150 ತಾಲೂಕಿನ ಸಾವಿರಾರು ಹಳ್ಳಿಗಳಲ್ಲಿ ನೀರಿಗೆ ತತ್ವಾರ, ಮೇವಿಗೂ ಬರ ಮಳೆ ವಿಳಂಬವಾದರೆ ಹರೋಹರ | ತುರ್ತು ನಿಗಾಗೆ ಡಿಸಿಗಳಿಗೆ ಸೂಚನೆ
| ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಬರದಿಂದ ಕಂಗೆಟ್ಟಿರುವ ಕರ್ನಾಟಕದ 150 ತಾಲೂಕುಗಳಲ್ಲಿ ಪರಿಸ್ಥಿತಿ ಗಂಭೀರಗೊಂಡಿದ್ದು, ರಾಜ್ಯಾದ್ಯಂತ ಶೀಘ್ರ ಉತ್ತಮ ಪ್ರಮಾಣದ ಮಳೆ ಬಾರದೇ ಇದ್ದಲ್ಲಿ ಸಾವಿರಾರು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಲಿದೆ. ಹೀಗಾಗಿ ಮುಂದಿನ 15 ದಿನವಾದರೂ ನಿತ್ಯ ಆಯಾ ಜಿಲ್ಲೆಗಳ ಕುಡಿವ ನೀರಿನ ಸಮಸ್ಯೆಗೆ ಸ್ಪಂದಿಸಿ, ತಕ್ಷಣ ಪರಿಹಾರ ಕಂಡುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚಿಸಿದೆ.
ಒಂದು ವಾರದಿಂದ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದರೂ, ಅದು ಬರ, ಕುಡಿಯುವ ನೀರಿನ ಅಭಾವ ನೀಗಿಸುವ ಪ್ರಮಾಣದಲ್ಲಿಲ್ಲ. ಕುಡಿಯುವ ನೀರಿನ ಸಮಸ್ಯೆ ಜತೆಗೆ ತಾಪಮಾನ ಹೆಚ್ಚಳದಿಂದಾಗಿ ಜನರ ಜತೆ ಜಾನುವಾರುಗಳು ಪರಿತಪಿಸುವಂತಾಗಿದೆ. ಮೇವಿನ ಕೊರತೆ ಗಂಭೀರವಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ ಗಳೊಂದಿಗೆ ಸಮಾಲೋಚಿಸಿರುವ ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ಕಾರಣಕ್ಕೂ ಪರಿಸ್ಥಿತಿ ಕೈ ಮೀರದಂತೆ ನೋಡಿಕೊಳ್ಳಬೇಕೆಂದು ಡಿಸಿಗಳಿಗೆ ಸೂಚನೆ ನೀಡಿದ್ದಾರೆ.
ಸಮಗ್ರ ಮಾಹಿತಿ ಸ್ವೀಕಾರ: ಮುಂದಿನ ಒಂದು ವಾರದಲ್ಲಿ ಮಳೆಯಾಗುವ ಲಕ್ಷಣಗಳಿವೆ. ಹಾಗೆಂದು ಕೈಕಟ್ಟಿ ಕೂರದಂತೆ ಹಿರಿಯ ಅಧಿಕಾರಿಗಳು ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ. ಗ್ರಾಮೀಣ ಪ್ರದೇಶದೊಂದಿಗೆ ನಗರ ಪ್ರದೇಶದ ವಿವಿಧ ವಾರ್ಡ್ಗಳ ಪರಿಸ್ಥಿತಿ ಕೂಡ ಅವಲೋಕಿಸಲಾಗಿದೆ. ಮೇವಿನ ಕಿಟ್ ವಿತರಣೆ, ಮೇವು ಲಭ್ಯತೆ, ಮೇವು ಖರೀದಿಗೆ ಟೆಂಡರ್, ಗೋಶಾಲೆ ಇತ್ಯಾದಿ ಬರ ಪರಿಹಾರದ ವಿವರ ಪಡೆದಿದ್ದಾರೆ.
ಮಾರ್ಗಸೂಚಿ ಇಲ್ಲ?: ಜಿಲ್ಲಾ ವಿಪತ್ತು ಉಪ ಶಮನ ನಿಧಿಗಾಗಿ ರಾಜ್ಯ ಸರ್ಕಾರ ಅಂದಾಜು 150 ಕೋಟಿ ರೂ. ಬಿಡುಗಡೆ ಮಾಡಿ ಮೂರ್ನಾಲ್ಕು ವರ್ಷಗಳಾಗಿದೆ. ಆದರೆ, ಈ ಅನುದಾನದ ಬಳಕೆಗೆ ಸೂಕ್ತ ಮಾರ್ಗಸೂಚಿ ಹೊರಡಿಸಿಲ್ಲ. ಚಿತ್ರದುರ್ಗ ಜಿಲ್ಲೆಗೆ 4.75 ಕೋಟಿ ರೂ. ಜಿಲ್ಲಾ ವಿಪತ್ತು ನಿಧಿ ಅನುದಾನ ಬಿಡುಗಡೆಯಾಗಿದೆ.
