ಜಿಲ್ಲೆ

ಗಣಗೂರಿನಲ್ಲಿ ಕೃಷಿಗೆ ಜಲ ತತ್ವಾರ

ಸೋಮವಾರಪೇಟೆ: ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಗತಿಪರ ಕೃಷಿಕರು ವಾಸ ಮಾಡುವ ಗಣಗೂರು ಗ್ರಾಮದ ಜನರ ರಸ್ತೆ ಕೂಗು ಅರಣ್ಯರೋದನವಾಗಿದೆ.

ಗಣಗೂರು ಗ್ರಾಮದಿಂದ ಮಾಲಂಬಿ ಮಾರ್ಗದ ಮುಖ್ಯರಸ್ತೆ ಗುಂಡಿಮಯವಾಗಿದೆ. 7 ವರ್ಷಗಳ ಹಿಂದೆ ಗ್ರಾಮಸಡಕ್ ಯೋಜನೆಯಲ್ಲಿ ರಸ್ತೆ ಕಾಮಗಾರಿ ನಡೆದಿತ್ತು. ಆದರೆ ಯಂತ್ರದ ಮೂಲಕ ಡಾಂಬರೀಕರಣ ಮಾಡದಿರುವುದರಿಂದ ರಸ್ತೆ ಹಾಳಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.

ಗ್ರಾಮದೊಳಗಿನ ಸಂಪರ್ಕ ರಸ್ತೆಗಳು ಗುಂಡಿಮಯವಾಗಿವೆ. ಮಳೆಗಾಲದಲ್ಲಂತೂ ಜಾನುವಾರುಗಳು ರಸ್ತೆಯಲ್ಲಿ ನಡೆಯಲು ಭಯಪಡುತ್ತವೆ ಎಂದು ಹೇಳುತ್ತಾರೆ ಗ್ರಾಮದ ಮಹಿಳೆಯರು.

ಪ್ರಸಕ್ತ ಗಣಗೂರು ಗ್ರಾಮದಲ್ಲಿ 190 ಕುಟುಂಬಗಳು ವಾಸ ಮಾಡುತ್ತಿವೆ. ಶೇ.95ರಷ್ಟು ಕುಟುಂಬಗಳು ಕೃಷಿಯನ್ನೇ ಅವಲಂಬಿಸಿದ್ದಾರೆ. ಸುಮಾರು 350 ಎಕರೆಯಷ್ಟು ಕೃಷಿ ಭೂಮಿ ಇದ್ದು, ಅದರಲ್ಲಿ 200 ಎಕರೆ ಭತ್ತ ಭೂಮಿಯಿದೆ. ಈಗಲೂ ನೂರು ಎಕರೆ ಜಾಗದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಕಾಫಿ, ಕಾಳುಮೆಣಸು, ಜೋಳ, ಶುಂಠಿ ಬೆಳೆಯನ್ನು ಬೆಳೆಯುತ್ತಾರೆ.

ನಾಲ್ಕೈದು ದಶಕಗಳ ಹಿಂದೆ ಬೆಟ್ಟಗುಡ್ಡಗಳಿಂದ ಹರಿದು ಬರುವ ನೀರನ್ನು ಗ್ರಾಮದಲ್ಲಿದ್ದ 4 ಕೆರೆಗಳಲ್ಲಿ ಸಂಗ್ರಹ ಮಾಡಿ ಬೇಸಿಗೆಯಲ್ಲಿ ಕೃಷಿಗೆ ಉಪಯೋಗಿಸುತ್ತಿದ್ದರು. ಗ್ರಾಮದ ಮಧ್ಯಭಾಗದಲ್ಲಿ ನೀರನ್ನು ಹರಿಸಲು ಕೆನಾಲ್‌ಗಳನ್ನು ನಿರ್ಮಿಸಲಾಗಿತ್ತು. ಆದರೆ ಕ್ರಮೇಣ ದುರಾಸೆಯಿಂದ ಕೆಲವರು ಕೆನಾಲ್‌ಗಳನ್ನು ಒತ್ತುವರಿ ಮಾಡಿಕೊಂಡರು. ಈಗಲೂ ಊರು ಬಾಗಿಲ ಕೆರೆ ಹೂಳೆತ್ತಿಲ್ಲ. ಕೆರೆಗಳಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಈಗ ಗ್ರಾಮದಲ್ಲಿ ಬೋರ್‌ವೆಲ್‌ಗಳು ಇಲ್ಲದೆ ಕೃಷಿ ಮಾಡುವುದೇ ಅಸಾಧ್ಯ ಎನ್ನುವಂತಾಗಿದೆ.

