ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಆರಂಭಗೊಳ್ಳುವ ಶುದ್ಧ ಕುಡಿವ ನೀರಿನ ಘಟಕಗಳು ನಿರ್ವಹಣೆ ಕೊರತೆ ಎದುರಿಸುತ್ತಿರುವುದು ಸಾಮಾನ್ಯ ಸಂಗತಿಯಾಗಿ ಹೋಗಿದೆ. ನಿರ್ವಹಣೆ ಹೊತ್ತವರು ‘ಬಿಲ್’ ಪಡೆದು ಜೇಬು ತುಂಬಿಸಿಕೊಳ್ಳುತ್ತಿದ್ದರೆ ಜನರು ಖಾಲಿ ಕೊಡ ಹಿಡಿದು ನೀರಿಗೆ ಪರದಾಡುವುದೂ ಸಾಮಾನ್ಯ ಸಂಗತಿಯಾಗಿ ಹೋಗಿದೆ. ಇದರ ಸಾಲಿಗೆ ಚಿಕ್ಕಹೆಜ್ಜಾಜಿ ಗ್ರಾಮದ ನೀರಿನ ಘಟವೂ ಸೇರ್ಪಡೆಯಾಗಿದೆ. ಸಮುದ್ರದ ನೆಂಟಸ್ತರ ಉಪ್ಪಿಗೆ ಬಡತನ ಎಂಬ ನಾಣ್ನುಡಿಯನ್ನು ಸ್ಥಳೀಯರು ಘಟಕದ ನೆಂಟಸ್ಥರ ನೀರಿಗೆ ಬಡತನ ಎನ್ನುವಂತಾಗಿದೆ ಎಂದು ಗೇಲಿ ಮಾಡುತ್ತಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಹೋಬಳಿ ಹಾದ್ರಿಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಚಿಕ್ಕಹೆಜ್ಜಾಜಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ಹಾಗೂ ನೈರ್ಮಲ್ಯ ಇಲಾಖೆಯಿಂದ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟುನಿಂತು ಹಲವು ತಿಂಗಳು ಕಳೆದರೂ ರಿಪೇರಿ ಮಾಡುವ ಗೋಜಿಗೆ ಹೋಗಿಲ್ಲ. ಇದರಿಂದ ಘಟಕವಿದ್ದರೂ ನಿರುಪಯುಕ್ತವಾಗಿದ್ದು ಕೆಲವೇ ತಿಂಗಳಲ್ಲಿ ಘಟಕದ ನಿರ್ವಹಣೆ ಹೊತ್ತವರ ಬಣ್ಣ ಬಯಲಾಗಿದೆ.
ಸಾವಿರಕ್ಕೂ ಹೆಚ್ಚು ಜನಸಂಖ್ಯೆ: ದೊಡ್ಡಹೆಜ್ಜಾಜಿ ಗ್ರಾಮದಲ್ಲಿ ಶುದ್ಧ ಕುಡಿವ ನೀರು ದೊರಕಿತೆಂಬ ಖುಷಿಯಲ್ಲಿದ್ದ ಗ್ರಾಮಸ್ಥರಿಗೆ ಕೆಲವೇ ತಿಂಗಳಲ್ಲಿ ಭ್ರಮರನಿರಸವಾಗಿದೆ. ಘಟಕ ಆರಂಭಗೊಂಡು ಕೆಲವು ತಿಂಗಳ ಅವಧಿಯಲ್ಲಿ ಕೆಟ್ಟು ನಿಂತಿದೆ. ಇದಾಗಿ ಹಲವು ತಿಂಗಳು ಕಳೆದರೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ದುರಸ್ತಿ ಘಟಕ್ಕೆ ದುರಸ್ತಿ ಭಾಗ್ಯ ಸಿಕ್ಕಿಲ್ಲ. ಇದರಿಂದ ಸ್ಥಳೀಯರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ.ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ದೊಡ್ಡಹೆಜ್ಜಾಗಿ ಗ್ರಾಮದಲ್ಲಿ ಕುಡಿವ ಶುದ್ಧ ನೀರಿಗಾಗಿ ಜನರು ಪರದಾಡುವಂತಾಗಿದೆ. ಘಟಕವನ್ನು ದುರಸ್ತಿ ಮಾಡುವಂತೆ ಕಂಡ ಕಂಡ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವೊಬ್ಬ ಅಧಿಕಾರಿಯೂ ಈ ಬಗ್ಗೆ ಗಮನ ನೀಡುತ್ತಿಲ್ಲ ಎನ್ನುವುದು ಗ್ರಾಮಸ್ಥರ ಆಕ್ರೋಶವಾಗಿದೆ.
