ಜಿಲ್ಲೆ

ಕೊಡಗಿನಲ್ಲೇ ನೀರಿನ ಸಮಸ್ಯೆ ಉದ್ಭವಿಸುವ ಆತಂಕ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕೊಡಗಿನಲ್ಲಿ ಈ ಬಾರಿಯೂ ಕಳೆದ ವರ್ಷದಂತೆ ಬಿರು ಬೇಸಿಗೆಯ ಲಕ್ಷಣಗಳು ಈಗಲೇ ಕಂಡು ಬರುತ್ತಿದೆ. ಮಾರ್ಚ್ ಮೊದಲ ವಾರದಲ್ಲೇ ನದಿಗಳಲ್ಲಿ ನೀರಿನ ಹರಿವು ಕ್ಷೀಣವಾಗಿದೆ. ಜಿಲ್ಲೆಯ ಪ್ರಮುಖ ವಾಣಿಜ್ಯ ನಗರ ಕುಶಾಲನಗರದಲ್ಲಿ ಮತ್ತೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಆತಂಕ ಎದುರಾಗಿದೆ.

ಕೊಡಗಿನಲ್ಲಿ ಅಲಲ್ಲಿ ಮೋಡ ಕವಿದ ವಾತಾವರಣ ಇದೆ. ಆದರೆ ಮಳೆ ಬರುವ ಲಕ್ಷಣಗಳು ಇಲ್ಲ ಎನ್ನುತ್ತದೆ ಹವಾಮಾನ ಇಲಾಖೆ ಮಾಹಿತಿ. ತಾಪಮಾನವೂ ತೀವ್ರಗತಿಯಲ್ಲಿ ಏರಿಕೆ ಕಂಡುಬರುತ್ತಿದ್ದು, ಗರಿಷ್ಟ ಉಷ್ಣಾಂಶ 32-33 ಡಿಗ್ರಿ ಸೆಲ್ಸಿಯಸ್ ತನಕ ದಾಖಲಾಗುತ್ತಿದೆ. ಚಳಿಯ ಅನುಭವ ದೂರ ಆಗುತ್ತಿದ್ದು ಕನಿಷ್ಠ ಉಷ್ಣಾಂಶದಲ್ಲೂ ಏರಿಕೆಯಾಗಿದೆ. ಸುಮಾರು 19 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬಿಸಿಲಿನ ಧಗೆಯೂ ಹೆಚ್ಚಾಗುತ್ತಿದೆ.

ಹೆಚ್ಚಾಗುತ್ತಿರುವ ಬಿಸಿಲಿನ ಪರಿಣಾಮ ನೇರವಾಗಿ ಜಲಮೂಲಗಳ ಮೇಲೆ ಆಗುತ್ತಿದ್ದು, ನದಿಗಳಲ್ಲಿ ನೀರಿನ ಹರಿವು ಇಳಿಕೆ ಆಗುತ್ತಿದೆ. ಸದ್ಯದಲ್ಲಿ ಉತ್ತಮ ಮಳೆ ಬಾರದಿದ್ದರೆ ಕಳೆದ ಬಾರಿಯಂತೆ ನೀರಿನ ಹರಿವು ಸ್ಥಗಿತ ಆಗುವ ಎಲ್ಲಾ ಸಾಧ್ಯತೆ ಕಂಡು ಬರುತ್ತಿದೆ. ಕಾವೇರಿ ನದಿಯ ಇಕ್ಕೆಲಗಳಲ್ಲಿ ಇರುವ ಕಾಫಿ ತೋಟಗಳಿಗೆ ಬೃಹತ್ ಪಂಪ್‌ಗಳನ್ನು ಬಳಸಿ ನೀರು ಹಾಯಿಸುವುದರಿಂದ ನದಿಯಲ್ಲಿ ವೇಗವಾಗಿ ನೀರು ಬತ್ತುತ್ತಿದ್ದು ಜಿಲ್ಲೆಯಲ್ಲೇ ತೀವ್ರತರದಲ್ಲಿ ಬೆಳೆಯುತ್ತಿರುವ ಕುಶಾಲನಗರ ಪಟ್ಟಣಕ್ಕೆ ನೀರಿನ ಸಮಸ್ಯೆ ಮೊದಲು ಉಂಟಾಗಲಿದೆ

