ಹನೂರು : ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಮಂಗಳವಾರ ಪಟ್ಟಣದ 13ನೇ ವಾರ್ಡಿನ ಆರ್.ಎಸ್. ದೊಡ್ಡಿ ಆದರ್ಶ ಬಡಾವಣೆಯ ನಿವಾಸಿಗಳು ಪಟ್ಟಣ ಪಂಚಾಯಿತಿ ಕಚೇರಿಗೆ ಆಗಮಿಸಿ ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
ಈ ವೇಳೆ ನಿವಾಸಿಗಳು ಮಾತನಾಡಿ, ಬಡಾವಣೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಕುಟುಂಬಗಳಿವೆ. ಆದರೆ ಕಳೆದ 15 ದಿನಗಳಿಂದ ನಲ್ಲಿಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ಕುಡಿಯುವ ನೀರಿಗಾಗಿ ಇತರೆ ಬಡಾವಣೆಗಳಿಗೆ ಬಿಂದಿಗೆ ಹಿಡಿದು ಅಲೆಯುವಂತಾಗಿದೆ. ಜತೆಗೆ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಹಣ ನೀಡಿ ನೀರನ್ನು ಹೊತ್ತು ತರಬೇಕಿದೆ. ಇದರಿಂದ ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದೇವೆ. ಈ ಬಗ್ಗೆ ನೀರುಗಂಟಿಯನ್ನು ವಿಚಾರಿಸಿದರೆ ಇಲ್ಲಸಲ್ಲದ ಕಾರಣ ಹೇಳುತ್ತಾರೆ. ಇತ್ತ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಸಂಬಂಧಪಟ್ಟ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಕುಡಿಯುವ ನೀರಿಗಾಗಿ ನಿತ್ಯ ಪರದಾಡುವಂತಾಗಿದೆ. ಹಾಗಾಗಿ ಬೇಸತ್ತು ಪ್ರತಿಭಟನೆಗೆ ಮುಂದಾಗಿದ್ದೇವೆ. ಆದ್ದರಿಂದ ಸಂಬಂಧಪಟ್ಟವರು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಪಂ ಕಚೇರಿಯಲ್ಲಿ ಮುಖ್ಯಾಧಿಕಾರಿ ಮಹೇಶ್ ಕುಮಾರ್ ಉಪಸ್ಥಿತರಿಲ್ಲದ ಹಿನ್ನೆಲೆಯಲ್ಲಿ
ಆಡಳಿತಾಧಿಕಾರಿಯೂ ಆದ ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ಸ್ಥಳಕ್ಕಾಗಮಿಸಿ ಸಮಸ್ಯೆ ಆಲಿಸಿದರು. ಕೂಡಲೇ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನಕಾರರು ಕಚೇರಿಯಿಂದ ಹಿಂತಿರುಗಿದರು.
ಪಪಂ ಮಾಜಿ ಅಧ್ಯಕ್ಷ ಮುದ್ದುಗಾಮ ಶೆಟ್ಟಿ, ಮುಖಂಡ ಮಾದಪ್ಪ, ನಿವಾಸಿಗಳಾದ ಅಯ್ಯಮ್ಮ, ರಂಗಮ್ಮ, ರತ್ನಮ್ಮ, ರೇವಮ್ಮ, ನೀಲಮ್ಮ, ಚಂದ್ರಮ್ಮ, ಸುಮಾ, ಜಯಮ್ಮ, ಸುಲೋಚನಾ, ಪ್ರೇಮಾ ಇತರರು ಇದ್ದರು.