ಸದೇಶ್ ಕಾರ್ಮಾಡ್ ಮೈಸೂರು
ನಗರದ ಬಹುತೇಕ ಎಲ್ಲ ಮನೆಗಳಿಂದಲೂ ಪ್ರತಿನಿತ್ಯ ತ್ಯಾಜ್ಯ ಸಂಗ್ರಹವಾಗುತ್ತಿದೆ. ಆದರೆ, ಹಸಿಕಸ-ಒಣಕಸ ವಿಂಗಡಣೆಯಲ್ಲಿ ನಗರ ಹಿಂದೆ ಬಿದ್ದಿರುವ ಪರಿಣಾಮ ಈ ಬಾರಿಯ ಸ್ವಚ್ಛ ಸರ್ವೇಕ್ಷಣೆಯಲ್ಲಿ ನಗರ ಭಾರಿ ಹಿನ್ನಡೆ ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ತ್ಯಾಜ್ಯ ವಿಂಗಡಣೆಯನ್ನು ಕಟ್ಟುನಿಟ್ಟುಗೊಳಿಸಲು ಪಾಲಿಕೆ ಮುಂದಾಗಿದೆ.
ಈ ಹಿಂದೆ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಿಸಲು ಬರುತ್ತಿದ್ದ ವಾಹನ ಹಸಿಕಸ ಹಾಗೂ ಒಣಕಸವನ್ನು ಒಟ್ಟಿಗೆ ತುಂಬಿಕೊಂಡು ಹೋಗುತಿತ್ತು. ಆದರೆ, ಸ್ವಚ್ಛ ಸರ್ವೇಕ್ಷಣೆ-2024 ಪ್ರಾರಂಭಗೊಂಡ ನಂತರ ಮನೆ ಮನೆಗಳಿಂದ ಪೌರ ಕಾರ್ಮಿಕರು ಹಸಿಕಸ ಹಾಗೂ ಒಣಕಸವನ್ನು ಪ್ರತ್ಯೇಕವಾಗಿ ಪಡೆಯುತ್ತಿದ್ದಾರೆ. ಇದಕ್ಕೆ ತ್ಯಾಜ್ಯ ಸಂಗ್ರಹಿಸುವ ವಾಹನದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ತ್ಯಾಜ್ಯವನ್ನು ವಿಂಗಡಣೆ ಮಾಡಿ ನೀಡದೆ ಹೋದರೆ ಪೌರ ಕಾರ್ಮಿಕರು ತ್ಯಾಜ್ಯವನ್ನು ಸ್ವೀಕರಿಸುತ್ತಿಲ್ಲ. ಪ್ರಾರಂಭದಲ್ಲಿ ಜನರು ಹಸಿಕಸ- ಒಣಕಸ ವಿಂಗಡಿಸಲು ಹಿಂದೇಟು ಹಾಕಿದರೂ ಇದೀಗ ಆ ವ್ಯವಸ್ಥೆಗೆ ಜನರು ಹೊಂದಿಕೊಂಡು ಹೋಗುತ್ತಿದ್ದು, ಈ ವ್ಯವಸ್ಥೆಯು ಇದೇ ರೀತಿ ಮುಂದುವರೆದರೆ 2024ರ ಸ್ವಚ್ಛ ಸರ್ವೇಕ್ಷಣೆಯಲ್ಲಿ ನಗರದ ರ‌್ಯಾಂಕಿಂಗ್‌ನಲ್ಲಿ ಸುಧಾರಣೆ ಕಾಣುವ ನಿರೀಕ್ಷೆ ಇದೆ.