ಪ್ರತಿವರ್ಷ ಅಕಾಲಿಕ ಮಳೆಯಿಂದ ಫಸಲು ನಷ್ಟ ಅನುಭವಿಸುವಂತಾಗಿದೆ. ಸೂಕ್ತ ಪರಿಹಾರವೂ ಸಿಗುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಪ್ರಸಕ್ತ ಮಳೆಯ ಕೊರೆತೆಯಿಂದ ಕಾಫಿ, ಕಾಳುಮೆಣಸಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಅನೇಕರು ಭತ್ತ ಭೂಮಿಯನ್ನು ಸಮತಟ್ಟು ಮಾಡಿ, ಅಡಕೆ ಬೆಳೆಯಲು ಪ್ರಾರಂಭಿಸಿದ್ದಾರೆ.

ಊರುಬಾಗಿಲ ಕೆರೆಯಲ್ಲಿ ಸಂಗ್ರಹವಾಗಿದ್ದ ನೀರನ್ನು ಉಪಯೋಗಿಸಿಕೊಂಡು 100 ಎಕರೆ ಜಾಗದಲ್ಲಿ ಭತ್ತ ಬೆಳೆಯುತ್ತಿದ್ದರು. ಈಗ ಕೆರೆ ಪಾಳುಬಿಡಲಾಗಿದೆ. ವೈಜ್ಞಾನಿಕವಾಗಿ ಕೆರೆಯ ಹೂಳು ತೆಗೆದಿಲ್ಲ. ನೀರು ಹರಿಯಲು ಜಾಗವೇ ಇಲ್ಲದಂತಾಗಿದೆ.

ಆರ್.ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಹಾರಂಗಿ ನೀರನ್ನು ಕೆನಾಲ್ ಮೂಲಕ ಅಳವಾರ, ಗೋಣಿಮರೂರು, ಕಣಗಾಲು, ಹೊಸಗುತ್ತಿ, ಅಂಕನಳ್ಳಿ ಗ್ರಾಮಗಳಿಗೆ ಕಲ್ಪಿಸಲು ಸರ್ವೇ ಕಾರ್ಯ ಪ್ರಾರಂಭವಾಗಿತ್ತು. ನಂತರ ಅವರು ಪರಾಭವಗೊಂಡರು. ನಂತರ ಬಿ.ಎ.ಜೀವಿಜಯ ಅವರು ಈ ಯೋಜನೆಯನ್ನು ಮುಂದುವರಿಸಲು ಪ್ರಯತ್ನ ಮಾಡಿದರೂ, ಯೋಜನೆಗೆ ಸೂಕ್ತ ಅನುದಾನ ಸಿಗಲಿಲ್ಲ. ಯೋಜನೆ ಯಶಸ್ವಿಯಾಗಿದ್ದರೆ, ಉತ್ತರ ಕೊಡಗಿನ ಅನೇಕ ಗ್ರಾಮಗಳು ಹಸಿರಿನಿಂದ ಕಂಗೊಳಿಸುತ್ತಿದ್ದವು ಎಂದು ಗ್ರಾಮಸ್ಥರು ಹೇಳುತ್ತಾರೆ.

