ಮಂಗಳೂರು: ತುಂಬೆ ಆಣೆಕಟ್ಟಿನಲ್ಲಿ ನೀರಿನ ಸಂಗ್ರಹ ಮಟ್ಟ ಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡುವ ಉದ್ದೇಶದಿಂದ ಕಾರ್ ವಾಶ್, ಸರ್ವೀಸ್ ಸ್ಟೇಷನ್ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಪೈಪ್‌ಲೈನ್ ನೀರಿನ ಸಂಪರ್ಕ ಕಡಿತಗೊಳಿಸಿ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ನೇತ್ರಾವತಿ ನದಿಯಲ್ಲಿ ಒಳ ಹರಿವು ಸಂಪೂರ್ಣ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕುಸಿದು ನೀರಿನ ಕೊರತೆ ಎದುರಾಗಿದೆ. ಪ್ರಸಕ್ತ ಲಭ್ಯ ಇರುವ ನೀರನ್ನು ಈ ಬೇಸಿಗೆ ಅವಧಿ ಅಂತ್ಯದವರೆಗೆ ಮಿತವಾಗಿ ಬಳಕೆ ಮಾಡಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಮಿತವ್ಯಯವಾಗದಂತೆ ತಡೆಯುವುದು ನಿವಾರ್ಯ. ಈಗಾಗಲೇ ಸಮರ್ಪಕ ಕುಡಿಯುವ ನೀರಿನ ಪೂರೈಕೆಗೆ ನೀರಿನ ರೇಷನಿಂಗ್ ಮಾಡಲಾಗಿದೆ. ಬಹುತೇಕ ಕಡೆಗಳಲ್ಲಿ ಈ ನೀರು ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಿರುವ ದೂರು ಬಂದ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಹಲವು ಉದ್ಯಮಗಳಿಗೆ ನೀರಿನ ಸಂಪರ್ಕ ಕಡಿತಗೊಳಿಸುವ ಕ್ರಮ ಕೈಗೊಂಡಿದೆ.
*ನೀರಿನ ಬಿಲ್‌ತಂತ್ರಾಂಶದಲ್ಲಿ ದಾಖಲು
ಪೈಪ್‌ಲೈನ್ ನೀರಿನ ಸಂಪರ್ಕ ಕಡಿತಗೊಳಿಸಲು ನೀರು ಸರಬರಾಜು ವಿಭಾಗದ ಕಾರ್ಯಪಾಲಕ ಅಭಿಯಂತರರ ಮೇಲ್ವಿಚಾರಣೆಯಲ್ಲಿ ಆಯಾ ವಾರ್ಡಿನ ಕಿರಿಯ, ಸಹಾಯಕ ಅಭಿಯಂತರರು ಸಂಬಂಧಪಟ್ಟ ವಾಲ್ವ್‌ಮನ್‌ಗಳ ಸಹಕಾರದೊಂದಿಗೆ ಕಾರ್‌ವಾಸ್, ಸರ್ವಿಸ್ ಸ್ಟೇಷನ್ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಪಾಲಿಕೆಯಿಂದ ನೀಡಲಾದ ನೀರಿನ ಸಂಪರ್ಕ ಜೋಡಣೆಯನ್ನು ಕಡಿತ ಮಾಡಲು ಆದೇಶಿಸಲಾಗಿದೆ. ಕಡಿತದ ವಿವರವನ್ನು ನೀರಿನ ಬಿಲ್‌ತಂತ್ರಾಂಶದಲ್ಲಿ ದಾಖಲಿಸಿ ವರದಿಯನ್ನು ಕಾರ್ಯಪಾಲಕ ಅಭಿಂಯತರರು ಕಚೇರಿಗೆ ಸಲ್ಲಿಸುವಂತೆ ಆದೇಶದಲ್ಲಿ ಪಾಲಿಕೆ ಆಯುಕ್ತರು ಸೂಚಿಸಿದ್ದಾರೆ.
----------------------
ಕುಡಿಯುವ ಉದ್ದೇಶದಿಂದ ತುಂಬೆಯಿಂದ 2 ದಿನಗಳಿಗೊಮ್ಮೆ ನಗರದ ಹಲವಡೆ ನೀರು ಪೂರೈಕೆ ಸುಸೂತ್ರವಾಗಿ ನಡೆಯುತ್ತಿದೆ. ಕುಡಿಯುವ ಉದ್ದೇಶಿತ ನೀರು ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುವ ಬಗ್ಗೆ ದೂರು ಬಂದಿರುವುದರಿಂದ ಕುಡಿಯುವ ನೀರಿಗೆ ಆದ್ಯತೆ ನೀಡುವ ಉದ್ದೇಶದಿಂದ ಕಾರ್ ವಾಶ್, ಸರ್ವೀಸ್ ಸ್ಟೇಷನ್ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಪೈಪ್‌ಲೈನ್ ನೀರಿನ ಸಂಪರ್ಕ ಕಡಿತಗೊಳಿಸಲಾಗಿದೆ. ಈ ವಿವರ ಕಡಿತದ ವಿವರವನ್ನು ನೀರಿನ ಬಿಲ್‌ತಂತ್ರಾಂಶದಲ್ಲಿ ದಾಖಲಿಸಲು ಸೂಚಿಸಲಾಗಿದೆ.
ಆನಂದ್, ಕಮಿಷನರ್, ಮನಪಾ ಮಂಗಳೂರು