ಧಾರವಾಡ: ನಗರದ ಬಹುದೊಡ್ಡ ಸಮಸ್ಯೆಯಾಗಿದ್ದ ತ್ಯಾಜ್ಯ ಸಂಸ್ಕರಣೆಗೆ ಕಾಲ ಕೂಡಿ ಬಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಡಿ ಲಕಮನಹಳ್ಳಿಯಲ್ಲಿ (ಹೊಸಯಲ್ಲಾಪುರ) ಮಹಾನಗರ ಪಾಲಿಕೆ ನಿರ್ವಿುಸಿದ 12.63 ಕೋಟಿ ರೂ. ವೆಚ್ಚದ 150 ಟಿಪಿಡಿ (ಟನ್ ಪರ್ ಡೇ) ಸಾಮರ್ಥ್ಯ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಶನಿವಾರ ಕಾರ್ಯಾರಂಭ ಮಾಡಿತು.
ಅತಿಥಿಯಾಗಿ ಉಪಸ್ಥಿತರಿದ್ದ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಮಾತನಾಡಿ, ತ್ಯಾಜ್ಯ ಸಂಸ್ಕರಣೆಯ ನಂತರ ತಯಾರಾಗುವ ಕಾಂಪೋಸ್ಟ್ ಗೊಬ್ಬರವನ್ನು ರೈತರ ಬೇಡಿಕೆಗೆ ಅನುಗುಣವಾಗಿ ವಿತರಿಸಲಾಗುವುದು. ಹಲವು ವರ್ಷಗಳಿಂದ ರಾಶಿ ರಾಶಿ ಬಿದ್ದಿರುವ ಒಣ ತ್ಯಾಜ್ಯವನ್ನು ಸಂಸ್ಕರಿಸಲು ಯೋಜನೆ ರೂಪಿಸಿರುವ ಮಾಹಿತಿ ಇದೆ. ಅದಕ್ಕಾಗಿ 54 ಕೋಟಿ ರೂ. ವೆಚ್ಚದ ಪ್ರಸ್ತಾವಕ್ಕೆ ಸರ್ಕಾರ ತ್ವರಿತವಾಗಿ ಸ್ಪಂದಿಸಲಿದೆ ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಧಾರವಾಡ ನಗರ ಮಧ್ಯೆ ತ್ಯಾಜ್ಯ ವಿಲೇವಾರಿ ಘಟಕ ಇರುವುದರಿಂದ ದಿನನಿತ್ಯದ ತ್ಯಾಜ್ಯ ಬಹು ದೊಡ್ಡ ತಲೆಬೇನೆಯಾಗುತ್ತಿತ್ತು. ಇದರಿಂದ ಜನರಿಗೆ ತೊಂದರೆ ಆಗಿತ್ತು. ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ವಣಕ್ಕೆ ಪಾಲಿಕೆ ಅಧಿಕಾರಿಗಳು ತ್ವರಿತಗತಿಯಲ್ಲಿ ಶ್ರಮಿಸಿದ್ದಾರೆ. ಘಟಕವನ್ನು ಸಮರ್ಪವಾಗಿ ನಿರ್ವಹಣೆ ಮಾಡಬೇಕು ಎಂದರು.
ಧಾರವಾಡದಲ್ಲಿ ಹಲವಾರು ವರ್ಷಗಳಿಂದ ಒಣತ್ಯಾಜ್ಯ, ಕಸ ಸಂಗ್ರಹವಾಗಿದೆ. ಅದರಿಂದ ವಿದ್ಯುತ್ ಉತ್ಪಾದನೆ ಮಾಡಲು ಅನುಕೂಲವಾಗುವಂತೆ ಭಾರತ ಸರ್ಕಾರದ ಎನ್ಟಿಪಿಸಿ ನೂತನ ಘಟಕವನ್ನು ಆರಂಭಿಸಲು ಪಾಲಿಕೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು 45 ಕೋಟಿ ರೂ.ಗಳನ್ನು ತೊಡಗಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ರಾಜ್ಯ ಸರ್ಕಾರ ಮೂಲಸೌಕರ್ಯ ಹಾಗೂ ಭೂಮಿಯನ್ನು ಆದಷ್ಟು ಬೇಗ ನೀಡಲು ಸ್ಪಂದಿಸಬೇಕು ಎಂದು ಸಚಿವ- ಶಾಸಕರನ್ನು ಕೋರಿದರು.
ಘಟಕಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮಾತನಾಡಿದರು.
ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಸ್ಮಾರ್ಟ್ ಸಿಟಿ ಎಂ.ಡಿ. ಶಕೀಲ ಅಹ್ಮದ್, ಇತರರಿದ್ದರು.