ಹುಲ್ಲೇನಹಳ್ಳಿ ಗ್ರಾಮದ ಕೆರೆ ತುಂಬಿಸುವ ರಾಯಸಮುದ್ರ ಏತ ನೀರಾವರಿ ಯೋಜನೆಗೆ ಶಾಸಕ ಸಿ.ಎನ್.ಬಾಲಕೃಷ್ಣ ಚಾಲನೆ ನೀಡಿದರು. ಯೋಗೇಶ್, ಚಂದ್ರು, ನಾರಾಯಣಪ್ಪ, ಹೊನ್ನೇಗೌಡ, ದಸರಿಘಟ್ಟ ಕಿರಣ್, ಮಂಜುನಾಥ್, ಇದ್ದರು. 
ಜಿಲ್ಲೆ

ರೈತರ ಅನುಕೂಲಕ್ಕಾಗಿ 42 ಕೆರೆಗಳಿಗೆ ನೀರು

ನುಗ್ಗೇಹಳ್ಳಿ: ತಾಲೂಕಿನ ರೈತರ ಹಿತ ಕಾಪಾಡುವ ದೃಷ್ಟಿಯಿಂದ ಸರ್ಕಾರದ ಅನುದಾನ ನೆಚ್ಚಿಕೊಳ್ಳದೆ ವೈಯಕ್ತಿಕವಾಗಿ ತಾಲೂಕಿನ 42 ಕೆರೆಗಳನ್ನು ತುಂಬಿಸಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಹೋಬಳಿಯ ಹುಲ್ಲೇನಹಳ್ಳಿ ಗ್ರಾಮದ ಕೆರೆಗೆ ಪೈಪ್‌ಲೈನ್ ಮೂಲಕ ನೀರೊದಗಿಸುವ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಕಳೆದ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ವೈಯಕ್ತಿಕವಾಗಿ 13 ಲಕ್ಷ ರೂ. ನೀಡಿ ರಾಯಸಮುದ್ರ ಕಾವಲು ಕೆರೆಯಿಂದ 3 ಕಿ.ಮೀ. ಪೈಪ್‌ಲೈನ್ ಮೂಲಕ ಮೋಟಾರ್ ಅಳವಡಿಸಿ ಕೆರೆಗೆ ನೀರು ಹರಿಸುವ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಗ್ರಾಮದಲ್ಲಿ ಈಗಾಗಲೇ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಕಟ್ಟಡವನ್ನು 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಜತೆಗೆ ಗ್ರಾಮದ ಪರಿಮಿತಿಯಲ್ಲಿ ಕಾಂಕ್ರೀಟ್ ರಸ್ತೆ, ಒಳ ಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.

ಗ್ರಾಮದ ಹೊರಗಿನ ರಸ್ತೆ ಅಭಿವೃದ್ಧಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಯಲ್ಲಮ್ಮ ದೇವಿ ಹಾಗೂ ಚಿಕ್ಕಮ್ಮ ದೇವಾಲಯಗಳ ನಿರ್ಮಾಣಕ್ಕೆ ತಲಾ 2 ಲಕ್ಷ ರೂ. ಅನುದಾನ ಕೊಡುವುದಾಗಿ ಭರವಸೆ ನೀಡಿದರು.

ಗ್ರಾಮದ ಬಗ್ಗೆ ಅಸಮಾಧಾನ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗ್ರಾಮದಲ್ಲಿ ಶಾಸಕರ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದರೂ ತಮಗೆ ಹೆಚ್ಚು ಮತ ಬರಲಿಲ್ಲ. ಆದರೂ ಕೊಟ್ಟ ಮಾತಿನಂತೆ ಕೆರೆ ತುಂಬಿಸುವ ಯೋಜನೆಗೆ ವೈಯಕ್ತಿಕವಾಗಿ ಹಣ ನೀಡಿ ಯೋಜನೆ ಪೂರ್ಣಗೊಳಿಸಿದ್ದೇನೆ. ಮುಂದಿನ ದಿನಗಳಲ್ಲೂ ಗ್ರಾಮದ ಅಭಿವೃದ್ಧಿಗೆ ಹೆಚ್ಚು ಸಹಕಾರ ನೀಡುವುದಾಗಿ ತಿಳಿಸಿದರು.