ಕಾಡಾನೆ ಕಾಟ: ಕಾಡಾನೆಗಳ ನಿಯಂತ್ರಣಕ್ಕೆ ಅರಣ್ಯದಂಚಿನಲ್ಲಿ ಕೆಲವು ಕಡೆ ಸೋಲಾರ್ ತಂತಿಬೇಲಿ ಅಳವಡಿಸಲಾಗಿದೆ. ಆದರೆ ನಿರ್ವಹಣೆಯಿಲ್ಲದೆ ಉಪಯೋಗಕ್ಕೆ ಬಂದಿಲ್ಲ. ಕೆಲವು ಕಡೆ ಆನೆ ಕಂದಕ ನಿರ್ಮಿಸಲಾಗಿದೆ. ಅವುಗಳಲ್ಲಿ ಮಣ್ಣು ಕುಸಿತದಿಂದ ಪ್ರಯೋಜನಕ್ಕೆ ಬಂದಿಲ್ಲ. ಸೋಲಾರ್ ತಂತಿ ಬೇಲಿ ಇಲ್ಲದ ಕಡೆ ಕಾಡಾನೆಗಳು ಗ್ರಾಮ ವಾಸ್ತವ್ಯ ಮಾಡುತ್ತಿವೆ.

ಪಾಳುಬಿದ್ದ ರಸ್ತೆಗಳು: ಗೋಣಿಮರೂರು, ಗಣಗೂರು, ಕಣಗಾಲು ಉಂಜಿನಳ್ಳಿ, ಮಾಲಂಬಿ ಸಂಪರ್ಕ ರಸ್ತೆ ಹಾಳಾಗಿದೆ. ಕೆಲವು ಕಡೆ ಗುಂಡಿಮಯವಾಗಿದೆ. ಹಿಂದೆಲ್ಲ ಇದೇ ರಸ್ತೆಯಲ್ಲಿ ನಾಲ್ಕು ಬಸ್‌ಗಳ ಸಂಚಾರವಿತ್ತು. ನಿವಾಸಿಗಳಿಗೆ ಮತ್ತು ಶಾಲಾ, ಕಾಲೇಜು ಮಕ್ಕಳು ನೆಮ್ಮದಿಯಿಂದ ಪಟ್ಟಣಗಳಿಗೆ ಹೋಗಿ ವಿದ್ಯಾಭ್ಯಾಸ ಕಲಿಯುತ್ತಿದ್ದರು. ಈಗ ಒಂದು ಬಸ್ ಮಾತ್ರ ಗ್ರಾಮದಲ್ಲಿ ಸಂಚರಿಸುವಂತಾಗಿದೆ ಎಂದು ಗ್ರಾಮಸ್ಥರು ನೊಂದು ನುಡಿದರು.

ಒಟ್ಟಿನಲ್ಲಿ ಗಣಗೂರು ಗ್ರಾಮದಲ್ಲಿ ಕೃಷಿಗೆ ಕೊಳವೆಬಾವಿಗಳನ್ನು ನಂಬಿಕೊಂಡಿದ್ದಾರೆ. ಕಾಫಿ ಬೆಳೆಗಾರರ 10 ಎಚ್‌ಪಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಬೇಕೆಂದು ಹೋರಾಟ ನಡೆಯುತ್ತಿದೆ. ಬಹುತೇಕ ಬೆಳೆಗಾರರು ಎಲ್‌ಟಿ4ಸಿ ವಿದ್ಯುತ್ ಸಂಪರ್ಕಕ್ಕೆ ವಿದ್ಯುತ್ ಬಿಲ್ ಪಾವತಿಸಿಲ್ಲ. ಬಾಕಿ ಬಿಲ್‌ಗೆ ಸೆಸ್ಕ್ ಅಧಿಕಾರಿಗಳು ಬಡ್ಡಿ, ಚಕ್ರಬಡ್ಡಿ ಹಾಕಿ, ಒಂದು ಲಕ್ಷ, ಎರಡು ಲಕ್ಷದಷ್ಟು ಬಿಲ್ ಮಾಡಿಟ್ಟಿದ್ದಾರೆ. ಬೆಳೆಗಾರರ ಬಾಕಿ ಬಿಲ್ ಮನ್ನಾ ಮಾಡಿ, ಉಚಿತ ವಿದ್ಯುತ್ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಗಣಗೂರು ಗ್ರಾಮದ ಬೆಳೆಗಾರರು ಹೋರಾಟದಲ್ಲಿ ಭಾಗಿಯಾಗುತ್ತಿದ್ದಾರೆ.

