ಮೈಸೂರು: ಯಾವುದೇ ವಸ್ತುವಿನ ಉತ್ಪಾದನೆ ಮಿತಿ ಮೀರಿದರೆ ಪ್ರಕೃತಿ ಮೇಲೆ ಒತ್ತಡ ಸೃಷ್ಟಿಯಾಗಿ, ತ್ಯಾಜ್ಯ ವೃದ್ಧಿಗೂ ಕಾರಣವಾಗುತ್ತದೆ ಎಂದು ನಗರಪಾಲಿಕೆ ಆಯುಕ್ತ ಶೇಖ್ ತನ್ವಿರ್ ಆಸೀಫ್ ಹೇಳಿದರು.
ಭಗಿನಿ ಸೇವಾ ಸಂಘ ವಿದ್ಯೋದಯ ವಿದ್ಯಾಸಂಸ್ಥೆ (ಬಿಎಸ್‌ಎಸ್), ಮೈಸೂರು ಮಹಾನಗರ ಪಾಲಿಕೆ, ಮೈಸೂರು ಗ್ರಾಹಕ ಪರಿಷತ್ತು ಹಾಗೂ ನಗರದ ವಿವಿಧ ಶಾಲೆಗಳ ಸಹಯೋಗದೊಂದಿಗೆ ಕೃಷ್ಣಮೂರ್ತಿಪುರಂನ ವಿದ್ಯೋದಯ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಸ್ವಚ್ಛ ಮೈಸೂರು ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ವೈಭವದ ಜೀವನಶೈಲಿನಿಂದ ಪರೋಕ್ಷವಾಗಿ ಪ್ರಕೃತಿ ನಾಶಕ್ಕೆ ಜನರು ಕಾರಣರಾಗುತ್ತಿದ್ದಾರೆ. ಈ ವಿಷಯಗಳನ್ನು ಶಾಲಾ ಹಂತದಲ್ಲೇ ಮಕ್ಕಳಿಗೆ ತಿಳಿಸಿಕೊಟ್ಟರೆ, ಪ್ಲಾಸ್ಟಿಕ್ ಬಳಕೆ ಹಾಗೂ ಪ್ರಕೃತಿ ನಾಶಕ್ಕೆ ಕಡಿವಾಣ ಹಾಕಬಹುದು ಎಂದರು.
ಪ್ರತಿ ವಸ್ತುವಿನ ಬಳಕೆ ಹಾಗೂ ಸಮಾಜದಲ್ಲಿ ನಾವು ಮಾಡುವ ಪ್ರತಿ ಕೆಲಸವು ಸರಪಳಿಯಂತೆ ಒಂದಕ್ಕೊಂದು ಸಂಬಂಧ ಹೊಂದಿರುತ್ತದೆ. ನಾವು ಸ್ವಚ್ಛತೆಗೆ ಮುಂದಾಗುವುದಾದರೆ ಬಳಕೆಯನ್ನು ಮಿತಿಗೊಳಿಸಬೇಕು. ಆಗ ಮಾತ್ರ ಸ್ವಚ್ಛ ನಗರ ನಿರ್ಮಾಣಕ್ಕೆ ಮುನ್ನುಡಿಯಾಗುತ್ತದೆ ಎಂದು ಹೇಳಿದರು.
ನಮ್ಮ ಹಿರಿಯರಿಗೆ ಪ್ಲಾಸ್ಟಿಕ್ ಬಳಕೆ ಬೇಕಿರಲಿಲ್ಲ. ಆದರೆ ಇಂದಿನ ಪೀಳಿಗೆಗೆ ಪ್ಲಾಸ್ಟಿಕ್ ಅನಿವಾರ್ಯ ಅಲ್ಲದಿದ್ದರೂ ಅನಿವಾರ್ಯ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಪ್ಲಾಸ್ಟಿಕ್ ಬಳಕೆಯನ್ನು ತಡೆಯದಿದ್ದರೆ ಮುಂದೆ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದರು.
ಎಲ್ಲರೂ ನಿರ್ಧಾರ ಮಾಡಬೇಕು: ಪ್ರಸ್ತುತ ಮೈಸೂರಿಗೆ ಸ್ವಚ್ಛತೆಯಲ್ಲಿ 3ನೇ ಸ್ಥಾನ ದೊರೆತಿರುವುದಕ್ಕೆ ಸಮಾಧಾನಪಡುವ ಸ್ಥಿತಿಯಲ್ಲಿಲ್ಲ. ನಗರದಲ್ಲಿ ಅನೇಕ ಸುಧಾರಣೆಗಳನ್ನು ಕೈಗೊಳ್ಳಬೇಕಿದೆ. ಇನ್ಮುಂದೆ ಎಲ್ಲೆಂದರಲ್ಲಿ ಕಸ ಹಾಕುವುದಿಲ್ಲ. ಸಾರ್ವಜನಿಕವಾಗಿ ಕಸ ಹಾಕುವವರನ್ನೂ ತಡೆಯುತ್ತೇವೆ ಎಂಬ ನಿರ್ಧಾರವನ್ನು ಎಲ್ಲರೂ ತಾಳಬೇಕು ಎಂದು ಮನವಿ ಮಾಡಿದರು.
