ಹೊನ್ನಾಳಿ: ನಿರಂತರ ಮಳೆಯಿಂದ ಮೆಕ್ಕೆಜೋಳದ ಹೊಲದಲ್ಲಿ ನೀರು ನಿಂತು ಬೆಳೆಗೆ ಹಾನಿಯಾಗುತ್ತಿದೆ. ಆದ್ದರಿಂದ ಸರ್ಕಾರ ಅತಿವೃಷ್ಠಿ ಎಂದು ತೀರ್ಮಾನಿಸಿ ಪರಿಹಾರ ನೀಡಬೇಕು ಎಂದು ತಾಳೆ ಬೆಳೆ ರಾಜ್ಯ ಪ್ರಶಸ್ತಿ ವಿಜೇತ ಮಾದೇನಹಳ್ಳಿ ನಾಗರಾಜ್ ತಿಳಿಸಿದರು.
ಗುರುವಾರ ಪತ್ರಿಕೆಗೆ ಮಾಹಿತಿ ನೀಡಿದ ಅವರು, ತಾಲೂಕಿನ ಕತ್ತಿಗೆ ಪಂಚಾಯಿತಿ ಮತ್ತು ಹತ್ತೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆ ಹೆಚ್ಚಾಗಿ ಬಂದು ಮೆಕ್ಕೆಜೋಳದ ಹೊಲಗಳಲ್ಲಿ ನೀರು ನಿಂತಿದೆ. ಬೆಳೆಗೆ ಶೀತವಾಗುತ್ತಿದೆ ಎಂದು ಹೇಳಿದರು.
ಈ ಕುರಿತು ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಪ್ರತಿಮಾ ಮಾತನಾಡಿ, ಎಲ್ಲೆಡೆ ಶೀತ ಇದೆ. ಆದರೆ, ಬೆಳೆಗಳಿಗೆ ಹಾನಿಯಾಗುವಷ್ಟು ಶೀತ ಆಗದೆ ಇರುವುದರಿಂದ ಬೆಳೆಗಳು ಚೆನ್ನಾಗಿ ಬರುತ್ತದೆ. ಬುಧವಾರದಿಂದ ಮಳೆ ಸಾಕಷ್ಟು ಕಡಿಮೆ ಆಗಿದೆ. ಈಗಾಗಲೆ ನಮ್ಮ ಕೃಷಿ ಅಧಿಕಾರಿಗಳು ಹೊಲಗಳಿಗೆ ಹೋಗಿ ಶೀತಕ್ಕೆ ಯಾವ ಔಷಧಿ ಸಿಂಪಡಿಸಬೇಕು ಎಂದು ರೈತರಿಗೆ ಮಾಹಿತಿ ನೀಡುತ್ತಿದ್ದಾರೆ. ರೈತರು ಆತಂಕ ಪಡಬೇಕಿಲ್ಲ ಎಂದು ತಿಳಿಸಿದರು.