ಜಿಲ್ಲೆ

ಕಿಂಡಿ ಅಣೆಕಟ್ಟುಗಳಲ್ಲಿ ತ್ಯಾಜ್ಯ

Avinash R

ಮನೋಹರ ಬಳಂಜ ಬೆಳ್ತಂಗಡಿ

ಬೇಸಿಗೆಯಲ್ಲಿ ಕೃಷಿಗೆ ಆಶ್ರಯವಾಗಿರುವ ಕಿಂಡಿ ಅಣೆಕಟ್ಟು, ಕಟ್ಟಗಳಲ್ಲಿ ಮರಮಟ್ಟು, ಕಸಕಡ್ಡಿ ಸಿಲುಕಿಕೊಂಡು ನೀರು ಸಂಗ್ರಹಿಸಲು ಸಮಸ್ಯೆ ಎದುರಾಗಿದೆ.

ಬೆಳ್ತಂಗಡಿ ತಾಲೂಕಿನ ನೇತ್ರಾವತಿ, ಮೃತ್ಯುಂಜಯ ಮತ್ತು ಸೋಮಾವತಿ ನದಿಗಳಿಗೆ ಕೃಷಿ ನೀರಿನ ಉಪಯೋಗದ ಕಿಂಡಿ ಅಣೆಕಟ್ಟು ಹಾಗೂ ಕಟ್ಟಗಳನ್ನು ಕಲ್ಮಂಜ ಗ್ರಾಮದ ನಿಡಿಗಲ್, ಆನಂಗಳ್ಳಿ, ಕುಡೆಂಚಿ, ಪಜಿರಡ್ಕ, ಮುಂಡಾಜೆ ಗ್ರಾಮದ ಕಾಪು, ಕಡಂಬಳ್ಳಿ, ಚಾರ್ಮಾಡಿ ಗ್ರಾಮದ ಹೊಸಮಠ, ಕಡಿರುದ್ಯಾವರ ಗ್ರಾಮದ ಬೊಳ್ಳೂರುಬೈಲು, ದಿಡುಪೆಯ ಕೊಡ್ಡೋಳು, ಸಿರ್ಲ, ಮಾಲ್ದ, ಕುಕ್ಕಿ, ಕಾಜೂರು, ಮಿತ್ತಬಾಗಿಲು ಗ್ರಾಮದ ಕುಕ್ಕಾವು, ಕೊಪ್ಪದಗಂಡಿ ಮತ್ತಿತರ ಕಡೆ ಬೇಸಿಗೆಯಲ್ಲಿ ನಿರ್ಮಿಸಿ ಅಡಕೆ, ಗದ್ದೆ ಕೃಷಿಗೆ ನೀರು ಒದಗಿಸಲಾಗುತ್ತಿದೆ.

ಸಾಮಾನ್ಯವಾಗಿ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಕಟ್ಟಗಳನ್ನು ಕಟ್ಟುವ ಕೆಲಸ ಆರಂಭವಾಗುತ್ತದೆ. ಹೆಚ್ಚಿನ ಪ್ರದೇಶಗಳಲ್ಲಿ ಸಾವಿರಾರು ಎಕರೆ ಕೃಷಿಗೆ ಮಾರ್ಚ್ ಅಂತ್ಯದಿಂದ ಏಪ್ರಿಲ್ ಮಧ್ಯಭಾಗದ ತನಕ ಇವುಗಳ ನೀರು ಆಶ್ರಯವಾಗಿರುತ್ತದೆ. ಕೃಷಿ ನೀರಿನ ಕಟ್ಟಗಳನ್ನು ಕಟ್ಟುವುದು, ಅಂತರ್ಜಲ ವೃದ್ಧಿಗೆ ಸಹಕಾರಿಯಾಗುತ್ತದೆ. ಹಲವು ಕಿ.ಮೀ. ವ್ಯಾಪ್ತಿಯಲ್ಲಿ ನೀರು ಸಂಗ್ರಹವಾಗುವುದರಿಂದ ಅಂತರ್ಜಲ ಹೆಚ್ಚುತ್ತದೆ.

ಈ ಬಾರಿ ನದಿ, ಹೊಳೆ, ಹಳ್ಳಗಳು ಮಳೆಗಾಲದಲ್ಲಿ ಅನೇಕ ಬಾರಿ ತುಂಬಿ ಹರಿದ ಕಾರಣ ಕಿಂಡಿ ಅಣೆಕಟ್ಟುಗಳಲ್ಲಿ ಭಾರಿ ಪ್ರಮಾಣದ ತ್ಯಾಜ್ಯ ಸಂಗ್ರಹವಾಗಿದೆ. ಕೆಲವೆಡೆ ದೊಡ್ಡ-ದೊಡ್ಡ ಗಾತ್ರದ ಮರಗಳು ಸಿಲುಕಿ ತೋಟಗಳಿಗೆ ಕೃತಕ ನೆರೆ ನುಗ್ಗಿದೆ.

