ಜಿಲ್ಲೆ

ಸ್ಥಳಾಂತರವಾಗದ ನೀರಿನ ಘಟಕ

ಎ. ಆರ್. ರಘುರಾಮ

ಕೊಳ್ಳೇಗಾಲ : ಬಸ್ ಸಂಚಾರಕ್ಕೆ ತೊಡಕಾಗಿರುವ ಪಟ್ಟಣದ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ(ಆರ್.ಓ. ಪ್ಲಾಂಟ್) ಸ್ಥಳಾಂತರಕ್ಕೆ ನಗರಸಭೆ ಮೀನ ಮೇಷ ಎಣಿಸುತ್ತಿದೆ.
ಈಗಾಗಲೇ 2023ರ ಡಿ.30 ರಂದು ಯೋಜನೆಗೊಂಡಿದ್ದ ನಗರಸಭೆ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಸದಸ್ಯರು ಮಾತನಾಡಿ, ನೀರಿನ ಘಟಕ ಸಂಚಾರಕ್ಕೆ ತೊಡಕಾಗಿದೆ. ಹಾಗಾಗಿ ಅದನ್ನು ತೆರವು ಗೊಳಿಸಬೇಕೆಂದು ಒತ್ತಾಯಿಸಿದ್ದರು. ಅದರಂತೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ನಿರ್ಣಯಕ್ಕೆ ಈ ವಿಚಾರವನ್ನು ಸೇರಿಸಿ ಕ್ರಮವಹಿಸುವಂತೆ ಸೂಚಿಸಿದ್ದರು. ಆದರೆ, ಸಾಮಾನ್ಯ ಸಭೆಯಾಗಿ ತಿಂಗಳು ಕಳೆದರೂ ನೀರಿನ ಘಟಕ ತೆರವಾಗಿಲ್ಲ.
ಈ ವಿಳಂಬ ಧೋರಣೆಯಿಂದ ಬಸ್ ಸಂಚಾರಕ್ಕೆ ನಿತ್ಯವೂ ತೀವ್ರ ಅಡಚಣೆಯಾಗುತ್ತಿದೆ. ಬಸ್ ನಿಲ್ದಾಣ ಉದ್ಘಾಟನೆಯಾಗಿ 11 ತಿಂಗಳಾದರೂ ಈ ಸಮಸ್ಯೆಗೆ ಮುಕ್ತಿ ದೊರೆತಿಲ್ಲ. ಬಸ್ ನಿಲ್ದಾಣದಲ್ಲಿ ಖಾಸಗಿ ಹಾಗೂ ಕೆಎಸ್‌ಆರ್‌ಟಿ ಬಸ್‌ಗಳು ಎರಡೂ ಸೇವೆ ಸಲ್ಲಿಸುತ್ತಿದೆ. ಬೆಳಗ್ಗೆ ಯಿಂದ ರಾತ್ರಿವರೆಗೂ ನೂರಾರು ಬಸ್‌ಗಳು ಚಟುವಟಿಕೆಯಲ್ಲಿರುತ್ತದೆ. ಬಸ್ ನಿಲ್ದಾಣಕ್ಕೆ 2 ದ್ವಾರಗಳಿವೆ. ಡಾ.ವಿಷ್ಣು ವರ್ಧನ್ ಮಾರ್ಗವಾಗಿ ವಿವಿಧೆಡೆಯಿಂದ ಬರುವ ಬಸ್‌ಗಳು ನಿಲ್ದಾಣಕ್ಕೆ ಪ್ರವೇಶ ಪಡೆಯುತ್ತದೆ. ಹಾಗೆಯೇ ನಿಲ್ದಾಣದಿಂದ ಹೊರ ಹೋಗುವ ಬಸ್‌ಗಳು ಶಾಂತಿ ಚಿತ್ರ ಮಂದಿರ ಎದುರಿನ ಹೆದ್ದಾರಿ(209)ಗೆ ತೆರಳುತ್ತವೆ.
ಬಸ್ ನಿಲ್ದಾಣದ ಈ ಎರಡೂ ದ್ವಾರಗಳು ಕಿರಿದಾಗಿವೆ. ಅದರಲ್ಲೂ ಬಸ್ ನಿಲ್ದಾಣ ಯಾವಾಗಲೂ ಜನಜಂಗುಳಿ ಇರುತ್ತದೆ. ದ್ವಾರಗಳಲ್ಲಿಯೇ ಜನರು ಬಸ್ ಹತ್ತಲು, ಇಳಿಯಲು ನಿಂತಿರುತ್ತಾರೆ. ಇವೆಲ್ಲದರ ನಡುವೆ ಪ್ರವೇಶ ದ್ವಾರದಲ್ಲಿ ನೀರಿನ ಘಟಕ ಇರುವುದು ಇನ್ನಷ್ಟು ಇಕ್ಕಟ್ಟಿಗೆ ಕಾರಣವಾಗಿದೆ.