ಮಾಲಂಬಿ, ಬಾಣಾವಾರ, ನಿಡ್ತ ಮೀಸಲು ಅರಣ್ಯದಲ್ಲಿರುವ ಕಾಡಾನೆಗಳಿಗೆ ಹಾಗೂಕಾಡುಪ್ರಾಣಿಗಳಿಗೆ ರೈತರು ಬೆಳೆಯುವ ಕೃಷಿ ಫಸಲೇ ಆಹಾರವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕಾಡಾನೆಗಳ ನಿಯಂತ್ರಣಕ್ಕೆ ಒಂದಷ್ಟು ಯೋಜನೆಗಳನ್ನು ಅರಣ್ಯ ಇಲಾಖೆ ರೂಪಿಸಿ, ಕಾಡಾನೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ. ಆದರೆ ಮುರ‌್ನಾಲ್ಕು ದಶಕಗಳ ಹಿಂದೆ ಕಾಡಾನೆಗಳು ತಿಂದು ಉಳಿಸಿದ ಕೃಷಿ ಫಸಲನ್ನು ರೈತ ತೆಗೆದುಕೊಳ್ಳುವಂತ ಪರಿಸ್ಥಿತಿ ಇದ್ದರೂ, ಅಂದು ಕೃಷಿ ಭೂಮಿಯನ್ನು ಪಾಳುಬಿಟ್ಟಿರಲಿಲ್ಲ. ಈಗಲೂ ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

