ಜಿಲ್ಲೆ

ವರುಣ ನಾಲೆ ಕಂಬದಲ್ಲಿ ಬಿರುಕಿನಿಂದ ನೀರು ಪೋಲು

ಮೈಸೂರು: ಮೈಸೂರು ತಾಲೂಕು ಕಡಕೊಳ ಬಳಿ ಹಾದು ಹೋಗಿರುವ ವರುಣ ನಾಲೆಯ (ಡಿ.ದೇವರಾಜ ಅರಸು ನಾಲೆಯ ಮೇಲು ಸೇತುವೆ ಕಾಲುವೆ) ಕಂಬದ ಸಂಖ್ಯೆ 158ರಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.

ನೀರು ಮೇಲಿಂದ ನಿರಂತರವಾಗಿ ಬೀಳುತ್ತಿರುವುದನ್ನು ಕಂಡು ಕಾಣದಂತೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಸ್ಥಳೀಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಾರಿ ವರುಣ ನಾಲೆ ಅಚ್ಚುಕಟ್ಟಿಗೆ ಬೆಳೆ ಬೆಳೆಯಲು ನೀರು ಬಿಡಲಾಗಿದೆ. ಆದರೆ ಕಾಲುವೆ ಬಿರುಕಿನಿಂದ ಕೃಷಿ ಚಟುವಟಿಕೆಗೆ ಬಳಕೆಯಾಗಬೇಕಾದ ನೀರು ಅಧಿಕಾರಿಗಳ ನಿರ್ಲಕ್ಷೃದಿಂದ ಸೋರಿಕೆಯಾಗುತ್ತಿದೆ. ಈ ವಿಚಾರವಾಗಿ ಸ್ಥಳೀಯ ನಾಗರಿಕರು ಮತ್ತು ರೈತರು ಸಂಬಂಧಪಟ್ಟ ಇಲಾಖೆಯವರಿಗೆ ತಿಳಿಸಿದರೆ ಸೌಜನ್ಯಕ್ಕೂ ಸ್ಥಳಕ್ಕೆ ಭೇಟಿ ಕೊಡದೆ ತಮ್ಮ ಮೊಂಡುತನ ಪ್ರದರ್ಶಿಸುತ್ತಿದ್ದಾರೆ.

ಸದರಿ ನಾಲೆಯಲ್ಲಿ ವರ್ಷಕ್ಕೆ ಒಂದು ಬಾರಿ ನೀರನ್ನು ಬಿಡುತ್ತಿದ್ದು, ರೈತರು ಈ ನೀರನ್ನು ಸದುಪಯೋಗಪಡಿಸಿಕೊಂಡು ಬೆಳೆ ಬೆಳೆಯುತ್ತಿದ್ದಾರೆ. ನೀರನ್ನು ಪೋಲು ಮಾಡಬೇಡಿ ನೀರನ್ನು ಉಳಿಸಿ ಎಂದು ಪುಕ್ಕಟೆಯ ಸಂದೇಶ ನೀಡುವ ಅಧಿಕಾರಿಗಳು, ತಮ್ಮ ಕಣ್ಮುಂದೆ ಅಪಾರ ಪ್ರಮಾಣದ ನೀರು ಹೋಲಾಗುತ್ತಿರುವುದನ್ನು ಕಂಡು ಕಾಣದಂತೆ ಕುಳಿತಿರುವುದು ಅಕ್ಷಮ್ಯವಾಗಿದೆ.

ಈ ಕೂಡಲೇ ಸಂಬಂಧಪಟ್ಟ ಅಧಿಕಾರಿ ವರ್ಗ ಬಿರುಕು ಬಿಟ್ಟಿರುವ ಸ್ಥಳವನ್ನು ದುರಸ್ತಿಗೊಳಿಸಿ ಪೋಲಾಗುತ್ತಿರುವ ನೀರನ್ನು ತಡೆಗಟ್ಟಬೇಕೆಂದು ಸಾಮಾಜಿಕ ಹೋರಾಟಗಾರ ಕಡಕೊಳ ಕುಮಾರಸ್ವಾಮಿ ನೀರಾವರಿ ಇಲಾಖೆಯ ಅಧಿಕಾರಿ ವರ್ಗದವರನ್ನು ಆಗ್ರಹಿಸಿದ್ದು, ನಿರ್ಲಕ್ಷೃ ಮುಂದುವರಿದರೆ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.