ಜಿಲ್ಲೆ

ನೀರಿನ ಸಂರಕ್ಷಣೆ, ಸಮರ್ಪಕ ನಿರ್ವಹಣೆ

ಇಂದಿರಾ ಎನ್ ಕೆ

ಬೈಂದೂರು: ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಪಪಂ ವ್ಯಾಪ್ತಿಯ ಕಿಂಡಿ ಅಣೆಕಟ್ಟು ನಿರ್ವಹಣೆ, ಕುಡಿಯುವ ನೀರು, ಬೀದಿದೀಪ, ತ್ಯಾಜ್ಯ ನಿರ್ವಹಣೆ ಹಾಗೂ ವಸತಿ ಯೋಜನೆಗಳ ಪ್ರಗತಿ ಬಗ್ಗೆ ಪಪಂ ಅಧಿಕಾರಿಗಳೊಂದಿಗೆ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಚರ್ಚಿಸಿದರು.

ಕುಡಿಯುವ ನೀರಿನ ಸಮಸ್ಯೆಯ ಪ್ರದೇಶಗಳ ಬಗ್ಗೆ ಮಾಹಿತಿ ಪಡೆದುಕೊಂಡ ಶಾಸಕರು, ಬೇಸಿಗೆ ಹತ್ತಿರವಿರುವುದರಿಂದ ನೀರಿನ ಸಂರಕ್ಷಣೆ ಹಾಗೂ ಸಮರ್ಪಕ ನಿರ್ವಹಣೆ ಅಗತ್ಯವಿರುವುದರಿಂದ ಪಪಂ ವ್ಯಾಪ್ತಿಯಲ್ಲಿನ ಎಲ್ಲ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಹಾಕುವುದು, ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಬರಬಹುದಾದ ಕಡೆಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಹಾಗೂ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುವಂತೆ ಸೂಚನೆ ನೀಡಿದರು.

ಬೀದಿದೀಪಗಳ ಸಮರ್ಪಕ ನಿರ್ವಹಣೆ, ವಸತಿ ಯೋಜನೆ ಫಲಾನುಭವಿಗಳಿಗೆ ಸಹಾಯಧನ ಪಾವತಿ, ಹೊಸ ಮನೆ ಬೇಡಿಕೆ ಬಗ್ಗೆ ಪ್ರಸ್ತಾವನೆ ಕಳುಹಿಸುವುದು, ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿ ಪ್ರಕ್ರಿಯೆ ತ್ವರಿತಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿ, ಮುಂದಿನ ದಿನಗಳಲ್ಲಿ ಪಪಂಗೆ ಸಂಬಂಧಿಸಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ಪಪಂ ಮುಖ್ಯಾಧಿಕಾರಿ ಅಜಯ್ ಭಂಡಾರ್‌ಕರ್, ಕಂದಾಯ, ನೀರು ಮತ್ತು ನೈರ್ಮಲ್ಯ ವಿಭಾಗದ ಹಾಗೂ ವಸತಿ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.