3 ವಿಭಾಗದಲ್ಲಿ ಹಿಂದೆ: ಮೈಸೂರು ಈ ಬಾರಿ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹ (ಶೇ.97), ಮನೆಗಳಿಂದ ಹಸಿಕಸ ಹಾಗೂ ಒಣಕಸವನ್ನು ಬೇರ್ಪಡಿಸಿ ಪಡೆಯುದು (ಶೇ.70), ಉತ್ಪಾದನೆಯಾದ ತ್ಯಾಜ್ಯದ ಸಂಸ್ಕರಣೆ (ಶೇ.94) ವಿಭಾಗದಲ್ಲಿ ಹಿಂದೆ ಬಿದ್ದಿದೆ. ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸಿ ಪಡೆಯಲು ನಗರ ಪಾಲಿಕೆ ಹಿಂದೆ ಬಿದ್ದ ಹಿನ್ನೆಲೆಯಲ್ಲಿ ಮೈಸೂರು 2023ರ ಸ್ವಚ್ಛ ಸರ್ವೇಕ್ಷಣೆಯಲ್ಲಿ ಸಮಗ್ರ ವಿಭಾಗದಲ್ಲಿ 27ನೇ ಸ್ಥಾನಕ್ಕೆ ಕುಸಿತ ಕಂಡಿದೆ.
ಸತತ 6 ಬಾರಿ ದೇಶದ ನಂ.1 ಸ್ವಚ್ಛ ನಗರಿ ಪಟ್ಟ ಪಡೆದ ಉತ್ತರ ಪ್ರದೇಶದ ಇಂದೊರ್ ನಗರ ಈ ಬಾರಿ ಗುಜರಾತ್‌ನ ಸೂರತ್ ನಗರದೊಂದಿಗೆ ಪ್ರಥಮ ಸ್ಥಾನವನ್ನು ಹಂಚಿಕೊಂಡಿದೆ. ಈ ಎರಡು ನಗರಗಳು ಸಹ ಮನೆಯಿಂದ ತ್ಯಾಜ್ಯವನ್ನು ವಿಂಗಡಿಸಿ ಪಡೆಯುವುದರಲ್ಲಿ ಹಿಂದೆ ಬಿದ್ದಿದೆ. ಈ ಎರಡು ನಗರ ಎಲ್ಲ ವಿಭಾಗಗಳಲ್ಲೂ ಶೇ.100 ಗುರಿ ಸಾಧಿಸಿದೆಯಾದರೂ ತ್ಯಾಜ್ಯ ವಿಂಗಡೆಯಲ್ಲಿ ಶೇ.98 ಅಂಕಗಳನ್ನು ಪಡೆದಿದ್ದು, ಶೇ.100 ಗುರಿ ಸಾಧಿಸಲು ವಿಫಲವಾಗಿದೆ.
ತ್ಯಾಜ್ಯಮುಕ್ತವಾಗಿಸಬೇಕು: ನಗರ 2019ರಿಂದ ನಿರಂತರವಾಗಿ ಫೈವ್ ಸ್ಟಾರ್ ರೇಟಿಂಗ್‌ನೊಂದಿಗೆ ತ್ಯಾಜ್ಯ ಮುಕ್ತ ನಗರ ಪ್ರಶಸ್ತಿ ಪಡೆಯುತಿತ್ತು. ಆದರೆ, ಈ ಬಾರಿ ತ್ರೀ ಸ್ಟಾರ್‌ಗೆ ಕುಸಿತ ಕಂಡಿದೆ. ನಗರದಲ್ಲಿ ಎಲ್ಲೆಂದರಲ್ಲಿ ಜನರು ಮನಬಂದಂತೆ ತ್ಯಾಜ್ಯವನ್ನು ಎಸೆಯುತ್ತಿರುವ ಪರಿಣಾಮ ಈ ವಿಭಾಗದಲ್ಲಿ ಮೈಸೂರು ಹಿನ್ನಡೆ ಅನುಭವಿಸಿದೆ. ನಗರವನ್ನು ಸ್ವಚ್ಛವಾಗಿಡಲು