ಧಾರ್ಮಿಕ ಆಚರಣೆಯಲ್ಲೂ ಮುಂದು: ಗಣಗೂರು ಬಸವೇಶ್ವರ ದೇವಾಲಯವನ್ನು 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಶ್ರೀ ಮಳೆ ಮಲ್ಲೇಶ್ವರ ದೇವಾಲಯ ಶಿಥಿಲಾವಸ್ಥೆ ತಲುಪಿದ್ದು, ದೇವಾಲಯ ನಿರ್ಮಾಣದ ಬಗ್ಗೆ ಗ್ರಾಮಸ್ಥರಲ್ಲಿ ಚರ್ಚೆ ನಡೆದಿದೆ. ವಾರ್ಷಿಕ ಪೂಜೆಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಾರೆ. ಶಿವರಾತ್ರಿ ಪೂಜೆ ಅದ್ದೂರಿಯಾಗಿ ಆಚರಿಸುತ್ತಾರೆ. ಮಾಲಂಬಿ ಬೆಟ್ಟದಲ್ಲಿರುವ ಮಳೆಮಲ್ಲೇಶ್ವರ ದೇವಾಲಯಕ್ಕೂ ಗಣಗೂರು ಗ್ರಾಮಸ್ಥರಿಗೂ ಅವಿನಾಭಾವ ಸಂಬಂಧವಿದೆ. ಕಾಫಿ ಹೂಮಳೆ ವಿಳಂಬವಾದರೆ, ಗ್ರಾಮಸ್ಥರು ಮಾಲಂಬಿ ಬೆಟ್ಟಹತ್ತಿ ಮಳೆ ಮಲ್ಲೇಶ್ವರ ಸ್ವಾಮಿ ಪೂಜೆ ಸಲ್ಲಿಸಿ ಬರುತ್ತಾರೆ. ನಂತರ ಹೂಮಳೆ ಸುರಿದ ನಿದರ್ಶನಗಳೂ ಇವೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಗ್ರಾಮದಲ್ಲಿ ವೀರಗಲ್ಲು, ಮಾಸ್ತಿಗಲ್ಲು ಕಾಣ ಸಿಕ್ಕಿರುವುದರಿಂದ ಸಾಮಂತ ರಾಜರಿಗೂ ಗಣಗೂರು ಇಷ್ಟವಾದ ಗ್ರಾಮವಾಗಿತ್ತು ಎಂದು ಹಿರಿಯರು ಹೇಳಿದರು. ಗಣಗೂರು ಗ್ರಾಮದ ಕೃಷಿಕರಿಗೆ ಕೃಷಿ ಕಡೆ ಹೆಚ್ಚಿನ ಒಲವು ಈಗಲೂ ಇದೆ. ಕೃಷಿ ನಷ್ಟದ ಹಾದಿಯಲ್ಲಿದ್ದರೂ ಕೃಷಿ ತೊರೆದಿಲ್ಲ. ಕಾಫಿ, ಕಾಳುಮೆಣಸು ಬೆಳೆಯುತ್ತಾರೆ. ಅತಿವೃಷ್ಟಿ, ಅನಾವೃಷ್ಟಿಯಾದರೂ ಭತ್ತ ಬೆಳೆಯುವುದನ್ನು ಬಿಟ್ಟಿಲ್ಲ. ಗ್ರಾಮದ ಬೆಟ್ಟದಿಂದ ಹರಿಯುವ ನೀರನ್ನು ಕೆರೆಯಲ್ಲಿ ಸಂಗ್ರಹ ಮಾಡುವುದಕ್ಕೆ ಯೋಜನೆ ರೂಪಿಸಬೇಕಿದೆ. ಕಾಡಾನೆ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು. ಸಣ್ಣ ಕಾಫಿ ಬೆಳೆಗಾರರ 10ಎಚ್.ಪಿ.ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಬೇಕು. ಬಾಕಿಯಿರುವ ವಿದ್ಯುತ್ ಬಿಲ್ ಮನ್ನಾ ಮಾಡಬೇಕು. ಚಂದ್ರಶೇಖರ್ ಅಧ್ಯಕ್ಷ, ಶ್ರೀ ಬಸವೇಶ್ವರ ದೇವಾಲಯ ಸಮಿತಿ, ಗಣಗೂರು ಗ್ರಾಮ ಗಣಗೂರು ಕೃಷಿ ಪ್ರಧಾನ ಗ್ರಾಮವಾಗಿದೆ. ನೂರಾರು ಎಕರೆಗೆ ಕೃಷಿ ಭೂಮಿಗೆ ನೀರುಣಿಸುವ ಕೆರೆಗಳು ಹೂಳು ತೆಗೆಸಬೇಕು. ನೀರು ಸಂಗ್ರಹವಾಗುವಂತೆ ನೋಡಿಕೊಂಡರೆ, ಇನ್ನು ಹೆಚ್ಚಿನ ಭೂಮಿಯಲ್ಲಿ ಕೃಷಿ ಮಾಡಬಹುದು. ಬೆಳೆಹಾನಿ ಪರಿಹಾರ ನೀಡಬೇಕು. ಜಿ.ವಿ.ಪರಮೇಶ್ ಪ್ರಗತಿಪರ ಕೃಷಿಕ, ಗಣಗೂರು ಗಣಗೂರು ಗ್ರಾಮದಲ್ಲಿ ಕೃಷಿಗೆ ಪೂರಕವಾದ ವಾತಾವರಣ ಮತ್ತು ಮಣ್ಣು ಇದೆ. ಮಳೆಯನ್ನೇ ನಂಬಿ ಕೃಷಿ ಮಾಡಬೇಕಾದ ಅನಿವಾರ್ಯತೆ ಇದೆ. ಕೆರೆ ಹೂಳು ತೆಗೆಯಬೇಕು. ಅರ್ಧಂಬಧರ್ ಕೆಲಸ ಮಾಡಿದರೆ ಪ್ರಯೋಜನವಿಲ್ಲ. ಊರು ಬಾಗಿಲ ಕೆರೆಯನ್ನು ಆಳ ಮಾಡಬೇಕು. ಪೂರ್ಣ ಪ್ರಮಾಣಲ್ಲಿ ಹೂಳು ತೆಗೆದು ನೀರು ಸಂಗ್ರಹ ಮಾಡಿದರೆ, ಬೇಸಿಗೆಯಲ್ಲಿ 100 ಎಕರೆ ಜಾಗಕ್ಕೆ ನೀರು ತೆಗೆದುಕೊಳ್ಳಬಹುದು. ದುಶ್ಯಂತ್ ಕುಮಾರ್ ಶುಂಠಿ ಕೃಷಿಕ, ಗಣಗೂರು ಗ್ರಾಮ