*ಕಿಂಡಿ ಅಣೆಕಟ್ಟು ನಿರ್ಮಾಣ: ಕಳೆದ ಅವಧಿಯಲ್ಲಿ ಶಾಸಕ ಹರೀಶ್ ಪೂಂಜ ಮುತುವರ್ಜಿಯಲ್ಲಿ ತಾಲೂಕಿನ ಅನೇಕ ಕಡೆ ಕಿಂಡಿ ಅಣೆಕಟ್ಟುಗಳು ನಿರ್ಮಾಣವಾಗಿ ಕೆಲವೆಡೆ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣವಾದ ಕಾರಣ ಸಂಪರ್ಕ ಹತ್ತಿರವಾಗಿದೆ. ಸಾಂಪ್ರದಾಯಿಕ ಕಟ್ಟಗಳನ್ನು ಕಟ್ಟುತ್ತಿದ್ದ ಸ್ಥಳಗಳನ್ನು ಗುರುತಿಸಿ ಅಲ್ಲೆಲ್ಲ ಕಿಂಡಿ ಅಣೆಕಟ್ಟುಗಳು ನಿರ್ಮಾಣವಾಗಿರುವುದು ಫಲಾನುಭವಿಗಳಿಗೆ ಅನುಕೂಲ ನೀಡಿದೆ. ಕಿಂಡಿ ಅಣೆಕಟ್ಟುಗಳು ನಿರ್ಮಾಣವಾದ ಕಾರಣ ಅಂತರ್ಜಲ ಮಟ್ಟ ಹೆಚ್ಚಿದ್ದು ಬೇಸಿಗೆಯಲ್ಲಿ ಭಾರಿ ನೀರಿನ ಸಮಸ್ಯೆ ಕಂಡು ಬಂದಿರಲಿಲ್ಲ. ಕಿಂಡಿ ಅಣೆಕಟ್ಟುಗಳಲ್ಲಿ ಸಿಲುಕಿರುವ ತ್ಯಾಜ್ಯಗಳನ್ನು ಆಗಾಗ ತೆರವುಗೊಳಿಸಿದರೆ ಹೆಚ್ಚಿನ ಸಮಸ್ಯೆ ಕಂಡು ಬರುವುದಿಲ್ಲ. ಹಲವು ಕಡೆಗಳಲ್ಲಿ ಸಂಘ-ಸಂಸ್ಥೆಗಳು, ಸ್ಥಳೀಯ ಪಂಚಾಯಿತಿ ಹಾಗೂ ಫಲಾನುಭವಿಗಳ ಮನವಿ ಮೇರೆಗೆ ಕಿಂಡಿ ಅಣೆಕಟ್ಟುಗಳಲ್ಲಿ ತುಂಬಿರುವ ತ್ಯಾಜ್ಯ ವಿಲೇವಾರಿಗೆ ಕೈಜೋಡಿಸುತ್ತವೆ.

ಕಡಿಮೆ ವೆಚ್ಚದ ಕಟ್ಟ

ತಾಲೂಕಿನ ಮೃತ್ಯುಂಜಯ, ನೇತ್ರಾವತಿ, ಸೋಮಾವತಿ ಮೊದಲಾದ ನದಿಗಳಿಗೆ ಕಟ್ಟಗಳನ್ನು ಕೆಲವು ಕಡೆ ಕಲ್ಲು, ಮಣ್ಣು, ಸೊಪ್ಪು ಇತ್ಯಾದಿ ವಸ್ತುಗಳಿಂದ ಕಟ್ಟಲಾಗುತ್ತದೆ. ಇದಕ್ಕೆ ಕೂಲಿ ಸಹಿತ ವಿಪರೀತ ವೆಚ್ಚ ತಗುಲಿದರೂ ಈ ಕಟ್ಟಗಳು ನದಿ ನೀರು ಹೆಚ್ಚಾದಾಗ ತಮ್ಮಷ್ಟಕ್ಕೆ ಕೊಚ್ಚಿ ಹೋಗುತ್ತವೆ. ಕಿಂಡಿ ಅಣೆಕಟ್ಟುಗಳಿಗೆ ಮರದ ಹಲಗೆಗಳನ್ನು ಇಳಿಸಿ, ಪ್ಲಾಸ್ಟಿಕ್ ಹೊದಿಸಿ ನೀರನ್ನು ನಿಲ್ಲಿಸಿ ಕಾಲುವೆಗಳ ಮೂಲಕ ಕೃಷಿಗೆ ನೀರು ಹರಿಸುವ ವ್ಯವಸ್ಥೆ ಮಾಡಲಾಗುತ್ತದೆ. ಇವುಗಳನ್ನು ನಿರ್ಮಿಸಲು ಕಡಿಮೆ ವೆಚ್ಚ ಸಾಕಾಗುತ್ತದೆ.

