ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಬೈಂದೂರಿನ ಹಲವೆಡೆ ಜಲದಿಗ್ಬಂಧನ ಏರ್ಪಟ್ಟಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ ನಾವುಂದ, ಸಾಲ್ಬುಡ, ಬಡಾಕೆರೆ ಭಾಗದ ಪ್ರದೇಶ ಮಳೆ ನೀರಿನಿಂದ ಜಲಾವೃತವಾಗಿದೆ. ಮನೆಗಳಿಗೂ ನೀರು ನುಗ್ಗಿದ್ದು, ಸೌಪರ್ಣಿಕಾ ನದಿ ಪಾತ್ರದ ಗ್ರಾಮದ ಜನರು ಜಲದಿಗ್ಭಂದನಕ್ಕೊಳಗಾಗಿದ್ದಾರೆ. ಗುರುವಾರ ಮುಂಜಾನೆಯಿಂದಲೇ ಇಲ್ಲಿನ ನಿವಾಸಿಗಳು ದೋಣಿಯನ್ನು ಆಶ್ರಯಿಸುವಂತಾಗಿದೆ.
ಬೈಂದೂರಿನ ಬಡಾಕೆರೆಯಲ್ಲಿ ಮನೆಗಳಲ್ಲಿರುವ ಜನರು ಮತ್ತು ಜಾನುವಾರುಗಳು ಅಕ್ಷರಶಃ ಜಲದಿಗ್ಭಂದನಕ್ಕೊಳಗಾಗಿದ್ದಾರೆ. ಈ ಭಾಗದ ಕೃಷಿಕರು ತಮ್ಮ ಜಾನುವಾರು ಬಿಟ್ಟು ಮನೆಯಿಂದ ಹೊರಬರಲು ತಯಾರಿಲ್ಲ. ನೆರೆ ಹಾವಳಿ ಪ್ರದೇಶಗಳಲ್ಲಿನ ಜನರನ್ನು ದೋಣಿಗಳ ಮೂಲಕ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಈ ಭಾಗದ ರಸ್ತೆ ನೀರಿನಲ್ಲಿ ಮುಳುಗಡೆಯಾಗಿರುವುದರಿಂದ ಜನರು ದೋಣಿ ಅವಲಂಬಿಸುವಂತಾಗಿದೆ.
ಪ್ರತಿ ವರ್ಷ ಮಳೆಗಾಲ ಬಂದರೆ ನಮಗೆ ಸಮಸ್ಯೆ ತಪ್ಪಿದ್ದಲ್ಲ. ಮಳೆಗಾಲದಲ್ಲಿನ ಇಲ್ಲಿನ ನೂರಕ್ಕೂ ಅಧಿಕ ಮನೆಯವರಿಗೆ ತಲೆನೋವು ಕಟ್ಟಿಟ್ಟಬುತ್ತಿ. ಹೆಚ್ಚುಕಮ್ಮಿ ನಾಲ್ಕೈದು ದಿನವಾದರೂ ಮನೆ ಬಿಟ್ಟು ಹೊರಬಾರಲಾಗದ ದುಸ್ಥಿತಿ. ಹಿಡಿಉಪ್ಪು, ದಿನಸಿ, ತರಕಾರಿ ತರಬೇಕಾದರೂ ಕೂಡ ದೋಣಿ ಬೇಕು. ಓಟು ಕೇಳಲು ಬರುವ ಜನಪ್ರತಿನಿಧಿಗಳು ಮಳೆಗಾಲದ ನೆರೆ ಸಮಯ ಬಂದು ವೀಕ್ಷಿಸಿ ಹೋದವರು ಮತ್ತೆ ಈ ಕಡೆ ತಲೆ ಹಾಕೋದಿಲ್ಲ. ಸರ್ಕಾರಿ ಅಧಿಕಾರಿಗಳು ಮಳೆಗಾಲದ ಮೊದಲು ಪ್ರವಾಹದ ಬಂದು ಸ್ಥಳ ವೀಕ್ಷಿಸುತ್ತಾರೆ ಹೊರತು ಇದುವರೆಗೂ ಯಾವುದೇ ಪ್ರಯೋಜನವಾಗಲಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ನಾವುಂದ, ಬಡಾಕೆರೆ, ಮರವಂತೆ ಸಾಲ್ಬುಡ, ಅರೆಹೊಳೆ, ಕೋಣ್ಕಿ, ಕುದ್ರು, ಚಿಕ್ಕಳ್ಳಿ, ಪಡುಕೋಣೆ ಭಾಗದಲ್ಲಿ ನೆರೆ ಸಮಸ್ಯೆ ಈ ವರ್ಷವೇನೂ ಹೊಸತಲ್ಲ. ಹಲವು ದಶಕಗಳಿಂದ ಇಲ್ಲಿನ ಜನಕ್ಕೆ ಮಳೆಗಾಲ ಶಾಪವೆಂದರೂ ತಪ್ಪಾಗದು. ಮಳೆಗಾಲದಲ್ಲಿ ಇಲ್ಲಿ ಮೂರ್ನಾಲ್ಕು ದೋಣಿ ಇಲ್ಲಿಗೆ ಮೀಸಲಿಡಬೇಕು. ಅನಾರೋಗ್ಯ ಪೀಡಿತರು ಸಹಿತ ಆಹಾರ ಸಾಮಾಗ್ರಿ, ದಿನಸಿ ತರಬೇಕಾದರೆ ದೋಣಿ ಏರಿ ಪೇಟೆಗೆ ಬರಬೇಕು. ಒಂದು ದಡದಿಂದ ಮತ್ತೊಂದು ದಡಕ್ಕೆ ಮೂರು ಕಿಲೋಮೀಟರ್ ದೂರ ದೋಣಿ ಚಲಾಯಿಸುವುದು ನಿಜಕ್ಕೂ ಸಾಹಸವಾಗಿದೆ.
ಬೈಂದೂರು ಅಗ್ನಿಶಾಮಕದ ಸಿಬ್ಬಂದಿ ಬೆಳಗ್ಗೆಯಿಂದ ಕೂಡ ನೆರೆ ಪ್ರದೇಶದಲ್ಲಿ ಕಾರ್ಯಚರಣೆ ನಡೆಸುತ್ತಿದ್ದಾರೆ. ಬೈಂದೂರು ತಹಸೀಲ್ದಾರ್ ಪ್ರದೀಪ್, ತಾಪಂ ಕಾರ್ಯನಿರ್ವಹಣಾಧಿಕಾರಿ ಭಾರತಿ, ಬೈಂದೂರು ಅಗ್ನಿಶಾಮಕದ ಸಿಬ್ಬಂದಿ, ಬೈಂದೂರು ಆರಕ್ಷಕ ಠಾಣಾ ಸಿಬ್ಬಂದಿ, ನಾವುಂದ ಹಾಗೂ ನಾಡ ಗ್ರಾಪಂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಸೂಚಿಸಿದ್ದಾರೆ.