water tanker 
ಜಿಲ್ಲೆ

43 ಗ್ರಾಪಂಗಳಲ್ಲಿ ಕುಡಿವ ನೀರಿಗೆ ಬರ

ಶಿವರಾಜ.ಎಂ

*ಜಿಲ್ಲಾ ಪಂಚಾಯಿತಿಯಿಂದ ಮ್ಯಾಫಿಂಗ್
*ಪ್ರತಿ ತಾಲೂಕಿಗೆ 25 ಲಕ್ಷ ರೂ.ಹೆಚ್ಚಿನ ಅನುದಾನ

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಜಿಲ್ಲೆಯ 103 ಗ್ರಾಮ ಪಂಚಾಯಿತಿಗಳ ಪೈಕಿ 43 ಪಂಚಾಯಿತಿಗಳ ಸುಮಾರು 68 ಗ್ರಾಮಗಳಲ್ಲಿ ಮುಂದಿನ ದಿನಗಳಲ್ಲಿ ಕುಡಿವ ನೀರಿಗೆ ತೀವ್ರ ಸಂಕಷ್ಟ ಎದುರಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಮ್ಯಾಫಿಂಗ್ ಮಾಡಿದ್ದು ಸಮಸ್ಯೆ ಪರಿಹಾರಕ್ಕೆ ರೂಪುರೇಷೆ ಸಿದ್ಧಪಡಿಸಿದೆ.
ನೀರಿನ ಸಮಸ್ಯೆ ಬಾರದಂತೆ ಮುಂಜಾಗ್ರತ ಕ್ರಮವಾಗಿ ಜಿಲ್ಲಾ ಪಂಚಾಯಿತಿ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ವೇ ನಡೆಸಿದ್ದು, ಪ್ರಸ್ತುತ 43 ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿವ ನೀರಿನ ಸಮಸ್ಯೆ ಬಿಗಡಾಯಿಸುವ ಸಾಧ್ಯತೆ ಬಗ್ಗೆ ವರದಿ ಸಿದ್ಧಪಡಿಸಿದೆ.
ಜಿಲ್ಲಾ ಪಂಚಾಯಿತಿ ಗುರುತಿಸಿರುವ ಗ್ರಾಪಂ ವ್ಯಾಪ್ತಿಯ ಆ ಗ್ರಾಮಗಳ ಸರಹದ್ದಿನಲ್ಲಿನ ರೈತರ ಕೊಳವೆಬಾವಿಗಳ ಮೂಲಕ ನೀರು ಪೂರೈಸಲು ಒಡಂಬಡಿಕೆ ಮಾಡಿಕೊಂಡಿದೆ. ನೀರು ಕೊಡುವ ರೈತರಿಗೆ ತಿಂಗಳಿಗೆ 18 ಸಾವಿರ ರೂಪಾಯಿ ನಿಗದಿಪಡಿಸಿದ್ದು, ಕೊಳವೆಬಾವಿಗಳಿಂದ ನೀರು ಪಡೆದು ಟ್ಯಾಂಕರ್‌ಗಳ ಪೂರೈಸಲು ಸಿದ್ಧತೆ ಮಾಡಿಕೊಂಡಿದೆ. ಅಲ್ಲದೆ ಕೆಲವು ಕಡೆಗಳಲ್ಲಿ ಪೈಪ್‌ಲೈನ್ ಅಳವಡಿಸಿ ಬೋರ್‌ವೆಲ್‌ಗಳಿಂದ ನೇರವಾಗಿ ಪೈಪ್‌ಗಳ ಮೂಲಕವೂ ಪೂರೈಸಲು ಚಿಂತನೆ ನಡೆಸಿದೆ.
ಕಂಟ್ರೋಲ್ ರೂಂ: ಜಿಲ್ಲೆಯ ನಾಲ್ಕೂ ತಾಲೂಕುಗಳಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಭವನದಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದ್ದು, ಸಹಾಯವಾಣಿ ಸಂಖ್ಯೆ 080-22221050ಗೆ ಕರೆ ಮಾಡಿ ದೂರು ನೀಡಿದ ಸ್ಥಳಕ್ಕೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಬಂದು ನೀರಿನ ಸಮಸ್ಯೆಗೆ ಪರಿಹಾರ ನೀಡುವರು. ಪ್ರಸ್ತುತ ಪರಿಸ್ಥಿತಿಯಲ್ಲಿ ಕುಡಿವ ನೀರಿನ ಸಮಸ್ಯೆ ತೀರ ಬಿಗಡಾಯಿಸಿಲ್ಲದಿದ್ದರೂ ಮುಂದಿನ ಎರಡು ತಿಂಗಳ ಅವಧಿಯಲ್ಲಿ ಪರಿಸ್ಥಿತಿ ನಿಭಾಯಿಸಲು ಜಿಪಂ ಸನ್ನದ್ಧವಾಗಿದೆ.