ಕಾವೇರಿ ನದಿ ಕೊಡಗಿನ ಗಡಿ ದಾಟಿ ಮುಂದಕ್ಕೆ ಹೋಗುವ ಮೊದಲು ಕುಶಾಲನಗರ ಪಟ್ಟಣವನ್ನು ಮೂರು ಕಡೆಯಿಂದ ಸುತ್ತುವರಿದು ಹರಿಯುತ್ತಾ ಸಾಗುತ್ತದೆ.

ಹಾಗಾಗಿ ಕುಶಾಲನಗರಕ್ಕೆ ಕುಡಿಯುವ ನೀರಿನ ಪೂರೈಕೆ ಜವಾಬ್ದಾರಿ ಹೊತ್ತುಕೊಂಡಿರುವ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕುಶಾಲನಗರ ಪುರಸಭೆ ವ್ಯಾಪ್ತಿಗೆ ನೀರು ಪೂರೈಸಲು ಕಾವೇರಿ ನದಿಯನ್ನೇ ಪ್ರಮುಖ ಮೂಲವಾಗಿ ಪರಿಗಣಿಸಿರುವುದರಿಂದ ಬೇಸಿಗೆಯಲ್ಲಿ ಸಮಸ್ಯೆಯ ಸಾಧ್ಯತೆ ದಟ್ಟವಾಗಿದೆ.

ಕುಶಾಲನಗರ ಪುರಸಭೆ ವ್ಯಾಪ್ತಿಯ ಅಂದಾಜು 32 ಸಾವಿರ ಜನಸಂಖ್ಯೆಗೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕುಡಿಯುವ ನೀರು ಪೂರೈಕೆ ಮಾಡಬೇಕಿದೆ. ಪ್ರತಿಯೊಬ್ಬರಿಗೂ ತಲಾ 135 ಲೀಟರ್‌ನಂತೆ ನೀರು ಪೂರೈಕೆ ಮಾಡಿದರೆ ದಿನಕ್ಕೆ ಸುಮಾರು 40 ಲಕ್ಷ ಲೀಟರ್‌ಗಳಷ್ಟು ನೀರು ಬೇಕಾಗುತ್ತದೆ. ಸಾಮಾನ್ಯ ದಿನಗಳಲ್ಲೇ ಸುಮಾರು 30 ಲಕ್ಷ ಲೀಟರ್‌ಗಳಷ್ಟು ಮಾತ್ರ ನೀರು ಪೂರೈಕೆ ಸಾಧ್ಯವಾಗುತ್ತಿದೆ. ಪ್ರತಿ ವಾರ್ಡ್ಗಳಲ್ಲೂ ಕೊಳವೆ ಬಾವಿ ವ್ಯವಸ್ಥೆ ಇದ್ದರೂ ಪ್ರಮುಖವಾಗಿ ಕಾವೇರಿ ನದಿ ನೀರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಕುಶಾಲನಗರಕ್ಕೆ ನೀರು ಪೂರೈಕೆ ಮಾಡುವ ಬೈಚನಹಳ್ಳಿ ಪಂಪ್ ಹೌಸ್ ಬಳಿ ಮುನ್ನೆಚ್ಚರಿಕೆ ಕ್ರಮವಾಗಿ ಕಾವೇರಿ ನದಿಗೆ ಅಡ್ಡಲಾಗಿ ಮರಳಿನ ಚೀಲದ ಕಟ್ಟೆ ಕಟ್ಟಿ ನೀರು ಸಂಗ್ರಹಿಸಲಾಗುತ್ತಿದೆ. ಕಳೆದ ವರ್ಷವೂ ಈ ರೀತಿ ಕಟ್ಟೆ ಕಟ್ಟಲಾಗಿತ್ತಾದರೂ ಅಷ್ಟು ಹೊತ್ತಿಗಾಗಲೇ ಸಮಯ ಮೀರಿದ್ದರಿಂದ ಅಗತ್ಯ ನೀರು ಸಂಗ್ರಹಿಸಿ ಇಟ್ಟುಕೊಳ್ಳಲು ಆಗಿರಲಿಲ್ಲ. ಆದರೆ ಇದೀಗ ನೀರು ಸಂಗ್ರಹಿಸಲಾಗುತ್ತಿದ್ದರೂ ಈಗಿನ ಪರಿಸ್ಥಿತಿಯಲ್ಲಿ ಹೆಚ್ಚೆಂದರೆ ಈ ತಿಂಗಳ ಮಧ್ಯಭಾಗದ ತನಕ ಬರಬಹುದಷ್ಟೇ.

