ಹರೀಶ್ ಮೋಟುಕಾನ ಮಂಗಳೂರು
ಶೇಖರಣೆಯಾದ ನೀರಿನಲ್ಲಿ ಬೆಳೆದು ನಿಂತ ಹಸಿರು ಪಾಚಿ. ಆಳೆತ್ತರದ ನೀರಿನಲ್ಲಿ ಮುಳುಗಿರುವ ಬೋರ್‌ವೆಲ್, ನಿಂತ ನೀರಿನಲ್ಲಿ ಸೊಳ್ಳೆ ಉತ್ಪತ್ತಿ, ಸಾಂಕ್ರಾಮಿಕ ರೋಗ ಭೀತಿ ಮಧ್ಯೆ ಜನರ ವಾಸ.
ಇದು ವಾಮಂಜೂರು ಬಳಿ ಪಿಲಿಕುಳದಲ್ಲಿರುವ ಮಹಾನಗರ ಪಾಲಿಕೆಯ 6.50 ಎಂ.ಎಲ್.ಡಿ ಸಾಮರ್ಥ್ಯದ ಜಲತ್ಯಾಜ್ಯ ಸಂಸ್ಕರಣಾ ಘಟಕದಿಂದ ನೀರು ಹೊರಗೆ ಸೋರಿಕೆಯಿಂದ ಉಂಟಾಗಿರುವ ಅವಾಂತರ.
ಮೂಡುಶೆಡ್ಡೆಯಲ್ಲಿರುವ 8.75 ಎಂ.ಎಲ್.ಡಿ ಸಾಮರ್ಥ್ಯದ ಜಲತ್ಯಾಜ್ಯ ಸಂಸ್ಕರಣ ಘಟಕದಿಂದ ಪಿಲಿಕುಳದಲ್ಲಿರುವ ಘಟಕಕ್ಕೆ ನೀರು ಪೂರೈಕೆಯಾಗುತ್ತದೆ. ಇಲ್ಲಿಂದ ಪಿಲಿಕುಳ ನಿಸರ್ಗಧಾಮದ ಪಾರ್ಕ್, ಗಿಡ ಮರಗಳಿಗೆ ಬಳಸಲು ನೀರು ಪೂರೈಕೆಯಾಗುತ್ತದೆ. ತಿಂಗಳ ಹಿಂದೆ ಪಿಲಿಕುಳ ಘಟಕದ ಪಂಪ್ ಕೆಟ್ಟು ಹೋದ ಪರಿಣಾಮ ಮೂಡುಶೆಡ್ಡೆ ಘಟಕದಿಂದ ಬಂದ ನೀರು ಪಿಲಿಕುಳ ಘಟಕದಲ್ಲಿ ಹೊರಗೆ ಹರಿದು ಹೋಗುತ್ತಿದೆ.
ಪಿಲಿಕುಳ ಜಲತ್ಯಾಜ್ಯ ಸಂಸ್ಕರಣಾ ಘಟಕದ ನೀರು ಹೊರ ಬಂದು ಪಿಲಿಕುಳ ನಿಸರ್ಗಧಾಮದ ಆವರಣ ಗೋಡೆಯ ಹೊರಗೆ ಇರುವ ವಿಸ್ತಾರವಾದ ಖಾಲಿ ಜಾಗದಲ್ಲಿ ಸಂಗ್ರಹಗೊಂಡಿದೆ. ಇದು ಕೆರೆಯಂತೆ ಕಾಣುತ್ತಿದ್ದು, ಹಸಿರು ಬಣ್ಣದ ಪಾಚಿ ಬೆಳೆದು ನಿಂತಿದೆ. ಹೆಚ್ಚುವರಿ ನೀರು ಹೊರ ಭಾಗದಲ್ಲಿರುವ ರಸ್ತೆಯಲ್ಲಿ ಹರಿದು ಹೋಗಿ ಮನೆಯೊಂದರ ಆವರಣ ಸೇರುತ್ತಿದೆ. ಹರಿದು ಬರುತ್ತಿರುವ ನೀರು ಬಾವಿಗೆ ಸೇರಿದೆ. ಮೇಲ್ಗಡೆ ತಡೆಯೊಡ್ಡಿದರೂ, ರಭಸವಾಗಿ ಹರಿದು ಬರುತ್ತಿದೆ. ಕುಡಿಯಲು ಈ ನೀರು ಉಪಯೋಗಿಸುತ್ತಿಲ್ಲ. ಸುಮಾರು ಒಂದು ತಿಂಗಳಿಂದ ನಿರಂತರ ನೀರು ಬರುತ್ತಿದ್ದು, ಇನ್ನೂ ಸರಿಪಡಿಸಿಲ್ಲ. ರಸ್ತೆ ಬದಿ ನೀರು ನಿಂತಿದ್ದು, ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆ ಗೋಚರಿಸಿದೆ. ಈ ಪರಿಸರದಲ್ಲಿ ಹಲವು ಮನೆಗಳಿದ್ದು, ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.
ಮೂಡುಶೆಡ್ಡೆ ಗ್ರಾಮ ಪಂಚಾಯಿತಿಗೆ ಸೇರಿದ್ದ ಬೋರ್‌ವೆಲ್ ಜಲತ್ಯಾಜ್ಯ ಸಂಸ್ಕರಣಾ ಘಟಕದಿಂದ ಸೋರಿಕೆಯಾದ ನೀರಿನಲ್ಲಿ ಮುಳುಗಡೆಯಾಗಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಮಹಾನಗರ ಪಾಲಿಕೆಗೆ ಮಾಡಿದ ಮನವಿಗೆ ಸ್ಪಂದಿಸಿ ಹೊಸ ಬೋರ್ ಅಳವಡಿಸಿ ಕೊಟ್ಟಿದ್ದಾರೆ. ಪಂಪ್ ಹಾಳಾದ ಕಾರಣ ಹಲವು ಸಮಯದಿಂದ ನೀರು ಹೊರ ಹೋಗುತ್ತಿದೆ. ಇದರಿಂದ ಪರಿಸರದ ಜನರಿಗೆ ತೊಂದರೆ ಉಂಟಾಗಿದೆ ಹರಿಪ್ರಸಾದ್ ಶೆಟ್ಟಿ, ಅಧ್ಯಕ್ಷರು, ಮೂಡುಶೆಡ್ಡೆ ಗ್ರಾಮ ಪಂಚಾಯಿತಿ ಪಿಲಿಕುಳ ಬಳಿ ಇರುವ ಜಲತ್ಯಾಜ್ಯ ಸಂಸ್ಕರಣಾ ಘಟಕದ ಹಳೇ ಪಂಪ್ ಹಾಳಾದ ಕಾರಣ ಹೊಸ ಪಂಪ್ ಅಳವಡಿಕೆ ಕೆಲಸ ನಡೆಯುತ್ತಿದೆ. ಮೂಡುಶೆಡ್ಡೆ ಘಟಕದಿಂದ ಪೂರೈಕೆಯಾಗುವ ನೀರನ್ನು ಪಂಪಿಂಗ್ ಮಾಡಲು ಈಗಿರುವ ಪಂಪ್ ಶಕ್ತಿ ಸಾಕಾಗದ ಕಾರಣ ನೀರು ಹೊರ ಹೋಗುತ್ತಿದೆ. ಈ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯಲಿದೆ. ಅಬ್ದುಲ್ ಖಾದರ್, ಜೂನಿಯರ್ ಇಂಜಿನಿಯರ್ ಮನಪಾ