ನೀತಿಸಂಹಿತೆ ವಿನಾಯಿತಿಗೆ ಮೊರೆ: ರಾಜ್ಯದ ಬರಪೀಡಿತ 223 ತಾಲೂಕುಗಳಲ್ಲಿ ಬರ ಹಾಗೂ ಕುಡಿಯುವ ನೀರು ನಿರ್ವಹಣೆ ಪರಿಶೀಲನಾ ಸಭೆ ನಡೆಸಲು ಅನುಮತಿ ಕೋರಿ ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ. ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿರುವ ಹಿನ್ನೆಲೆಯಲ್ಲಿ ಸಭೆ ನಡೆಸಿ, ನಿರ್ಧಾರ ಕೈಗೊಳ್ಳಲು ಮಾದರಿ ನೀತಿ ಸಂಹಿತೆಯಿಂದ ವಿನಾಯಿತಿ ನೀಡಬೇಕೆಂದು ವಿನಂತಿಸಿದ್ದಾರೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ರಾಜ್ಯದಲ್ಲಿ ಪ್ರಸಕ್ತ ವರ್ಷ ಮುಂಗಾರು ಮಳೆ ವಿಳಂಬವಾಗಲಿದೆ. ಮುಂದಿನ ಎರಡು ತಿಂಗಳು ಜನ- ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ, ನಿರ್ವಹಣೆ ಅತ್ಯವಶ್ಯಕವಾಗಿರುತ್ತದೆ ಎಂದು ಸಚಿವರು ಪತ್ರದಲ್ಲಿ ತಿಳಿಸಿದ್ದಾರೆ.
ಎಲ್ಲೆಲ್ಲಿ ನೀರಿನ ಸಮಸ್ಯೆ: ಚಿಕ್ಕಬಳ್ಳಾಪುರ ಜಿಲ್ಲೆಯ 6 ತಾಲೂಕಿನ 30 ಗ್ರಾಪಂಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅದೇ ರೀತಿ ಚಿತ್ರದುರ್ಗ 5-75, ತುಮಕೂರು 9-64, ಚಿಕ್ಕಮಗಳೂರು 5-36, ದಾವಣಗೆರೆ 6-42, ಬಳ್ಳಾರಿ 3-18, ಕಲಬುರಗಿ 9-63, ಬೀದರ್3-14, ಕೊಪ್ಪಳ 6-23, ಬೆಂ.ನಗರ 4-18, ಮಂಡ್ಯ 7-20, ಹಾಸನ 7-82, ಬಾಗಲಕೋಟೆ 3-18, ರಾಮನಗರ 5-31, ಚಾಮರಾಜನಗರ 3-9, ರಾಯಚೂರು 7-58, ವಿಜಯಪುರ 7-50, ಯಾದಗಿರಿ 4-29, ಬೆಳಗಾವಿ 12-97, ದಕ್ಷಿಣಕನ್ನಡ 1-1, ಧಾರವಾಡ 5-22, ಗದಗ 4-9, ಹಾವೇರಿ 7-56, ಶಿವಮೊಗ್ಗ 2-5, ಉತ್ತರ ಕನ್ನಡ 2-16, ಮೈಸೂರು 6-17, ಕೊಡಗು 2-7, ವಿಜಯನಗರ 6-92 ಹಾಗೂ ಕೋಲಾರ ಜಿಲ್ಲೆಯ 4 ತಾಲೂಕುಗಳ 4 ಗ್ರಾಪಂಗಳ ವ್ಯಾಪ್ತಿಯಲ್ಲಿ ಕುಡಿವ ನೀರಿಗೆ ತೀವ್ರ ಸಮಸ್ಯೆ ಎದುರಾಗಿದೆ.
. 150 ತಾಲೂಕು 1006 ಗ್ರಾಂಪಂಗಳಲ್ಲಿ ನೀರಿಗೆ ತತ್ವಾರ
. 438 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ
. 750ಕ್ಕೂ ಹೆಚ್ಚು ಖಾಸಗಿ, ಸರ್ಕಾರಿ ಟ್ಯಾಂಕರ್ ಬಳಕೆ
. ಕುಡಿವ ನೀರು ಪೂರೈಸಲು 1560 ಕೊಳವೆ ಬಾವಿ ಆಯ್ಕೆ
. 1271 ಹಳ್ಳಿಗಳಿಗೆ ಖಾಸಗಿ ಕೊಳವೆ ಬಾವಿ ನೀರು ಪೂರೈಕೆ