ಬೆದ್ರಂಪಳ್ಳ ಆಸುಪಾಸು ಬೈಕಲ್ಲಿ ತೆರಳುತ್ತಿದ್ದಂತೆ ತ್ಯಾಜ್ಯ ಎಸೆಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರದಲ್ಲಿದೆ. 
ಜಿಲ್ಲೆ

ಅಮೆಕ್ಕಳ, ಬೆದ್ರಂಪಳ್ಳದಲ್ಲಿ ರಸ್ತೆಬದಿ ತ್ಯಾಜ್ಯ: ಬೇಕಾಬಿಟ್ಟಿ ಕಸ ಎಸೆಯುತ್ತಿರುವ ಜನ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ವಾಹನಗಳಲ್ಲಿ ತೆರಳುವಾಗ ರಸ್ತೆ ಬದಿ ತ್ಯಾಜ್ಯ ಎಸೆಯುವವರ ಹೆಚ್ಚಾಗುತ್ತಿದ್ದು, ಪೆರ್ಲ-ಪುತ್ತಿಗೆ-ಸೀತಾಂಗೋಳಿ ರಸ್ತೆಯ ಅಮೆಕ್ಕಳದಿಂದ ಬೆದ್ರಂಪಳ್ಳವರೆಗಿನ ರಸ್ತೆ ಅಂಚಿನಲ್ಲಿ ವ್ಯಾಪಕವಾಗಿ ತ್ಯಾಜ್ಯ ತುಂಬಿಕೊಳ್ಳುವಂತಾಗಿದೆ.

ರಸ್ತೆಬದಿ ಸುರಿಯುವ ತ್ಯಾಜ್ಯವನ್ನು ಬೀದಿನಾಯಿ, ಕಾಗೆ, ಪಕ್ಷಿಗಳು ಚೆಲ್ಲಾಪಿಲ್ಲಿಗೊಳಿಸುತ್ತಿರುವುದಲ್ಲದೆ, ಪಕ್ಷಿಗಳು ಇವುಗಳನ್ನು ಎತ್ತಿಕೊಂಡುಹೋಗಿ ಬಾವಿ ಸೇರಿದಂತೆ ಕುಡಿಯುವ ನೀರಿಗೆ ಹಾಕುತ್ತಿವೆ. ಅಮೆಕ್ಕಳ ತಿರುವಿನಿಂದ ತೊಡಗಿ, ಪಳ್ಳದ ನವಜೀವನ ಬಸ್ ಸ್ಟಾಪ್, ಬೆದ್ರಂಪಳ್ಳ ಸಮೀಪದ ಎಣ್ಮಕಜೆ ತಿರುವಿನ ವರೆಗೂ ರಸ್ತೆ ಬದಿ ಭಾರಿ ಪ್ರಮಾಣದಲ್ಲಿ ತ್ಯಾಜ್ಯ ಸುರಿಯಲಾಗುತ್ತಿದೆ.

ರಾತ್ರಿ ಅಥವಾ ಬೆಳಗ್ಗಿನ ಸಮಯದಲ್ಲಿ ವಾಹನಗಳಲ್ಲಿ ತೆರಳುವವರು ಈ ರೀತಿ ಮನೆ ಮತ್ತು ಅಂಗಡಿಗಳ ತ್ಯಾಜ್ಯ ತಂದು ಸುರಿಯುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ. ಇತ್ತೀಚೆಗೆ ಬೈಕಿನಲ್ಲಿ ಬಂದು ಮನೆಯ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಬೆದ್ರಂಪಳ್ಳ ಆಸುಪಾಸಿನ ರಸ್ತೆ ಬದಿ ಉಪೇಕ್ಷಿಸುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇಲ್ಲಿನ ರಸ್ತೆಯ ಅಂಚಿಗೆ ಪ್ಲಾಸ್ಟಿಕ್‌ಚೀಲದಲ್ಲಿ ತ್ಯಾಜ್ಯ ಮೂಟೆಕಟ್ಟಿ ಬಿಸಾಡುತ್ತಿರುವುದು ಸಾಮಾನ್ಯವಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳುವಂತೆ ಇಲ್ಲಿನ ಜನತೆ ಆಗ್ರಹಿಸಿದ್ದಾರೆ. ಮನೆಯ ತ್ಯಾಜ್ಯ, ಮದುವೆ, ಸೇರಿದಂತೆ ವಿವಿಧ ಸಮಾರಂಭಗಳಲ್ಲಿ ಬಳಸಿದ ಹಾಳೆತಟ್ಟೆಗಳು, ಪ್ಲಾಸ್ಟಿಕ್ ಬಾಟಲಿ ತ್ಯಾಜ್ಯದ ಮೂಟೆಯಲ್ಲಿ ಕಂಡು ಬರುತ್ತಿದೆ. ಪ್ರಸಕ್ತ ಮನೆಗಳಿಂದ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಲು ಪಂಚಾಯಿತಿ ವತಿಯಿಂದ ಹಸಿರು ಕ್ರಿಯಾ ಸೇನೆ ಕಾರ್ಯಕರ್ತರನ್ನು ನೇಮಕಗೊಳಿಸಿದ್ದರೂ ಅವರಿಗೆ ನೀಡದೆ ಈ ರೀತಿ ಕಾನೂನು ಉಲ್ಲಂಘಿಸಿ ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.