ಕಳೆದ ವರ್ಷವೂ ಕುಶಾಲನಗರದಲ್ಲಿ ಇದೇ ಪರಿಸ್ಥಿತಿ ನಿರ್ಮಾಣ ಆಗಿತ್ತು. ಫೆಬ್ರವರಿ ಅಂತ್ಯಕ್ಕೆ ಕಾವೇರಿಯಲ್ಲಿ ನೀರಿನ ಹರಿವು ಕಡಿಮೆ ಆಗುತ್ತಾ ಬಂದು ಮಾರ್ಚ್ ಮಧ್ಯಭಾಗದಲ್ಲಿ ಸಂಪೂರ್ಣ ಸ್ಥಗಿತ ಆಗಿತ್ತು. ಹಾಗಾಗಿ ನಂತರದ ಎರಡೂವರೆ ತಿಂಗಳು ಕಾಲ ನದಿಯಿಂದ ನೀರೆತ್ತುವ ಪಂಪ್‌ಗಳು ಕೆಲಸವೇ ಮಾಡಿರಲಿಲ್ಲ. ಅಲ್ಲಲ್ಲಿ ಇರುವ ಕೊಳವೆ ಬಾವಿಗಳಿಂದ ನೀರೆತ್ತಿ ಟ್ಯಾಂಕರ್‌ಗಳ ಮೂಲಕ ಮನೆಮನೆಗೆ ಪೂರೈಕೆ ಮಾಡಲಾಗಿತ್ತು. ಬೇಸಿಗೆ ಮಳೆ ಬಾರದಿದ್ದರೆ ಈ ವರ್ಷವೂ ಆದೇ ರೀತಿ ಆಗುವ ಆತಂಕ ಕಾಣಿಸಿಕೊಂಡಿದೆ.

ಜಿಲ್ಲಾ ಕೇಂದ್ರ ಮಡಿಕೇರಿಗೆ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಗಳು ಇಲ್ಲ. ನಗರಕ್ಕೆ ನೀರು ಪೂರೈಕೆ ಮಾಡುವ ಪ್ರಮುಖ ಮೂಲವಾದ ಕೂಟುಹೊಳೆಯಲ್ಲಿ ನೀರಿನ ಸಮೃದ್ಧ ಸಂಗ್ರಹ ಇದೆ. ಕೂಟುಹೊಳೆಗೆ ನೀರು ಸರಬರಾಜು ಮಾಡುವ ಕುಂಡಾಮೇಸ್ತ್ರಿ ಕಿರು ಅಣೆಕಟ್ಟೆಯಲ್ಲೂ ಸಮಸ್ಯೆ ಇಲ್ಲ. 300 ಹೆಚ್‌ಪಿ ಸಾಮರ್ಥ್ಯದ ಮೂರು ಪಂಪ್‌ಗಳ ಮೂಲಕ ಇಲ್ಲಿಂದ ನೀರು ಹರಿಸಲಾಗುತ್ತಿದ್ದು ಅಷ್ಟೆ ನೀರನ್ನು ಮಡಿಕೇರಿಗೆ ಪೂರೈಕೆ ಮಾಡಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪಂಪ್‌ಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲೂ ನಗರಸಭೆ ಆದ್ಯತೆ ಕೊಟ್ಟಿದೆ. 2 ವರ್ಷದ ಹಿಂದೆ ಮೋಟಾರ್ ಕೈಕೊಟ್ಟು ನೀರಿನ ಸಮಸ್ಯೆ ಎದುರಾಗಿದ್ದ ಹಿನ್ನೆಲೆಯಲ್ಲಿ ನೀರಿನ ಸಂಗ್ರಹದ ಜತೆಗೆ ಮೋಟಾರ್‌ಗಳ ನಿರ್ವಹಣೆಗೂ ಕಳೆದ ವರ್ಷದಿಂದ ಆದ್ಯತೆ ಕೊಡಲಾಗುತ್ತಿದೆ.

