ಜಿಲ್ಲೆ

ಪೈಪ್ ಒಡೆದು ಪೋಲಾಗುತ್ತಿದೆ ನೀರು

ಸೋಮನಾಥ ರೆಡ್ಡಿ

ಮುಂಡರಗಿ: ತಾಲೂಕಿನ ಕೊರ್ಲಹಳ್ಳಿ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಶಿಬಾರದ ಬಳಿಯ ಹೆದ್ದಾರಿಯಲ್ಲಿ ಒಂದೂವರೆ ತಿಂಗಳಿಂದ ಹಮ್ಮಿಗಿ ಬಳಿಯ ಸಿಂಗಟಾಲೂರು ಬ್ಯಾರೇಜ್‌ನಿಂದ ಗದಗಕ್ಕೆ ನಿರಂತರವಾಗಿ ನೀರು ಪೂರೈಸುವ ಪೈಪ್ ಒಡೆದು ಅಪಾರ ಪ್ರಮಾಣದ ಜೀವಜಲ ಪೋಲಾಗುತ್ತಿದೆ.

ಅರಭಾವಿ-ಚಳ್ಳಕೇರಿ ಹೆದ್ದಾರಿ ಮಧ್ಯದಲ್ಲಿ ಪೈಪ್ ಒಡೆದು ಕುಡಿಯುವ ನೀರು ಚರಂಡಿ ಸೇರುತ್ತಿದೆ. ಹದಿನೈದು ದಿನಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ನೀರು ಹರಿಯುತ್ತಿದೆ.

ಇದರಿಂದ ವಾಹನ ಸವಾರರಿಗೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸದ್ಯ ಪೈಪ್ ಒಡೆದು ನೀರು ಪೋಲಾಗುತ್ತಿರುವ ಭಾಗದ ಸುತ್ತ ಬ್ಯಾರಿಕೇಡ್ ಹಾಕಲಾಗಿದೆ.

ಇದೇ ಭಾಗದಲ್ಲಿ ರಸ್ತೆ ಕ್ರಾಸ್ ಬರುವುದರಿಂದ ರಾತ್ರಿ ಸಮಯದಲ್ಲಿ ಬರುವಾಗ ವಾಹನ ಚಾಲಕರಿಗೆ ಗೊತ್ತಾಗುವುದಿಲ್ಲ. ಇದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇದೆ.

ಹೆದ್ದಾರಿ ಮೇಲೆ ನಿರಂತರವಾಗಿ ನೀರು ಹರಿಯುವುದರಿಂದ ಈಗಾಗಲೇ ತಗ್ಗು ಬಿದ್ದಿದ್ದು, ರಸ್ತೆಯು ಕುಸಿಯುತ್ತಿದೆ. ಆದರೂ ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸುತ್ತಿಲ್ಲ.

ಸಮರ್ಪಕ ಮಳೆ ಇಲ್ಲದೆ ನೀರಿನ ಅಭಾವ ಉಂಟಾಗುತ್ತಿದೆ ಇಂಥ ಸಂದರ್ಭದಲ್ಲಿ ಈ ರೀತಿ ಕುಡಿಯುವ ನೀರು ವ್ಯರ್ಥವಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ತಕ್ಷಣ ಒಡೆದ ಪೈಪ್ ದುರಸ್ತಿಗೊಳಿಸಿ ನೀರು ಪೋಲಾಗದಂತೆ ಕ್ರಮ ವಹಿಸಬೇಕು ಎಂದು ಕೊರ್ಲಹಳ್ಳಿ ಗ್ರಾಮಸ್ಥರಾದ ನಾಗರಾಜ ಅರ್ಕಸಾಲಿ, ಮೈಲಾರಪ್ಪ ಕೊಳಲು, ಸುರೇಶ ಕೊದಾನಪುರ, ಶಂಭುಲಿಂಗ ಕೊಟ್ಟೂರಶೆಟ್ಟರ ಇತರರು ಒತ್ತಾಯಿಸಿದ್ದಾರೆ.

ಪೈಪ್ ಒಡೆದು ನೀರು ಪೋಲಾಗುತ್ತಿರುವ ಸಂಗತಿ ನಮ್ಮ ಗಮನಕ್ಕೆ ಬಂದಿದೆ. ಇಂಜಿನಿಯರ್ ಪರಿಶೀಲಿಸಲಿದ್ದಾರೆ. ಪೈಪ್ ದುರಸ್ತಿಗೊಳಿಸಿ ನೀರು ಪೋಲಾಗದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ.ರಮೇಶ ಸುಣಗಾರ, ನಗರಸಭೆ ಆಯುಕ್ತ ಗದಗ