ಜಿಲ್ಲೆ

ಎತ್ತಿನಹೊಳೆ ನೀರು ಹರಿದ ಬಳಿಕವೇ ನಗರಕ್ಕೆ ನೀರು

ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಪುನರುಚ್ಚಾರ

ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು

ಸುಳ್ಳು ಹೇಳಿ ರಾಜಕೀಯ ಮಾಡುವವನು ನಾನಲ್ಲ. ನಗರಕ್ಕೆ ನೀರು ಹರಿಸುವ ವಿಚಾರದಲ್ಲಿ ವಾಟದಹೊಸಹಳ್ಳಿ ಜನಕ್ಕೆ ನಾನು ಮೋಸ ಮಾಡುವುದಿಲ್ಲ. ಎತ್ತಿನ ಹೊಳೆ ನೀರನ್ನು ಕೆರೆಗೆ ಹರಿಸಿದ ಬಳಿಕವೇ ಅಲ್ಲಿಂದ ನಗರಕ್ಕೆ ನೀರು ಹರಿಸಲಾಗುವುದು ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಪುನರುಚ್ಚರಿಸಿದರು.

ವಾಟದಹೊಸಳ್ಳಿ ಕೆರೆ ನೀರಿನ ವಿಚಾರದಲ್ಲಿ ರೈತರಿಗೆ ತೊಂದರೆಯಾಗಬಾರದು ಎಂದು ನಾನೇ ಖುದ್ದು ಹೋಗಿ ಅವರಲ್ಲಿನ ಸಂದೇಹ ನಿವಾರಿಸುವ ನಿಟ್ಟಿನಲ್ಲಿ ಸಭೆ ಆಯೋಜಿಸಿದ್ದೆ. ಆದರೆ ಕೆಲವರು ರೈತರ ದಿಕ್ಕು ತಪ್ಪಿಸಿ, ಒಂದು ಗುಂಪನ್ನು ಎತ್ತಿಕಟ್ಟಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಮಾಡುವುದು ಯಾರಿಗೂ ತರವಲ್ಲ. ಇಷ್ಟು ವರ್ಷ ಅಧಿಕಾರ ನಡೆಸಿದವರು ಜನ ಹಿತ ಮರೆಯಬಾರದು ಎಂದು ಗುರುವಾರ ಗೃಹ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸರ್ಕಾರದಿಂದಲೇ ವೈಜ್ಞಾನಿಕ ಸರ್ವೇ

ಎರಡು ವರ್ಷಗಳಲ್ಲಿ ವಾಟದ ಹೊಸಹಳ್ಳಿ ಕೆರೆಗೆ ಎತ್ತಿನಹೊಳೆ ನೀರುಹರಿಸಿದ ಬಳಿಕವಷ್ಟೇ ನಗರಕ್ಕೆ ನೀರು ತರಲಾಗುವುದು. ಯೋಜನೆಯಲ್ಲಿ ಎಂಟು ಹಳ್ಳಿಗಳು ಒಳಗೊಂಡಂತೆ ನಗರದ 31 ವಾರ್ಡ್ ಗಳಲ್ಲಿ ನೀರು ಸರಬರಾಜು ಮಾಡಲಾಗುವುದು. ಅದಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರಿ 65 ಕೋಟಿ ರೂ. ಅನುದಾನ ತಂದಿದ್ದೇನೆ. ವಾಟದಹೊಸಳ್ಳಿಕೆರೆ ಜತೆಗೆ ಕಲ್ಲೂಡಿ, ಗೋಟಕನಾಪುರ, ಕೆರೆಯನ್ನು ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗಿದ್ದು, 5 ಕೋಟಿ ರೂ. ಅನುದಾನವೂ ಬಿಡುಗಡೆಯಾಗಲಿದೆ. ಸರ್ಕಾರವೇ ವೈಜ್ಞಾನಿಕವಾಗಿ ಸರ್ವೇ ಮಾಡಿ, ಈ ಕೆರೆಯನ್ನು ಯೋಜನೆಗೆ ಆಯ್ಕೆ ಮಾಡಿದೆ. ವರ್ಷದಲ್ಲಿ ಆಗುವ ಮಳೆ, ಕೆರೆ ನೀರು ಶೇಖರಣಾ ಸಾಮರ್ಥ್ಯ ಎಲ್ಲ ಮಾನದಂಡ ಪರಿಗಣಿಸಿ ಯೋಜನೆ ರೂಪಿಸಲಾಗಿದೆ. ಮಳೆಯಿಂದ ಸಂಗ್ರಹವಾಗುವ ಒಂದು ಹನಿ ನೀರನ್ನೂ ನಗರಕ್ಕೆ ತೆಗೆದುಕೊಂಡು ಹೋಗುವುದಿಲ್ಲ. ಎತ್ತಿನಹೊಳೆ ಯೋಜನೆಯಿಂದ 240 ಎಂಸಿಎ್ಟಿ ನೀರನ್ನು ಕೆರೆಗೆ ತುಂಬಿಸಿ, ಅದರಲ್ಲಿ ಅರ್ಧ ಭಾಗ (124 ಎಂಸಿಎ್ಟಿ) ನೀರನ್ನು ಮಾತ್ರ ನಗರಕ್ಕೆ ಹರಿಸಲಾಗುವುದು ಎಂದು ಶಾಸಕರು ಸ್ಪಷ್ಟಪಡಿಸಿದರು.