25 ಲಕ್ಷ ರೂ.ಹೆಚ್ಚುವರಿ ಅನುದಾನ
ರಾಜ್ಯ ಸರ್ಕಾರ ಬರ ನಿರ್ವಹಣೆಗಾಗಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಖಾತೆಗೆ ಹಣ ಬಿಡುಗಡೆ ಮಾಡಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಆರ್‌ಡಿಪಿಆರ್‌ನಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 25 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ಆಯಾ ತಾಲೂಕಿನ ಶಾಸಕರು ಸೂಚಿಸಿದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿವ ನೀರಿನ ನಮಸ್ಯೆ ಪರಿಹಾರಕ್ಕೆ ಹಣ ವಿನಿಯೋಗಿಸಲು ಜಿಪಂ ತಯಾರಿ ನಡೆಸಿದೆ. ಜಿಲ್ಲಾಧಿಕಾರಿ ಖಾತೆಯಲ್ಲಿರುವ ಹಣದಲ್ಲಿ ಟ್ಯಾಂಕರ್ ನೀರು ಪೂರೈಕೆಗೆ ಕ್ರಮಕೈಗೊಳ್ಳಬಹುದಾಗಿದ್ದು, ಜಿಪಂ ಹೆಚ್ಚುವರಿ ಅನುದಾನದಲ್ಲಿ ಕೆಟ್ಟುಹೋದ ಬೋರ್‌ವೆಲ್‌ಗಳ ರಿಪೇರಿ ಹಾಗೂ ನೀರಿನ ಸೆಲೆ ಇರುವ ಕಡೆ ಹೊಸದಾಗಿ ಬೋರ್‌ವೆಲ್ ಕೊರೆಯಲು ಅವಕಾಶವಿದೆ. ಇದರ ಜತೆಗೆ ಸರ್ಕಾರದಿಂದ 80 ಲಕ್ಷ ರೂ.ಬಿಡುಗಡೆಯಾಗಲಿದ್ದು, ಇದಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಜಿಪಂ ತಿಳಿಸಿದೆ.

ಟ್ಯಾಂಕರ್‌ಗಳಿಗೆ ಟೆಂಡರ್
ಖಾಸಗಿ ಟ್ಯಾಂಕರ್ ಮಾಲೀಕರಿಗೆ ಟೆಂಡರ್ ಕರೆಯಲಾಗುತ್ತಿದ್ದು, ಕಡಿಮೆಗೆ ಒಪ್ಪುವವರಿಗೆ ಟೆಂಡರ್ ನೀಡಲು ಜಿಪಂ ಯೋಜನೆ ರೂಪಿಸಿದೆ. ಸುಮಾರು 5 ಸಾವಿರ ಲೀಟರ್ ಟ್ಯಾಂಕರ್‌ಗಳಿಗೆ 600 ರೂಪಾಯಿ ನಿಗದಿಪಡಿಸಲು ಚಿಂತನೆ ನಡೆದಿದೆ.