ಹಾಸನ ಜಿಲ್ಲಾ ಯಾದವ ಸಂಘದ ಮಾಜಿ ಅಧ್ಯಕ್ಷ ಹುಲ್ಲೇನಹಳ್ಳಿ ನಾರಾಯಣ್ ಮಾತನಾಡಿ, ಗ್ರಾಮಸ್ಥರ ಮನವಿಯಂತೆ ಶಾಸಕರು ಈಗಾಗಲೇ 13 ಲಕ್ಷ ರೂ.ಖರ್ಚು ಮಾಡಿ ಯೋಜನೆ ಪೂರ್ಣಗೊಳಿಸಿದ್ದಾರೆ. ಇನ್ನು 4 ಲಕ್ಷ ರೂ.ವೆಚ್ಚದಲ್ಲಿ ಸಂಪೂರ್ಣ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ . ಗ್ರಾಮದಲ್ಲಿ ದೇವಾಲಯಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ. ಗ್ರಾಮದ ಮುಖ್ಯರಸ್ತೆ ಅಭಿವೃದ್ಧಿಗೂ ಸದ್ಯದಲ್ಲೇ ಅನುದಾನದ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಜೆಡಿಎಸ್ ಯುವ ಮುಖಂಡ ಅಣತಿ ಯೋಗೇಶ್ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ ಮಾತನಾಡಿದರು. ಯೋಜನೆಗೆ ಚಾಲನೆ ನೀಡುವ ಮುನ್ನ ಗ್ರಾಮದ ಶ್ರೀ ಸಂಗಮೇಶ್ವರ ಸ್ವಾಮಿ, ಶ್ರೀ ಲಕ್ಷ್ಮೀದೇವಿ, ಯಲ್ಲಮ್ಮ ದೇವಿ, ಚಿಕ್ಕಮ್ಮ ದೇವಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಯೋಜನೆಗೆ ಚಾಲನೆ ನೀಡಿದರು.

ಟಿಎಪಿಎಂಎಸ್ ನಿರ್ದೇಶಕ ತೋಟಿ ನಾಗರಾಜ್, ನುಗ್ಗೇಹಳ್ಳಿ ಗ್ರಾಪಂ ಅಧ್ಯಕ್ಷ ಹೊನ್ನೇಗೌಡ, ಮಾಜಿ ಅಧ್ಯಕ್ಷ ಮಂಜುನಾಥ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ವಿಕ್ಟರ್, ಮಧು, ಗ್ರಾಪಂ ಸದಸ್ಯರಾದ ಕಮಲಾಕ್ಷಿ ಗಿರೀಶ್, ನಟರಾಜ್ ಯಾದವ್, ಉದ್ಯಮಿ ಚಿಪ್ಪಿನ ಚಂದ್ರು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಶಂಕರ್, ಅಮಾಸಯ್ಯ, ರಂಗಪ್ಪ, ಮುಖಂಡರಾದ ದುಗ್ಗೇನಹಳ್ಳಿ ವೀರೇಶ್, ಬೆಳಗಳ್ಳಿ ಪುಟ್ಟಸ್ವಾಮಿ, ಹೊಸೂರು ಚಂದ್ರು, ಕುಳ್ಳೆಗೌಡ, ಹುಲಿಕೆರೆ ಸಂಪತ್ ಕುಮಾರ್, ಎಂ.ಎಸ್.ಸುರೇಶ್, ಮಾದಲಗೆರೆ ದಿಲೀಪ್, ನವೀನ್ ಕುಮಾರ್, ಗುಡಿ ಗೌಡ್ರು ರವೀಶ್, ಯಲ್ಲಪ್ಪ, ಇತರರು ಇದ್ದರು.