ಜಿಲ್ಲೆ

ಪುರಸಭೆ ನಿರ್ಲಕ್ಷ್ಯಕ್ಕೆ ನೀರು ಪೋಲು!

* ಬಿಡದಿಯ ಓವರ್​ಹೆಡ್​ ಟ್ಯಾಂಕ್​ ಭರ್ತಿಯಾದರೂ ನೀರು ನಿಲ್ಲಿಸದ ನೀರಗಂಟಿ

* ಸ್ಥಳಿಯರ ಆಕ್ರೋಶ

ಬಿಡದಿ

ಪುರಸಭೆಯ ಓವರ್​ಹೆಡ್​ ವಾಟರ್​ ಟ್ಯಾಂಕ್​ನಿಂದ ನಿತ್ಯ ರಾತ್ರಿ ಅಪಾರ ಪ್ರಮಾಣ ನೀರು ಪೋಲಾಗುತ್ತಿರುವ ಆರೋಪ ಕೇಳಿಬಂದಿದೆ.

ಪಟ್ಟಣದ ರೈಲು ನಿಲ್ದಾಣದ ರಸ್ತೆಯಲ್ಲಿರುವ ಪುರಸಭೆ ಕಚೇರಿ ಮುಂದೆಯೇ ನಿರ್ಮಿಸಿರುವ ಓವರ್​ಹೆಡ್​ ಟ್ಯಾಂಕ್​ ಪಟ್ಟಣದ ಜನರಿಗೆ ಕುಡಿಯುವ ನೀರು ಪೂರೈಸುತ್ತಿದೆ.

ಬೋರ್​ವೆಲ್​ಗಳಿಂದ ಈ ಟ್ಯಾಂಕ್​ ತುಂಬಿಸಿದ ಬಳಿಕ ಪ್ರತಿ ಮನೆಗಳಿಗೂ ಇಲ್ಲಿಂದಲೇ ಪೂರೈಸಲಾಗುತ್ತದೆ. ಆದರೆ, ಈ ಟ್ಯಾಂಕ್​ ತುಂಬಿದರೂ ಬೋರ್​ವೆಲ್​ಗಳನ್ನು ಆಫ್​ ಮಾಡದ ಕಾರಣ ನೀರು ಅಪಾರ ಪ್ರಮಾಣದಲ್ಲಿ ವ್ಯರ್ಥವಾಗುವ ಜತೆಗೆ ಅಕ್ಕ ಪಕ್ಕದಲ್ಲಿರುವ ಮನೆಗಳ ಮುಂದೆ ಹಾಗೂ ತಗ್ಗು ಪ್ರದೇಶಗಳಲ್ಲಿ ಸಂಗ್ರಹವಾಗಿ ಸಮಸ್ಯೆಗೆ ಕಾರಣವಾಗಿದೆ.

ಕೆಲ ದಿನಗಳ ಹಿಂದೆ ಇದೇ ಟ್ಯಾಂಕ್​ ನೀರು ಪಕ್ಕದಲ್ಲಿ ಮನೆಯ ಪಾಯಕ್ಕೆ ನುಗ್ಗಿ ರಮೇಶ್​ ಅವರ ಮನೆಯ ಗೋಡೆ ಕುಸಿದಿದೆ.

ನೀರು ಪೋಲು: ಓವರ್​ಹೆಡ್​ ಟ್ಯಾಂಕ್​ಗೆ ನೀರು ತುಂಬಿಸಲು ನೀರಗಂಟಿ ರಾತ್ರಿಯಿಡೀ ಬೋರ್​ವೆಲ್​ಗಳನ್ನು ಆನ್​ ಮಾಡಿ ಮನೆ ಸೇರಿಕೊಳ್ಳುತ್ತಾನೆ. ಮಧ್ಯರಾತ್ರಿ ವೇಳೆಗೆ ಟ್ಯಾಂಕ್​ ತುಂಬಿ ನೀರು ಹೊರಬರಲು ಶುರುವಾಗುತ್ತದೆ. ಮಧ್ಯ ರಾತ್ರಿ 1ರಿಂದ ಬೆಳಗ್ಗೆ 7ರವರೆಗೂ ನೀರು ಸುರಿಯುತ್ತಲೇ ಇರುತ್ತದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪುರಸಭೆಗೆ ದೂರು

ನೀರು ವ್ಯರ್ಥವಾಗುವ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಶಾಸಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಬಿಡದಿ ಪುರಸಭೆ ಕಚೇರಿ ಮುಂಭಾಗದಲ್ಲೇ ಈ ನೀರಿನ ಟ್ಯಾಂಕ್​ ಇದ್ದು, ಇದರ ನಿರ್ವಹಣೆ ಸರಿಯಾಗಿಲ್ಲ. ಪ್ರತಿದಿನ ರಾತ್ರಿಯಿಂದ ಬೆಳಗಿನವರೆಗೆ ಟ್ಯಾಂಕ್​ ತುಂಬಿ ನೀರು ವ್ಯರ್ಥವಾಗುತ್ತಿದೆ. ಈ ನೀರು ಮನೆ ಹಾಗೂ ಅಕ್ಕ ಪಕ್ಕದ ಮನೆಯ ಪಾಯಕ್ಕೆ ಇಳಿಯುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ನಮ್ಮ ಮನೆಯ ಪಾಯಕ್ಕೆ ನೀರು ಹೋಗಿ ಮನೆಯ ಗೋಡೆಯೇ ಕುಸಿಯಿದಿದೆ. ರಮೇಶ್​, ಟ್ಯಾಂಕ್​ ಪಕ್ಕದ ಮನೆ ಮಾಲೀಕ

--

ಹನ್ನೆರಡನೇ ವಾರ್ಡ್​ ವ್ಯಾಪ್ತಿಯಲ್ಲಿರುವ ಓವರ್​ ಹೆಡ್​ ಟ್ಯಾಂಕ್​ ತುಂಬಿಸಲು ಎರಡು ಮೋಟರ್​ಗಳಿದ್ದು, ಬೆಳಗ್ಗೆ ಸಮಯದಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗುವ ಕಾರಣಗಳಿಂದ ರಾತ್ರಿ ವೇಳೆ ಟ್ಯಾಂಕ್​ ತುಂಬಿಸಲು ಆನ್​ ಮಾಡಲಾಗುತ್ತದೆ. ಒಂದೊಂದು ಬಾರಿ ಟ್ಯಾಂಕ್​ ತುಂಬಿ ನೀರು ಹೊರ ಬರುತ್ತದೆ. ಇದಕ್ಕೆ ಕಡಿವಾಣ ಹಾಕಲು ಟ್ಯಾಂಕ್​ ಸುತ್ತ ಕಾಂಪೌಂಡ್​ ಹಾಕಿ ಒಳಗೆ ಒಂದು ತೊಟ್ಟಿ ಕಟ್ಟಿಸಿ ಅದಕ್ಕೆ ಟ್ಯಾಂಕ್​ ನಿಂದ ಹೊರಬರುವ ನೀರು ಬೀಳುವಂತೆ ಮಾಡಲು ನಮ್ಮ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.ದೀಪುವಾಟರ್​ ಮನ್​