ನಗರದ ಬಹುತೇಕ ಜನರು ಸಹಕಾರ ನೀಡುತ್ತಿದ್ದಾರೆ. ಕೆಲವು ಜನರು ಮನೆ ಬಳಿಗೆ ತ್ಯಾಜ್ಯ ಸಂಗ್ರಹಿಸುವ ವಾಹನಗಳಿಗೆ ತ್ಯಾಜ್ಯ ನೀಡದೆ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಿರುವ ಪರಿಣಾಮ ಮೈಸೂರಿನ ರೇಟಿಂಗ್ ಕುಸಿತ ಕಂಡಿದೆ. ನಗರದ ಜನರು ಮನಸ್ಸು ಮಾಡಿದರೆ ಈ ವಿಭಾಗದಲ್ಲಿ ನಗರದ ರೇಟಿಂಗ್ ಏರಿಕೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ದೇಶದ ನಂ.1 ಸ್ವಚ್ಛ ನಗರಿ ಸೂರತ್ ಈ ವಿಭಾಗದಲ್ಲಿ ಸವೆನ್ ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ದೇಶದ ಮತ್ತೊಂದು ನಂ.1 ಸ್ವಚ್ಛ ನಗರಿ ಇಂದೋರ್ ಸಹ ಮೈಸೂರಿನಂತೆ ಈ ವಿಭಾಗದಲ್ಲಿ ಸಮಸ್ಯೆ ಎದುರಿಸುತ್ತಿದ್ದು, ಸವೆನ್ ಸ್ಟಾರ್ ಹೊಂದಿದ್ದ ಇಂದೋರ್ ಈ ಬಾರಿ ತ್ರೀ ಸ್ಟಾರ್‌ಗೆ ಕುಸಿತ ಕಂಡಿದೆ.
ನಗರದಲ್ಲಿ ಮನೆ ಮನೆಗಳಿಂದ ಪೌರ ಕಾರ್ಮಿಕರು ತ್ಯಾಜ್ಯ ಸಂಗ್ರಹಿಸುತ್ತಿದ್ದರೂ ಕೆಲವರು ರಸ್ತೆ ಬದಿಯಲ್ಲಿ, ಖಾಲಿ ಜಾಗಗಳಲ್ಲಿ ಕಸ ಎಸೆಯುತ್ತಿದ್ದಾರೆ. ಈ ಜಾಗಗಳಲ್ಲಿ ತ್ಯಾಜ್ಯ ಎಸೆಯುವುದಕ್ಕೆ ಕಡಿವಾಣ ಹಾಕದೆ ಹೋದರೆ ಮೈಸೂರು ಸ್ವಚ್ಛತೆಯಲ್ಲಿ ಎಂದೆಂದಿಗೂ ನಂ.1 ಸ್ಥಾನಕ್ಕೆ ಮರಳಲು ಸಾಧ್ಯವೇ ಇಲ್ಲ. ಹಾಗಾಗಿ ಜನರು ಕಸ ಎಸೆಯುವ ಜಾಗವನ್ನು ಗುರುತಿಸಿ ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳ ಬೇಕು. ನಮ್ಮ ನಗರದಲ್ಲಿ ಎಲ್ಲ ವ್ಯವಸ್ಥೆಗಳು ಉತ್ತಮವಾಗಿ ಇದೆ. ಆದರೆ, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದೇ ಬೇಸರದ ಸಂಗತಿ.
