ಜಿಲ್ಲೆ

ನೇರೋಳ್ತಡ್ಕ ನೀರಿನ ಸಮಸ್ಯೆಗೆ ಮುಕ್ತಿ

ಸೌಮ್ಯ ಆರ್

ಪುತ್ತೂರು ಗ್ರಾಮಾಂತರ: ಮುಂಡೂರು ಗ್ರಾಪಂ ವ್ಯಾಪ್ತಿಯ ಸರ್ವೆ ಗ್ರಾಮದ ನೇರೋಳ್ತಡ್ಕ ಪರಿಸರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಲಭಿಸಿದೆ. ಇಲ್ಲಿನ ಜನತೆ 3 ತಿಂಗಳಿನಿಂದ ಎದುರಿಸುತ್ತಿದ್ದ ನೀರಿನ ಸಮಸ್ಯೆಗೆ ಗ್ರಾಪಂ ವತಿಯಿಂದ ಸ್ಪಂದನೆ ಸಿಕ್ಕಿದೆ.

ನೇರೋಳ್ತಡ್ಕ ವ್ಯಾಪ್ತಿಯಲ್ಲಿ 3 ತಿಂಗಳಿನಿಂದ ಜನತೆ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದರೂ, ಗ್ರಾಪಂ ಅಧ್ಯಕ್ಷರು ಭೇಟಿ ಕೊಟ್ಟಿಲ್ಲ. ಪಿಡಿಒ ಬಂದು ಪರಿಶೀಲನೆ ನಡೆಸಿದ್ದರೂ ಕ್ರಮ ಕೈಗೊಂಡಿಲ್ಲ. ಈ ಭಾಗದ ಗ್ರಾಪಂ ಸದಸ್ಯರು ಕುಡಿಯುವ ನೀರಿನ ಸಮಸ್ಯೆಯನ್ನು ಪಂಚಾಯಿತಿ ಆಡಳಿತ ವ್ಯವಸ್ಥೆ ಗಮನಕ್ಕೆ ತಂದಿದ್ದರೂ ಈ ವಿಚಾರ ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಇತ್ತೀಚೆಗೆ ಪ್ರತಿಭಟನೆ ನಡೆಸಿದರು. ಬಳಿಕ ನಡೆದ ಮುಂಡೂರು ಗ್ರಾಪಂ ಸಭೆಯಲ್ಲಿ ಈ ವಿಚಾರವಾಗಿ ಚರ್ಚೆಯಾಗಿತ್ತು. ನೇರೋಳ್ತಡ್ಕದಲ್ಲಿ ತಲೆದೋರಿದ್ದ ನೀರಿನ ಸಮಸ್ಯೆ ಕುರಿತು ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿತ್ತು.

ಈ ಎಲ್ಲ ಬೆಳವಣಿಗೆ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿದ್ದ ಮುಂಡೂರು ಗ್ರಾಪಂ ಆಡಳಿತ ಕುಡಿಯಲು ಯೋಗ್ಯವಲ್ಲ ಎಂದು ವರದಿ ನೀಡಲಾಗಿದ್ದ ಕೊಳವೆಬಾವಿಯನ್ನು ಪಂಚಾಯಿತಿ ವತಿಯಿಂದ ಫ್ಲಶಿಂಗ್ ಮಾಡಿ, ಹಳೆಯ ಕಬ್ಬಿಣದ ಪೈಪ್ ತೆಗೆದು ಹೊಸ ಪೈಪ್ ಅಳವಡಿಸುವ ಕಾರ್ಯ ಮಾಡಿದೆ. ಹೊಸ ಪೈಪ್ ಅಳವಡಿಸಿದ ನಂತರ ನೀರಿನ ಗುಣಮಟ್ಟ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಈ ನೀರನ್ನು ಪರೀಕ್ಷಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕುಡಿಯಲು ಯೋಗ್ಯ ಎಂದು ವರದಿ ನೀಡಿದೆ. ಹಾಗಾಗಿ ಈ ಕೊಳವೆಬಾವಿ ನೀರನ್ನು ಪರಿಸರದ ಮನೆಗಳಿಗೆ ಕುಡಿಯುವ ನೀರಿಗಾಗಿ ಸರಬರಾಜು ಮಾಡಲಾಗುತ್ತಿದೆ. ಇದರಿಂದಾಗಿ ಇಲ್ಲಿನ ಜನರ ಕುಡಿಯುವ ನೀರಿನ ಭವಣೆ ನಿವಾರಣೆಯಾಗಿದೆ.