ವಶಕ್ಕೆ ಪಡೆಯುವ ಹಕ್ಕಿದೆ

ಖಾಸಗಿ ಕೊಳವೆಬಾವಿಗಳ ಮಾಲೀಕರು ಹಾಗೂ ಖಾಸಗಿ ನೀರಿನ ಟ್ಯಾಂಕರ್ ಮಾಲೀಕರ ಮನವೊಲಿಸಿ ಸಮಸ್ಯೆ ಇರುವ ಕಡೆ ನೀರು ಪೂರೈಸುವ ಕಸರತ್ತು ನಡೆಸುತ್ತಿರುವ ಜಿಪಂ ಒಂದು ವೇಳೆ ಕೊಳವೆಬಾವಿ ಮಾಲೀಕರು ಅಥವಾ ಟ್ಯಾಂಕರ್ ಮಾಲೀಕರು ಇದಕ್ಕೆ ಸ್ಪಂದಿಸದಿದ್ದರೆ ಅಂಥ ಕೊಳವೆಬಾವಿ ಅಥವಾ ಟ್ಯಾಂಕರ್‌ಗಳನ್ನು ವಶಕ್ಕೆ ಪಡೆಯುವ ಅಧಿಕಾರ ಜಿಪಂಗಿದೆ.


ಬರಗಾಲ ನಿರ್ವಹಣೆಗಾಗಿಯೇ ಜಿಲ್ಲಾಧಿಕಾರಿ ಖಾತೆಯಲ್ಲಿ ಹಣ ಮೀಸಲಿಡಲಾಗಿದೆ. ಇದರ ಜತೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 25 ಲಕ್ಷ ರೂಪಾಯಿ ಹಣ ಬಿಡುಗಡೆಯಾಗಿದ್ದು, ಎಲ್ಲೆಲ್ಲಿ ನೀರಿನ ಸಮಸ್ಯೆ ತಲೆದೋರುತ್ತದೋ ಅಲ್ಲಿಗೆ ಈ ಹಣ ವಿನಿಯೋಗಿಸಲಾಗುವುದು. ಪ್ರಸ್ತುತ ಕುಡಿವ ನೀರಿನ ಸಮಸ್ಯೆ ತೀವ್ರತರವಾಗಿಲ್ಲ. ಆದರೂ ಜಿಪಂ ಪೂರ್ವ ಸಿದ್ಧತೆ ಕೈಗೊಂಡಿದೆ.

ಕೆ.ಎನ್.ಅನುರಾಧಾ, ಜಿಲ್ಲಾ ಪಂಚಾಯಿತಿ ಸಿಇಒ

ಮೊದಲ ಹಂತದಲ್ಲಿ ಜಿಲ್ಲೆಯ 103 ಗ್ರಾಪಂಗಳ ಪೈಕಿ 43 ಪಂಚಾಯಿತಿಗಳ ಸುಮಾರು 68 ಗ್ರಾಮಗಳಲ್ಲಿ ಮುಂದಿನ ದಿನಗಳಲ್ಲಿ ಕುಡಿವ ನೀರಿನ ಸಮಸ್ಯೆ ಬಿಗಡಾಯಿಸಬಹುದೆಂದು ವರದಿ ಸಿದ್ಧಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಖಾಸಗಿ ಕೊಳವೆಬಾವಿಗಳ ಮೂಲಕ ಅಂತಹ ಪರಿಸ್ಥಿತಿಯಲ್ಲಿ ಕುಡಿವ ನೀರು ಪೂರೈಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಅದೇ ರೀತಿ ಖಾಸಗಿ ಟ್ಯಾಂಕರ್‌ಗಳ ಟೆಂಡರ್ ಕರೆದು ಗ್ರಾಮಗಳಿಗೆ ನೀರು ಪೂರೈಸಲು ಕ್ರಮಕೈಗೊಳ್ಳಲು ಚಿಂತನೆ ನಡೆಸಲಾಗಿದೆ.
ಟಿ.ಕೆ.ರಮೇಶ್, ಉಪಕಾರ್ಯದರ್ಶಿ ಜಿಪಂ