ಸ್ವಚ್ಛತೆಗೆ ಸಹಕರಿಸದಿದ್ದರೆ ದಂಡ: ಸ್ವಚ್ಛತೆಗೆ ಸಹಕರಿಸದೆ ಇರುವವರಿಗೆ ದಂಡ ವಿಧಿಸಲು ಅವಕಾಶವಿದ್ದು, ಈ ನಿಟ್ಟಿನಲ್ಲಿ ಪಾಲಿಕೆ ಗಂಭಿರವಾದ ಚಿಂತನೆ ನಡೆಸುವ ಅವಶ್ಯ ಕತೆ ಇದೆ. ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿಕಸ ಮತ್ತು ಒಣಕಸ, ಕೈತೋಟದ ತ್ಯಾಜ್ಯ ವೈದ್ಯಕೀಯ ತ್ಯಾಜ್ಯ, ವಿಷಕಾರಿ ತ್ಯಾಜ್ಯ ಹಾಗೂ ಇತರೆ ತ್ಯಾಜ್ಯವನ್ನು ಬೇರ್ಪಡಿಸಿ ನೀಡದೆ ಹೋದರೆ ನಿವಾಸಿಗಳಿಗೆ ಮೊದಲ ಬಾರಿ 200 ರೂ., ಪುನರಾವರ್ತನೆಯಾದರೆ 500 ರೂ., ವಾಣಿಜ್ಯ ಉದ್ದಿಮೆದಾರರಿಗೆ ಮೊದಲ ಬಾರಿ 500 ರೂ., ಪುನರಾವರ್ತನೆ ಮಾಡಿದರೆ 1,000 ರೂ. ದಂಡ ಬೀಳಲಿದೆ. ಅದೇ ರೀತಿ ಸಾರ್ವಜನಿಕ ರಸ್ತೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು, ಉಗುಳುವುದು, ಬಹಿರ್ದೆಸೆ ಮಾಡುವುದು, ಮೂತ್ರ ವಿಸರ್ಜಿಸುವುದು ಕಂಡು ಬಂದರೆ ಮೊದಲ ಬಾರಿ 500 ರೂ., ಪುನರಾವರ್ತನೆಗೆ 1,000 ರೂ. ದಂಡ ವಿಧಿಸಲು ಅವಕಾಶವಿದೆ. ಸ್ವಚ್ಛತೆಗೆ ಸಹಕರಿಸದೆ ಇರುವವರಿಗೆ ದಂಡದ ಮೂಲಕ ಅವರನ್ನು ಸರಿದಾರಿಗೆ ತರುವ ಕಾರ್ಯ ಆಗಬೇಕು.
ಹಸಿಕಸ-ಒಣಕಸವಾಗಿ ಬೇರ್ಪಡಿಸಿ ಪಡೆಯುವುದರಲ್ಲಿ ನಗರ ಹಿಂದೆ ಬಿದ್ದ ಪರಿಣಾಮ ಈ ಬಾರಿಯ ಸ್ವಚ್ಛ ಸರ್ವೇಕ್ಷಣೆಯಲ್ಲಿ ನಗರಕ್ಕೆ ಹಿನ್ನಡೆಯಾಯಿತು. ಈ ಹಿನ್ನೆಲೆಯಲ್ಲಿ ಹಸಿಕಸ-ಒಣಕಸವನ್ನು ಕಟ್ಟುನಿಟ್ಟಾಗಿ ಬೇರ್ಪಡಿಸಿ ಪಡೆಯಲು ಕ್ರಮ ವಹಿಸಲಾಗುತ್ತಿದೆ. ಇದರ ಜತೆಗೆ ನಗರದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಹರಡುವುದಕ್ಕೆ ಕಡಿವಾಣ ಹಾಕಲು ಯಾವೆಲ್ಲ ಮಾರ್ಗೋಪಾಯಗಳನ್ನು ಅನುರಿಸಬಹುದು ಎಂಬ ಕುರಿತು ಚಿಂತನೆ ನಡೆಸಲಾಗುತ್ತಿದೆ. ನಗರವನ್ನು ಸ್ವಚ್ಛವಾಗಿಡುವುದು ಒಂದು ಕಡೆಯಾದರೆ ನಗರದ ಸೌಂದರೀಕರಣದಲ್ಲೂ ನಗರ ಅಂಕಗಳನ್ನು ಕಳೆದುಕೊಂಡಿದ್ದು, ಈ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು.
ಡಾ.ವೆಂಕಟೇಶ್, ನಗರ ಪಾಲಿಕೆ ಆರೋಗ್ಯಾಧಿಕಾರಿ