ದೂರದೂರಿಗೆ ಅಲೆದಾಟ: ದೊಡ್ಡಹೆಜ್ಜಾಜಿ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿಗಾಗಿ ಈ ಘಟಕವನ್ನೇ ಆಶ್ರಯಿಸಿದ್ದಾರೆ. ಆದರೆ, ಘಟಕ ಬಂದ್ ಆಗಿರುವುದರಿಂದ ದೂರದ ದೊಡ್ಡಬೆಳವಂಗಲ ಹಾಗೂ ಸುತ್ತಮುತ್ತಲಿನ ನೀರಿನ ಘಟಕದಿಂದ ಶುದ್ಧ ನೀರು ತಂದು ಕುಡಿಯುತ್ತಿದ್ದಾರೆ. ಮಳೆಗಾಲದಲ್ಲಿ ನೀರು ತರಲಾರದೆ ಅಶುದ್ಧ ನೀರನ್ನೆ ಕುಡಿಯುವ ಅನಿವಾರ್ಯತೆ ನಿರ್ಮಾಣವಾಗಿದೆ. ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ ಘಟಕದ ನಿರ್ವಹಣೆಗೆ ಅಧಿಕಾರಿಗಳಿಗೇಕೆ ನಿರಾಸಕ್ತಿ ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ. ಪಂಚಾಯಿತಿ ಸೇರಿ ತಾಲೂಕು ಪಂಚಾಯಿತಿ ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಗ್ರಾಮಸ್ಥರು ಹಲವು ಬಾರಿ ದುರಸ್ತಿಗೊಳಿಸುವಂತೆ ಪುಟಗಟ್ಟಲೆ ಮನವಿ ಪತ್ರಗಳನ್ನು ಬರೆದಿದ್ದಾರೆ ಆದರೆ ಸ್ಥಳೀಯ ಆಡಳಿತಗಳಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ.
ಶಾಸಕರೂ ಗಮನಹರಿಸುತ್ತಿಲ್ಲ:
ನಿರುಪಯುಕ್ತವಾಗಿರುವ ನೀರಿನ ಘಕಟದ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿವೆ, ಘಟಕದಲ್ಲಿನ ಯಂತ್ರೋಪಕರಣಗಳು ತುಕ್ಕು ಹಿಡಿಯುತ್ತಿವೆ. ಲಕ್ಷಾಂತರ ರೂ.ಜನರ ತೆರಿಗೆ ಹಣ ಪೋಲಾಗುತ್ತಿದೆ, ಜನರು ಕುಡಿವ ನೀರಿಗಾಗಿ ಪರದಾಡುತ್ತಿದ್ದಾರೆ. ಈ ಬಗ್ಗೆ ಹಲವು ತಿಂಗಳ ಹಿಂದೆಯೇ ಶಾಸಕ ಧೀರಜ್‌ಮುನಿರಾಜು ಅವರ ಗಮನಕ್ಕೂ ತರಲಾಗಿದೆ. ಆದರೂ ಯಾವುದೇ ಪ್ರಯೋಜವಾಗಿಲ್ಲ. ಇನ್ಯಾರಿಗೆ ಮನವಿ ಮಾಡಬೇಕೋ ತಿಳಿಯುತ್ತಿಲ್ಲ ಎಂದು ಗ್ರಾಮಸ್ಥರು ನಿಸ್ಸಾಹಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಗ್ರಾಮ ಪಂಚಾಯಿತಿ ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ ನೀರಿನ ಘಟಕದಿಂದ ಒಂದು ಹನಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ತಕ್ಷಣ ರಿಪೇರಿ ಮಾಡಿಸಿ ಜನರಿಗೆ ಶುದ್ಧ ಕುಡಿವ ನೀರಿನ ಪೂರೈಕೆ ಮಾಡುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು. ಲಕ್ಷಾಂತರ ರೂ.ಖರ್ಚು ಮಾಡಿ ನಿರ್ಮಿಸಿದ ಘಟಕವನ್ನು ಹೀಗೆ ಹಾಳು ಮಾಡುವುದು ಎಷ್ಟು ಸರಿ? ಅಧಿಕಾರಿಗಳಿಗೇಕೆ ಇಂಥ ನಿರಾಸಕ್ತಿ ತಿಳಿಯುತ್ತಿಲ್ಲ.
ಸುಧೀರ್, ದೊಡ್ಡಹೆಜ್ಜಾಜಿ ಗ್ರಾಮ