ಮೈಸೂರು ಗ್ರಾಹಕ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಭಾಮೀ ವಿ.ಶೆಣೈ ಮಾತನಾಡಿ, ಆಷಾಢ ಮಾಸದಲ್ಲಿ ದೇವರ ಮೇಲಿನ ಭಕ್ತಿಯನ್ನು ತೋರಲು ಸಹಸ್ರಾರು ಭಕ್ತರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಹೀಗೆ ಬಂದ ಭಕ್ತರು ಬೆಟ್ಟದಲ್ಲಿ ರಾಶಿ, ರಾಶಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸುರಿದಿದ್ದಾರೆ. ಇದು ಪಾಪಕಾರ್ಯಕ್ಕೆ ಸಮನಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
*
ಮಕ್ಕಳೇ ರಾಯಭಾರಿಗಳಾಗಬೇಕು
ದೊಡ್ಡವರಿಗೆ ಸ್ವಚ್ಛತೆ ಬಗ್ಗೆ, ಪ್ಲಾಸ್ಟಿಕ್ ಬಳಸದಂತೆ, ಪರಿಸರ ನಾಶ ಕುರಿತು ಎಲ್ಲೆಂದರಲ್ಲಿ ಬಿಸಾಡದಂತೆ ತಿಳಿಹೇಳಿ ಸಾಕಾಗಿ ಹೋಗಿದೆ. ಇನ್ನೇನಿದ್ದರೂ ಶಾಲಾ ಮಕ್ಕಳ ಮೂಲಕ ದೊಡ್ಡವರಿಗೆ ಅರಿವು ಮೂಡಿಸುವುದು ನಮ್ಮ ಕೊನೆಯ ಭರವಸೆ. ಮಕ್ಕಳೇ ಸ್ವಚ್ಛತಾ ರಾಯಭಾರಿಗಳಾಗಬೇಕು. ಹಿರಿಯರಿಗೆ ಪ್ಲಾಸ್ಟಿಕ್ ಬಳಕೆ ತಗ್ಗಿಸುವಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯದೆ ಸ್ವಚ್ಛತೆಗೆ ಮುಂದಾಗಬೇಕು ಎಂದು ಒತ್ತಾಯಿಸಬೇಕು ಎಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.
ಭಾರತೀಯ ವಿದ್ಯಾ ಭವನ, ರೋಟರಿ ಮೈಸೂರು ಶಾಲೆ, ಮಾನಸರೋವರ ಪುಷ್ಕರಣಿ ವಿದ್ಯಾಶ್ರಮ, ಜೆಎಸ್‌ಎಸ್ ಮಹಾವಿದ್ಯಾಪೀಠ, ಆರ್‌ವಿಪಿಎಸ್ ಪಿಯು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸ್ವಚ್ಛತಾ ಜಾಗೃತಿ ಬಿಂಬಿಸುವ ಭಿತ್ತಿಪತ್ರ ಬಿಡುಗಡೆಗೊಳಿಸಿ ಶಾಲೆಗಳಿಗೆ ವಿತರಿಸಲಾಯಿತು. ಬಿಎಸ್‌ಎಸ್ ವಿದ್ಯೋದಯ ಸಂಸ್ಥೆಯ ಕಾರ್ಯದರ್ಶಿ ಆರ್.ವಾಸುದೇವ ಭಟ್, ಸಂಪನ್ಮೂಲ ವ್ಯಕ್ತಿ ಕೆ.ಜಿ.ಮ್ಯಾಥ್ಯೂ, ನಗರಪಾಲಿಕೆ ಎಇಇ ಮೃತ್ಯುಂಜಯ, ಮೈಸೂರು ವೆಸ್ಟ್ ಲಯನ್ಸ್ ಸೇವಾ ನಿಕೇತನ ಶಾಲೆಯ ಪ್ರಾಂಶುಪಾಲೆ ರೂಪಾ ಕರುಂಬಯ್ಯ ಇತರರು ಇದ್ದರು.