ಜಿಲ್ಲೆ

ನೇರೋಳ್ತಡ್ಕದಲ್ಲಿ ನೀರಿಗಾಗಿ ಪರದಾಟ : ಸ್ಥಳೀಯರಿಗೆ ತೊಂದರೆ ಸಮಸ್ಯೆಗೆ ಸ್ಪಂದಿಸದ ಸ್ಥಳೀಯಾಡಳಿತ

ಸೌಮ್ಯ ಆರ್

ಶಶಿ ಕುತ್ಯಾಳ, ಈಶ್ವರಮಂಗಲ

ಮುಂಡೂರು ಗ್ರಾಪಂ ವ್ಯಾಪ್ತಿಯ ಸರ್ವೆ ಗ್ರಾಮದ ನೇರೋಳ್ತಡ್ಕ ಪರಿಸರದಲ್ಲಿರುವ ಒಂದು ಕೊಳವೆ ಬಾವಿಯಲ್ಲಿನ ನೀರು ಕುಡಿಯಲು ಯೋಗ್ಯವಲ್ಲ ಎಂದು ಪ್ರಯೋಗಾಲಯದ ವರದಿ ಬಂದಿದೆ. ಇನ್ನೊಂದು ಕೊಳವೆ ಬಾವಿ ನೀರು ಖಾಲಿಯಾಗಿದೆ. ಇದರಿಂದಾಗಿ ಇಲ್ಲಿನ 50 ಮನೆಯವರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಸ್ಥಳೀಯಾಡಳಿತ ವ್ಯವಸ್ಥೆ ನೀರಿನ ಸಮಸ್ಯೆ ಬಗ್ಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.

50ರಷ್ಟು ಮನೆಗಳಿರುವ ನೇರೋಳ್ತಡ್ಕ ಪರಿಸರದಲ್ಲಿ ಕುಡಿಯುವ ನೀರು ಸರಬರಾಜಿಗಾಗಿ ಎರಡು ಕೊಳವೆ ಬಾವಿಗಳನ್ನು ಬಳಕೆ ಮಾಡಲಾಗುತ್ತಿತ್ತು. ಎರಡು ಕೊಳವೆ ಬಾವಿಗಳ ಪೈಕಿ ಒಂದರಲ್ಲಿ ಬರುವ ನೀರಿನ ಗುಣಮಟ್ಟ ಸರಿಯಿಲ್ಲ ಎಂದು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ವರದಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಆ ಕೊಳವೆ ಬಾವಿ ನೀರು ಬಳಕೆ ಮಾಡಲಾಗುತ್ತಿಲ್ಲ. ಅಲ್ಲಿರುವ ಮತ್ತೊಂದು ಕೊಳವೆ ಬಾವಿಯಲ್ಲಿನ ನೀರು ಖಾಲಿಯಾಗಿರುವುದರಿಂದ ಅದು ನಿರುಪಯುಕ್ತವಾಗಿದೆ. ಇದರಿಂದಾಗಿ ನೇರೋಳ್ತಡ್ಕ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಎದುರಾಗಿದೆ.

ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಕ್ರಿಯಾ ಯೋಜನೆ ಆಗುತ್ತಿದೆ. ಅನುದಾನ ಇರಿಸಿ ಸಮಸ್ಯೆಗೆ ಸ್ಪಂದಿಸಬೇಕಾಗಿದ್ದ ಮುಂಡೂರು ಗ್ರಾಪಂ ಆಡಳಿತ ವ್ಯವಸ್ಥೆ ಯಾವುದೇ ಕ್ರಿಯಾ ಯೋಜನೆ ಮಾಡಿಲ್ಲ ಎಂದು ಆರೋಪಿಸಿರುವ ಅಲ್ಲಿನ ಕಾಂಗ್ರೆಸ್ ಬೆಂಬಲಿತ ಸದಸ್ಯರು, ತಕ್ಷಣ ನೇರೋಳ್ತಡ್ಕ ಪರಿಸರಕ್ಕೆ ಭೇಟಿ ನೀಡಿ ನೀರಿನ ಸಮಸ್ಯೆ ಕುರಿತು ಪರಿಶೀಲನೆ ನಡೆಸಬೇಕು. ಕ್ರಿಯಾ ಯೋಜನೆಯಲ್ಲಿ ಹಣವಿಟ್ಟು ತಕ್ಷಣ ಹೊಸ ಕೊಳವೆ ಬಾವಿ ಕೊರೆಸಿ ಜನರ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಗ್ರಾಮಸ್ಥರಿಂದ ಪ್ರತಿಭಟನೆ