ಯಂತ್ರ ತರಲು ಅಸಾಧ್ಯ

ಕಿಂಡಿ ಅಣೆಕಟ್ಟು ಅಥವಾ ಕಟ್ಟಗಳ ಕೆಲಸ ಆರಂಭಿಸಲು ಕೃಷಿಕರಿಗೆ ಕಿಂಡಿ ಅಣೆಕಟ್ಟುಗಳಲ್ಲಿ ಮಳೆಗಾಲದಲ್ಲಿ ನೀರಿನ ಜತೆ ಹರಿದು ಬಂದ ಮರಮಟ್ಟು ಕಸ-ಕಡ್ಡಿಗಳು ತುಂಬಿರುವುದು ಆತಂಕ ಹೆಚ್ಚಿಸಿದೆ. ಬೃಹತ್ ಗಾತ್ರದ ಮರಮಟ್ಟು ಮತ್ತು ಕಸ ಕಡ್ಡಿ ತುಂಬಿದ್ದು, ಇದನ್ನು ತೆರವುಗೊಳಿಸದಿದ್ದರೆ ಕಟ್ಟ ಕಟ್ಟಲು ಸಾಧ್ಯವಾಗದು. ತುಂಬಿರುವ ತ್ಯಾಜ್ಯವನ್ನು ತೆರವುಗೊಳಿಸಲು ಸಾಕಷ್ಟು ವೆಚ್ಚ ತಗುಲುತ್ತದೆ. ಕೆಲವೊಂದು ಕಿಂಡಿ ಅಣೆಕಟ್ಟುಗಳಿರುವ ಪ್ರದೇಶಗಳಿಗೆ ತ್ಯಾಜ್ಯವನ್ನು ತೆರವುಗೊಳಿಸಲು ಬೇಕಾದ ಯಂತ್ರಗಳನ್ನು ತರಲು ಸಾಧ್ಯವಾಗದ ಸ್ಥಿತಿ ಇದೆ.

ಫಲಾನುಭವಿಗಳು ಕಿಂಡಿ ಅಣೆಕಟ್ಟುಗಳಲ್ಲಿ ತುಂಬಿರುವ ತ್ಯಾಜ್ಯ ತೆರವುಗೊಳಿಸಿದರೆ ಇಲಾಖೆಯಿಂದ ಅವರಿಗೆ ಮುಂದಿನ ದಿನಗಳಲ್ಲಿ ಅನುದಾನ ನೀಡುವ ವ್ಯವಸ್ಥೆ ಇದೆ. ಕೆಲಸ ನಿರ್ವಹಿಸುವ ಸಮಯ ಇಲಾಖೆಯ ಗಮನಕ್ಕೆ ತರುವುದು ಅಗತ್ಯ.

- ರಾಕೇಶ್ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್, ಬೆಳ್ತಂಗಡಿ ವಿಭಾಗ

ಸೋಮಾವತಿ ನದಿಯ ಕಿಂಡಿ ಅಣೆಕಟ್ಟಿನಲ್ಲಿ ಮರದ ದಿಮ್ಮಿಗಳು ಶೇಖರಣೆಯಾಗಿವೆ. ಇದು ನಗರಕ್ಕೆ ನೀರು ಸಂಗ್ರಹಿಸುವ ಅಣೆಕಟ್ಟು. ಇದನ್ನು ತೆರವುಗೊಳಿಸಿ ಶುದ್ಧ ನೀರು ಸಂಗ್ರಹವಾಗುವಂತೆ ನೋಡಬೇಕು. ಹಲಗೆ ಇಳಿಸಿ ನೀರು ಸಂಗ್ರಹಿಸುವುದರಿಂದ ಅಲ್ಲಿಂದ ಎರಡು ಕಿ.ಮೀ. ದೂರದ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಳಗೊಂಡು ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುವುದಿಲ್ಲ.

- ಶೇಖರ್ ಲಾಯಿಲ, ಸಾಮಾಜಿಕ ಹೋರಾಟಗಾರ