ಹಾನಗಲ್ಲ: ಧರ್ವ ಜಲಾಶಯದಲ್ಲಿ ಸಂಗ್ರಹವಿರುವ 29 ಅಡಿ ನೀರಿನಲ್ಲಿ 6 ಅಡಿ ನೀರನ್ನು ಭಾನುವಾರದಿಂದಲೇ ಜಮೀನುಗಳಿಗೆ ಬಿಡುಗಡೆ ಮಾಡಬೇಕು ಎಂದು ಸವಣೂರ ಉಪವಿಭಾಗಾಧಿಕಾರಿ ಮಹಮ್ಮದ್ ಕೀಜರ್ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶನಿವಾರ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ನೀರಾವರಿ ಇಲಾಖೆ ಅಧಿಕಾರಿಗಳ ಹಾಗೂ ಧರ್ವ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರು ಮತ್ತು ರೈತ ಸಂಘಟನೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾನುವಾರದಿಂದ 15 ದಿನಗಳವರೆಗೆ ಜಲಾಶಯದ ನೀರು ಬಿಡುಗಡೆಗೊಳಿಸಲಾಗುತ್ತಿದ್ದು, ಮಧ್ಯದಲ್ಲಿ ಮಳೆ ಬಂದರೆ ಕಾಲುವೆ ಬಂದ್ ಮಾಡಲಾಗುವುದು. ರೈತರು ಅಗತ್ಯವಿರುವಷ್ಟು ಮಾತ್ರ ನೀರನ್ನು ಬಳಸಿಕೊಳ್ಳಬೇಕು. ತಮ್ಮ ಜಮೀನಿಗೆ ನೀರು ಸಾಕಾದರೆ ಮುಂದಿನ ಹೊಲಗಳ ರೈತರಿಗೆ ಬಿಡಬೇಕು. ಅನಗತ್ಯವಾಗಿ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಿದರೆ ಮುಂದಿನ ಬಾರಿ ನೀರು ಬಿಡುಗಡೆ ಸಾಧ್ಯವಾಗುತ್ತದೆ. ಈ ಬಾರಿ ಮಳೆಯ ಕೊರತೆ ಎದುರಾಗಿರುವುದರಿಂದ ಮಳೆಗಾಲ ಕೊನೆಗೊಳ್ಳುವ ಪೂರ್ವದಲ್ಲೇ ಜಲಾಶಯದಿಂದ ಭತ್ತ ನಾಟಿಗೆ ನೀರು ಹರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಪ್ರತಿ ವರ್ಷ ಡಿಸೆಂಬರ್ ನಂತರ ನೀರು ಹರಿಸುವ ವಾಡಿಕೆಯಿತ್ತು. ಈಗ ಇನ್ನೂ ಮಳೆ ಬರುವ ಲಕ್ಷಣಗಳಿದ್ದು, ರೈತರು ಆತಂಕಪಡುವ ಅಗತ್ಯವಿಲ್ಲ ಎಂದರು.
ರೈತ ಮುಖಂಡ ಪ್ರಕಾಶಗೌಡ ಪಾಟೀಲ ಮಾತನಾಡಿ, ತಾಲೂಕಿನ ಅಕ್ಕಿಆಲೂರಿನ ಈಶ್ವರ ಕೆರೆಯಿಂದ ಮುಂದೆ ಕಲ್ಲಾಪುರದಿಂದ ಇನಾಂಯಲ್ಲಾಪುರ ಮಾರ್ಗದಲ್ಲಿ ಕಾಲುವೆಯಲ್ಲಿ ಹೂಳು ತುಂಬಿರುವುದನ್ನು ತಕ್ಷಣ ತೆರವುಗೊಳಿಸಬೇಕು. ಇದರೊಂದಿಗೆ ಜಲಾಶಯದ ಕಾಲುವೆಯಲ್ಲಿ ಸರಾಗವಾಗಿ ನೀರು ಹರಿಯುವಂತೆ ಅಡೆ- ತಡೆಗಳನ್ನು ತೆಗೆದುಹಾಕಬೇಕು. ಕಲ್ಲಾಪುರ ಗ್ರಾಮದ ಕೊಳಚೆ ಬಂದು ಕಾಲುವೆಗೆ ಸೇರಿತ್ತಿರುವುದರಿಂದ ಯಂತ್ರಗಳನ್ನು ಬಳಸಿ ಕಾಮಗಾರಿ ಕೈಗೊಳ್ಳಬೇಕಿದೆ. ಭತ್ತ ನಾಟಿಗೆ ಹಾಗೂ ಗೋವಿನಜೋಳಕ್ಕೆ ನೀರಿನ ಅಗತ್ಯವಿದ್ದು, ಕೂಡಲೇ ನೀರು ಬಿಡುಗಡೆಯ ಅವಶ್ಯಕತೆ ವಿವರಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಜಲಾಶಯದಿಂದ ಆರಂಭಗೊಂಡು ಶೃಂಗೇರಿ ಗ್ರಾಮ ಸೇರಿದಂತೆ ಕಾಲುವೆಯ ಕೊನೆಯ ಭಾಗದ ಹಳ್ಳಿಗಳಿಗೂ ನೀರು ತಲುಪುವಂತೆ ಅಧಿಕಾರಿಗಳು ಜವಾಬ್ದಾರಿ ನಿರ್ವಹಿಸಬೇಕು. ಕಾಲುವೆ ಸರಿಯಾಗಿದ್ದರೆ ಕಡಿಮೆ ನೀರಿದ್ದರೂ ಕೊನೆಯ ಹಳ್ಳಿಗಳಿಗೆ ನೀರು ತಲುಪಿಸಿದ ಉದಾಹರಣೆಗಳಿವೆ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ರೈತರ ಫಸಲು ಹಾಳಾಗುವುದು ನಿಶ್ಚಿತ. ಕಾಲುವೆಯಲ್ಲಿ ನೀರು ಹರಿಯಲು ಸಮಸ್ಯೆಯಾಗುತ್ತಿರುವಲ್ಲಿ ಹೂಳು, ಗಿಡ ಗಂಟಿಗಳನ್ನು ತೆರವುಗೊಳಿಸಿದರೆ ಮಾತ್ರ ರೈತರ ಹೊಲಕ್ಕೆ ನೀರು ಸಂಪೂರ್ಣವಾಗಿ ಸದ್ಬಳಕೆಯಾಗುತ್ತದೆ. ಅಲ್ಲಲ್ಲಿ ತೂಬುಗಳು ಶಿಥಿಲವಾಗಿರುವುದರಿಂದ ನೀರು ನದಿ ಸೇರಿ ಪೋಲಾಗುತ್ತದೆ. ಇವೆಲ್ಲವನ್ನು ಸರಿಪಡಿಸಬೇಕು. ಇಲಾಖೆ ಅಧಿಕಾರಿಗಳನ್ನು ದೂರುವ ಬದಲು ರೈತರೂ ಕೂಡ ನೀರಿನ ಬಗೆಗೆ ಕಾಳಜಿವಹಿಸಿ ಪೋಲಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಸಭೆಯಲ್ಲಿ ಅಚ್ಚುಕಟ್ಟು ಪ್ರದೇಶದ ರೈತರಾದ ಟಾಕನಗೌಡ ಪಾಟೀಲ, ವೀರೇಶ ಬೈಲವಾಳ, ರುದ್ರಪ್ಪ ಹಣ್ಣಿ, ರಾಜಣ್ಣ ಗೌಳಿ, ಬಿ.ಸಿ.ಪಾಟೀಲ, ಷಣ್ಮುಖ ಅಂದಲಗಿ, ಸೋಮಣ್ಣ ಜಡೆಗೊಂಡರ, ಭರಮಣ್ಣ ಶಿವೂರ, ಅಡಿವೆಪ್ಪ ಆಲದಕಟ್ಟಿ, ಚಂದ್ರಣ್ಣ ಗೂಳಿ, ಶ್ರೀಧರ ಮಲಗುಂದ, ಶ್ರೀಕಾಂತ ದುಂಡಣ್ಣನವರ, ಚಂದ್ರಣ್ಣ ಕಾರೇರ, ರವಿ ದೇಶಪಾಂಡೆ, ನೀರಾವರಿ ಇಲಾಖೆ ಅಧಿಕಾರಿಗಳಾದ ಪ್ರಲ್ಹಾದ ಶೆಟ್ಟಿ, ಜಾವೇದ ಮುಲ್ಲಾ, ಎಲ್.ಜಿ. ರಾಕೇಶ, ಅನ್ನಪೂರ್ಣ ಮಣಕವಾಡ ಇದ್ದರು.