ಬೇಸಿಗೆಯ ಬೇಗೆ ಜಿಲ್ಲೆಯ ಪ್ರವಾಸಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ. ಕಾವೇರಿ ನದಿಯಲ್ಲಿ ನೀರಿನ ಹರಿವು ಕ್ಷೀಣಿಸುತ್ತಿರುವುದರಿಂದ ದುಬಾರೆಯಲ್ಲಿ ಸೋಮವಾರದಿಂದ (ಮಾ.3) ರ‍್ಯಾಫ್ಟಿಂಗ್ ಕ್ರೀಡೆ ಸ್ಥಗಿತಗೊಳಿಸಲಾಗಿದೆ. ಮಳೆ ಬಂದು ಕಾವೇರಿ ನದಿಯಲ್ಲಿ ನೀರು ಬರುವವರೆಗೆ ರಾಫ್ಟಿಂಗ್ ನಿಲ್ಲಿಸಲಾಗುವುದು ಎಂದು ರ‍್ಯಾಫ್ಟಿಂಗ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಎಂದು ಸಿ.ಎಲ್ ವಿಶ್ವ ಮಾಹಿತಿ ನೀಡಿದ್ದಾರೆ. ದುಬಾರೆಯಲ್ಲಿ ಸಾಕಾನೆ ಶಿಬಿರಕ್ಕೆ ಬೆಳಗ್ಗೆ 11 ರಿಂದ ಸಂಜೆ 4 ಗಂಟೆ ತನಕ ಪ್ರವಾಸಿಗರಿಗೆ ಪ್ರವೇಶ ಇರುವುದಿಲ್ಲ. ಈ ಅವಧಿಯಲ್ಲಿ ಪ್ರವಾಸಿಗರು ರ‍್ಯಾಫ್ಟಿಂಗ್ ಚಟುವಟಿಕೆಯಲ್ಲಿ ಭಾಗವಹಿಸಿ ಖುಷಿಪಡುತ್ತಿದ್ದರು. ಹಾಗಾಗಿ ರ‍್ಯಾಫ್ಟಿಂಗ್ ಇಲ್ಲದಿದ್ದರೆ ಪ್ರವಾಸಿಗರ ಸಂಖ್ಯೆಯೂ ಕುಸಿತ ಆಗುವ ಸಾಧ್ಯತೆ ಇದೆ.