ನೇರೋಳ್ತಡ್ಕ ಪರಿಸರದಲ್ಲಿ 3 ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆಗಳಿದ್ದರೂ ಗ್ರಾಪಂ ಆಡಳಿತ ವ್ಯವಸ್ಥೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಮಹಿಳೆಯರು ಸೇರಿದಂತೆ 25 ಮಂದಿ ಕುಡಿಯುವ ನೀರಿನ ಫಲಾನುಭವಿಗಳು ಸೋಮವಾರ ಖಾಲಿ ಕೊಡಪಾನ, ಪಾತ್ರಗಳ ಪ್ರದರ್ಶನದೊಂದಿಗೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದಾರೆ. ಸಮಸ್ಯೆಗೆ ಸ್ಪಂದಿಸದ ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣ ಹೊಸ ಕೊಳವೆ ಬಾವಿ ಕೊರೆದು ನೀರಿನ ಸಮಸ್ಯೆ ನಿವಾರಿಸಬೇಕು. ಇಲ್ಲದಿದ್ದಲ್ಲಿ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ

ನೇರೋಳ್ತಡ್ಕ ವ್ಯಾಪ್ತಿಯಲ್ಲಿ 3 ತಿಂಗಳಿನಿಂದ ಜನತೆ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದರೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಭೇಟಿ ಕೊಟ್ಟಿಲ್ಲ, ಪಿಡಿಒ ಬಂದು ಪರಿಶೀಲನೆ ನಡೆಸಿದ್ದರೂ ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಂಡಿಲ್ಲ. ಈ ಭಾಗದ ಗ್ರಾಪಂ ಸದಸ್ಯರು ಕುಡಿಯುವ ನೀರಿನ ಸಮಸ್ಯೆಯನ್ನು ಪಂಚಾಯಿತಿ ಆಡಳಿತ ವ್ಯವಸ್ಥೆ ಗಮನಕ್ಕೆ ತಂದಿದ್ದರೂ ಅವರು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂಬುವುದು ಅಲ್ಲಿನ ಜನತೆಯ ಅಳಲು.

ಪಂಚಾಯಿತಿ ವತಿಯಿಂದ ಅನುದಾನವಿರಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅವಕಾಶವಿದೆ. ಮುಂಡೂರು ಗ್ರಾಪಂ ನಿರ್ಲಕ್ಷೃದಿಂದಾಗಿ 50 ಮನೆಗಳಿರುವ ನೇರೋಳ್ತಡ್ಕ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಸಮಸ್ಯೆಗೆ ಸ್ಪಂದನೆ ಸಿಗದಿದ್ದರೆ ಪಂಚಾಯಿತಿ ಎದುರು ಇಲ್ಲಿನ ಕುಡಿಯುವ ನೀರಿನ ಫಲಾನುಭವಿಗಳೊಂದಿಗೆ ವಾರ್ಡ್ ಸದಸ್ಯರು ಸೇರಿಕೊಂಡು ಪಂಚಾಯಿತಿ ಎದುರು ಧರಣಿ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ. ಮಹಮ್ಮದ್ ಅಲಿ, ಮುಂಡೂರು ಪಂಚಾಯಿತಿ ಸ್ಥಳೀಯ ಸದಸ್ಯ 3 ತಿಂಗಳಿನಿಂದ ಸರಿಯಾಗಿ ನೀರು ಬರುತ್ತಿಲ್ಲ. 3-4 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದ್ದು, ನಾವೇನು ಮಾಡಬೇಕು. ಈ ಬಗ್ಗೆ ಪಂಚಾಯಿತಿಯಲ್ಲಿ ಕೇಳಿದರೆ ನೀವು ನೀರಿನ ಬಿಲ್ ಪಾವತಿಸುತ್ತಿಲ್ಲ, ಪಂಪ್ ಸರಿಯಿಲ್ಲ, ಕೇಬಲ್ ಸರಿಯಿಲ್ಲ ಎಂಬ ಉತ್ತರ ಸಿಗುತ್ತಿದೆ. ಆದರೆ ನಾವೆಲ್ಲ ನೀರಿನ ಬಿಲ್ ಪಾವತಿಸಿದ್ದೇವೆ. 5 ವರ್ಷಗಳಿಂದ ಇದೇ ಕೊಳವೆ ಬಾವಿ ನೀರನ್ನು ಕುಡಿಯುತ್ತಾ ಬಂದಿದ್ದೇವೆ. ಈಗ ನೀರು ವಿಷಯುಕ್ತ ಆಗಿದೆ ಎನ್ನುವವರು ಕೊಳವೆಬಾವಿಯ ಎಂ.ಎಸ್.ಪೈಪ್ ತುಕ್ಕು ಹಿಡಿದಿರುವುದನ್ನು, ಆಯಿಲ್ ಸೋರಿಕೆ ಆಗುತ್ತಿರುವುದನ್ನು ಮೊದಲು ನೋಡಬೇಕು. ಜಯಂತ ಶೆಟ್ಟಿ, ಸ್ಥಳೀಯ ನಿವಾಸಿ