ಕಾರಟಗಿ: ತುಂಗಾಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಮಾ. 2 ರಂದು ಜಲಾಶಯದ ಎಡದಂಡೆಯ 31, 32ನೇ ವಿತರಣಾ ಕಾಲುವೆಗೆ ನೀರು ಹರಿಸದಿರುವ ನಿರ್ಧಾರ ಖಂಡಿಸಿ ಹಾಗೂ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ನೀರವಾರಿ ಇಲಾಖೆ ಅಧಿಕಾರಿ ಸೂಗಪ್ಪ ಹಾಗೂ ಶಿರಸ್ತೇದಾರ್ ಸಾವಿತ್ರಿಬಾಯಿಗೆ ರೈತರು ಮತ್ತು ನೀರು ಬಳಕೆದಾರರ ಸಂಘ ಪಟ್ಟಣದಲ್ಲಿ ಶುಕ್ರವಾರ ಮನವಿ ಸಲ್ಲಿಸಿತು.
ರೈತ ಮುಖಂಡ ಶರಣೇಗೌಡ ಬೂದಗುಂಪಾ ಹಾಗೂ ನೀರು ಬಳಕೆದಾರರ ಸಂಘದ ಅಧ್ಯಕ್ಷ ಸಂಗಮೇಶಗೌಡ ಮಾತನಾಡಿ, ಜನಪ್ರತಿನಿಧಿಗಳ ಮಾತು ನಂಬಿ ರೈತರು ಭತ್ತ ನಾಟಿ ಮಾಡಿದ್ದಾರೆ. ಇದಲ್ಲದೆ, ರಸಗೊಬ್ಬರ, ಕೂಲಿ ಆಳು, ಬೆಳೆ ರಕ್ಷಣೆಗೆ ಸಾವಿರಾರೂ ರೂ. ವ್ಯಯಿಸಿದ್ದಾರೆ. ಭತ್ತ ತೆನೆ ಬೀಡುವ ವೇಳೆ ನೀರು ಸ್ಥಗಿತಗೊಳಿಸಿದರೆ ಬೆಳೆಗೆ ಹೊಡೆತ ಬೀಳಲಿದೆ. ಸಮಸ್ಯೆಯಾಗದಂತೆ ಕ್ರಮವಹಿಸುವ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತು ನೀಡಿದ್ದಾರೆ. ಮಧ್ಯದಲ್ಲಿ ಈ ರೀತಿಯ ವರ್ತನೆ ಸರಿಯಲ್ಲ. ತುಂಗಾಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧಿಕಾರಿಗಳು ಮಾ.2 ರಂದು ಕಾಲುವೆಯ ನೀರು ತಡೆಹಿಡಿಯಬಾರದು. ನೀರು ಹರಿಸದಿರುವ ನಿರ್ಧಾರ ಕೈಬಿಟ್ಟು, ರೈತರ ಹಿತಕಾಯಬೇಕು. ಅನ್ನದಾತರ ಸಮಸ್ಯೆ ಅರಿಯದೆ ನೀರು ನಿಲ್ಲಿಸಿದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ನೀರು ಬಳಕೆದಾರರ ಸಂಘದ ಧಶರಥ ರಡ್ಡಿ, ತಾಲೂಕಿನ ಬೂದಗುಂಪಾ, ಹಾಲಸಮುದ್ರ, ಮರ್ಲಾನಹಳ್ಲಿ, ಜೂರಟಗಿ, ಹುಳ್ಕಿಹಾಳ, ಸಿದ್ದಾಪುರ, ಯರಡೋಣ, ಚಳ್ಳೂರು, ಈಳಿಗನೂರು, ಕಿಂದಿಕ್ಯಾಂಪ್, ಚನ್ನಳ್ಳಿ, ಸಿದ್ರಾಂಪುರ ಸೇರಿ ಇತರ ಗ್ರಾಮಗಳ ರೈತರಿದ್ದರು.