2018ರ ಆಗಸ್ಟ್ನಲ್ಲಿ ಕೊಡಗಿನಲ್ಲಿ ಕುಂಭದ್ರೋಣ ಮಳೆ ಸುರಿದಿದ್ದಲ್ಲದೆ ಭೂಕುಸಿತಗಳು ಸಂಭವಿಸಿ ದೊಡ್ಡ ಮಟ್ಟಿಗೆ ಹಾನಿ ಆಗಿತ್ತು. ಆದರೆ ಅದೇ ವರ್ಷ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಈಗಿನಂಥದ್ದೇ ಪರಿಸ್ಥಿತಿ ಇತ್ತು. ಕಾವೇರಿ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ಸ್ಥಗಿತವಾಗಿ ಕುಶಾಲನಗರ ಪಟ್ಟಣಕ್ಕೆ ನೀರಿನ ಸಮಸ್ಯೆ ಕಾಣಿಸಿಕೊಂಡಿತ್ತು. ಆಗಲೂ ಟ್ಯಾಂಕರ್‌ಗಳ ಮೂಲಕ ಮನೆ ಮನೆಗಳಿಗೆ ನೀರು ಪೂರೈಕೆ ಮಾಡಲಾಗಿತ್ತು. ಮೇ ತಿಂಗಳಿನಲ್ಲಿ ಮಳೆ ಬೀಳಲು ಆರಂಭವಾದ ಮೇಲೆ ಪರಿಸ್ಥಿತಿ ನಿಧಾನಕ್ಕೆ ಸುಧಾರಿಸಿಕೊಂಡಿತ್ತು. ಆದರೆ ನಂತರದ ವರ್ಷಗಳಲ್ಲಿ ಕಳೆದ ವರ್ಷದ ತನಕ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಾಡಿರಲಿಲ್ಲ. ಕಳೆದ ವರ್ಷವೂ ಟ್ಯಾಂಕರ್‌ಗಳ ಮೂಲಕ ಮನೆಗಳಿಗೆ ನೀರು ಪೂರೈಕೆ ಮಾಡಲಾಗಿತ್ತು. ಈಗಿನ ಪರಿಸ್ಥಿತಿ ಗಮನಿಸಿದರೆ ಈ ವರ್ಷವೂ ಬಹುತೇಕ ಅದೇ ಕತೆ ಪುನರಾವರ್ತನೆ ಆಗುವ ಸಾಧ್ಯತೆ ಇದೆ.

ಭಾರತೀಯ ಹವಾಮಾನ ಇಲಾಖೆ ಪ್ರಕಾರ ಈ ವಾರದ ಮುನ್ಸೂಚನೆಯಂತೆ ಕೊಡಗು ಜಿಲ್ಲೆಯಲ್ಲಿ ಬುಧವಾರದಿಂದ (ಮಾ.5) ಭಾನುವಾರ (ಮಾ.9) ಮೋಡ ಕವಿದ ವಾತಾವರಣ ಇದ್ದು ಮಳೆ ಬರುವ ಸಾಧ್ಯತೆ ಇಲ್ಲ. ಗರಿಷ್ಠ ಉಷ್ಣಾಂಶ 32-33 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ

ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಗರಿಷ್ಠ ತಾಪಮಾನ 34-35 ಡಿಗ್ರಿ ಸೆಲ್ಸಿಯಸ್ ತನಕ ತಲುಪುವ ಸಾಧ್ಯತೆ ಇದೆ.

ಜಿ.ವಿ. ಸುಮಂತ್ ಕುಮಾರ್, ತಾಂತ್ರಿಕ ಅಧಿಕಾರಿ, ಕೃಷಿ ಹವಾಮಾನ ಕ್ಷೇತ್ರ ವಿಭಾಗ, ನಾಗನಹಳ್ಳಿ

ಕುಶಾಲನಗರಕ್ಕೆ ಕಾವೇರಿ ನದಿಯಿಂದ ಪ್ರಮುಖವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ. ಸದ್ಯಕ್ಕೆ ನೀರಿನ ಹರಿವು ಇದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಮರಳಿನ ತಾತ್ಕಾಲಿಕ ಕಟ್ಟೆ ಕಟ್ಟಲಾಗಿದ. ಪಿರಿಯಾಪಟ್ಟಣ ಭಾಗಕ್ಕೆ ನೀರು ಪೂರೈಕೆ ಪ್ರದೇಶದಲ್ಲೂ ಇಂಥ ಕಟ್ಟೆ ಕಟ್ಟಿದ್ದಾರೆ. ಕಳೆದ ವರ್ಷದಂತೆ ನೀರಿನ ಹರಿವು ಸ್ಥಗಿತ ಆದರೆ ನಮ್ಮದೇ ಕೊಳವೆಬಾವಿಗಳಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದು. ಕಳೆದ ವರ್ಷ 2.5 ತಿಂಗಳು ಇದೇ ರೀತಿಯಲ್ಲಿ ಸಮಸ್ಯೆ ನಿಭಾಯಿಸಲಾಗಿತ್ತು.

ಎ. ಪ್ರಸನ್ನಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