ಜಿಲ್ಲೆ

ಜಲ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಲಿ

ವಿವೇಕಾನಂದ ದಾಸನಕೊಪ್ಪ

ಹಿರೇಕೆರೂರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ರಾಜ್ಯಾದ್ಯಂತ ಈಗಾಗಲೇ ಸುಮಾರು 750 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ ಎಂದು ತಾಲೂಕು ಧ.ಗ್ರಾ. ಯೋಜನಾಧಿಕಾರಿ ಮಂಜುನಾಥ ಎಂ. ಹೇಳಿದರು.

ತಾಲೂಕಿನ ಚನ್ನಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಪುನಶ್ಚೇತನಗೊಂಡ 617ನೇ ಕೆರೆಯಂಗಳದಲ್ಲಿ ಗ್ರಾಪಂ ಮತ್ತು ಕೆರೆ ಅಭಿವೃದ್ಧಿ ಸಮಿತಿ ವತಿಯಿಂದ ಏರ್ಪಡಿಸಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೆರೆಗಳು ಚರಂಡಿ ನೀರು, ಕಸ-ಕಡ್ಡಿ ಸೇರಿ ಕಲುಷಿತಗೊಳ್ಳುತ್ತಿವೆ. ಆದರೆ, ಚನ್ನಳ್ಳಿ ಕೆರೆ ಸ್ವಚ್ಛಂದವಾಗಿದೆ. ಕೆರೆಗಳು ಹೆಚ್ಚು ಕಾಲ ಒಡಲಲ್ಲಿ ನೀರು ಉಳಿಸಿಕೊಳ್ಳುವುದರಿಂದ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಸುಧಾರಿಸುತ್ತದೆ. ಜೀವ ಜಲ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದರು.

ನಿಂಗರಾಜ ಚನ್ನಳ್ಳಿ ಮಾತನಾಡಿ, ಕೆರೆ ಸುತ್ತಲೂ ಕೃಷಿ ಭೂಮಿ ಮತ್ತು ಗುಡ್ಡಗಳಿಂದ ಕೂಡಿದ್ದು, ನೀರಿನ ಹರಿಯುವ ಮೂಲ ಇದೆ. ಮುಂದಿನ ದಿನಗಳಲ್ಲಿ ಕೆರೆ ಇನ್ನಷ್ಟು ಮಾದರಿ ಮಾಡಬಹುದು ಎಂದರು.

ಕೆರೆ ಸಮಿತಿ ಸದಸ್ಯ ದೇವರಾಜ ಹಂಚಿನಮನಿ ಮಾತನಾಡಿ, ಯೋಜನೆಯೊಂದಿಗೆ ಕೈಜೋಡಿಸಿ ಸಸಿಗಳನ್ನು ಬೆಳೆಸುವ ಜತೆಗೆ ಕೆರೆ ಸುತ್ತಲೂ ತಂತಿ ಬೆಲೆ ವ್ಯವಸ್ಥೆ ಮಾಡುತ್ತೇವೆ ಎಂದರು.

ಕೆರೆ ಸಮಿತಿ ಅಧ್ಯಕ್ಷ ಮೋಹನಗೌಡ ನಿಂಗಜ್ಜೇರ ಮಾತನಾಡಿದರು. ಹನುಮಂತಪ್ಪ ಎಂ., ಬಂಗಾರಪ್ಪ ನಲವಾಲದ, ಲೋಕಸ್ವಾಮಿ ಮಠದ, ವೇದಮೂರ್ತೆಪ್ಪ, ನಿಂಗಪ್ಪ, ಒಕ್ಕೂಟ ಅಧ್ಯಕ್ಷೆ ಲಲಿಲಮ್ಮ ಮಠದ, ದೂದಿಹಳ್ಳಿ ಒಕ್ಕೂಟ ಅಧ್ಯಕ್ಷೆ ವಿಜಯಮ್ಮ, ವಲಯದ ಮೇಲ್ವಿಚಾರಕ ಕಿರಣ್ ಎಂ.ಡಿ., ಕೃಷಿ ಮೇಲ್ವಿಚಾರಕ ಧರ್ಮಪ್ಪ ಜೋಗರ. ಸೇವಾಪ್ರತಿನಿಧಿ ದಾಕ್ಷಾಯಿಣಿ ಎಲ್. ಇತರರಿದ್ದರು.