ, ಕ್ಯಾಂಟೀನ್ ನಿರ್ವಹಣೆಗೆ ಸಂಬಂಧಿಸಿದ ಬಿಲ್ಗಳನ್ನು ಅವರೇ ಪ್ರತಿ ತಿಂಗಳು ಪಾವತಿಸಬೇಕು. ಈ ಹಿನ್ನೆಲೆಯಲ್ಲಿ ಬಿಲ್ ಪಾವತಿಸುವಂತೆ ಗುತ್ತಿಗೆದಾರರಿಗೆ ಜಲಮಂಡಳಿ ಅಧಿಕಾರಿಗಳು ಸಾಕಷ್ಟು ಬಾರಿ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ನೀರಿನ ಸಂಪರ್ಕ ಕಡಿತಗೊಳಿಸಲು ನಿರ್ಧರಿಸಿತ್ತು. ಆದರೆ, ಸಾಮಾನ್ಯ ಜನರಿಗೆ ತೊಂದರೆಯಾಗುವ ಕಾರಣ ಹಿಂದೇಟು ಹಾಕುತ್ತಿದೆ.
ಏಕಾಏಕಿ ನೀರಿನ ಸಂಪರ್ಕ ಕಡಿತಗೊಳಿಸಿದರೆ ಜನಸಾಮಾನ್ಯರಿಗೆ ತೊಂದರೆ ಯಾಗುತ್ತದೆ. ಹಾಗಾಗಿ ಮತ್ತೊಮ್ಮೆ ಬಿಬಿಎಂಪಿ ಗಮನಕ್ಕೆ ತರಲಾ ಗುವುದು. ಆಗಲೂ ಹಣ ಪಾವತಿಸದಿದ್ದರೆ ನೀರಿನ ಸಂಪರ್ಕ ಕಡಿತಗೊಳಿಸುತ್ತೇವೆ. | ಬಿ.ಸಿ. ಗಂಗಾಧರ್ ಜಲಮಂಡಳಿ ಮುಖ್ಯ ಇಂಜಿನಿಯರ್ ನಮ್ಮ ಅಧಿಕಾರಿಗಳು ಟೆಂಡರ್ ಪ್ರಕ್ರಿಯೆ ನಡೆಸಲು ಹೆಚ್ಚಿನ ಆಸಕ್ತಿ ತೋರುತ್ತಾರೆ. ಆದರೆ, ಮುಂದಿನ ಖರ್ಚು ವೆಚ್ಚ ನಿಭಾಯಿಸುವ ವಿಷಯದ ಬಗ್ಗೆ ಯೋಚಿಸುವುದಿಲ್ಲ. ಅವರ ಈ ಬೇಜವಾಬ್ದಾರಿ ನಡವಳಿಕೆಯಿಂದ ಬಿಬಿಎಂಪಿಗೆ ಕೆಟ್ಟ ಹೆಸರು ಬರುತ್ತಿದೆ. ಕೂಡಲೇ ಈ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು. | ಗೌತಮ್ ಕುಮಾರ್ ಮೇಯರ್
| ವಿಜಯ್ ಮಡಿವಾಳ ಬೆಂಗಳೂರು