ಗುರುಪುರ: ವರ್ಷದ ಹಿಂದೆ ಅಭಿವೃದ್ಧಿ ಮತ್ತು ಸ್ವಚ್ಛತೆಗಾಗಿ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಪ್ರಶಸ್ತಿ ಪಡೆದ ಗುರುಪುರ ಗ್ರಾಮ ಪಂಚಾಯಿತಿ ಈಗ ತ್ಯಾಜ್ಯ ವಿಲೇವಾರಿ ವಿಷಯದಲ್ಲಿ ಕೆಲವು ಸದಸ್ಯರು ಮತ್ತು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.
ಒಪ್ಪಂದದ ಪ್ರಕಾರ ನೀಡಬೇಕಿದ್ದ ಮೊತ್ತ ನೀಡುವಲ್ಲಿ ಪಂಚಾಯಿತಿ ವಿಳಂಬ ಮಾಡಿದ್ದರೂ, ಕಸ ವಿಲೇ ಗುತ್ತಿಗೆದಾರರು ಕರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಮಾನವೀಯ ನೆಲೆಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಿದ್ದರು. ಇದೀಗ ಪಂಚಾಯಿತಿ ತ್ಯಾಜ್ಯ ವಿಲೇಗೆ ಹೊಸದಾಗಿ ಟೆಂಡರ್ ಕರೆದಿದ್ದು, ಬ್ರೈಟ್ ಎಂಟರ್‌ಪ್ರೈಸೆಸ್ ಗುತ್ತಿಗೆ ಪಡೆದಿದೆ. ಇವರು ಇನ್ನಷ್ಟೇ ಕಾರ್ಯ ಆರಂಭಿಸಬೇಕಿದೆ.
ಹಿಂದಿನ ಅವಧಿಯಲ್ಲಿ 9 ತಿಂಗಳ ತ್ಯಾಜ್ಯ ವಿಲೇವಾರಿಗೆ ಸುಮಾರು 4 ಲಕ್ಷ ರೂ. ಗುತ್ತಿಗೆ ಒಪ್ಪಂದವಾಗಿತ್ತು. ಆದರೆ ಪ್ರಸಕ್ತ ಅವಧಿಯಲ್ಲಿ 8 ಲಕ್ಷ ರೂ.ಗೆ ಒಪ್ಪಂದವಾಗಿದೆ. ಈ ಮೂಲಕ ಅಧಿಕಾರ ದುರುಪಯೋಗಪಡಿಸಲಾಗಿದೆ ಎಂದು ಗ್ರಾಪಂ ಸದಸ್ಯರ ಮತ್ತೊಂದು ಬಣ ಆರೋಪಿಸಿದೆ.
ಪಂಚಾಯಿತಿ ವ್ಯಾಪ್ತಿಯ ಮೂಳೂರು ಮತ್ತು ಅಡ್ಡೂರು ಗ್ರಾಮದ ಗುಡ್ಡ ಪ್ರದೇಶಗಳಲ್ಲಿ ತ್ಯಾಜ್ಯ ರಾಶಿ ಬಿದ್ದಿದೆ. ಸುತ್ತಲಿನ ಪ್ರದೇಶದಲ್ಲಿ ದುರ್ನಾತ ಬೀರುತ್ತಿದೆ. ಪ್ರಸಕ್ತ ಕರೊನಾ ಮಹಾಮಾರಿ ಸಂದರ್ಭದಲ್ಲೇ ನಾಗರಿಕರ ಸ್ವಾಸ್ಥ್ಯಕ್ಕೆ ಡಬಲ್ ಸಂಚಕಾರ ಕಾದಿದೆ.
ಪರಕೀಯರ ಹಸ್ತಕ್ಷೇಪ : ಅಡ್ಡೂರು ಗ್ರಾಮದ ಸದಸ್ಯರೊಬ್ಬರ ಪತಿ ಪಂಚಾಯಿತಿಯ ಪ್ರತಿಯೊಂದು ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಾ ಆಡಳಿತದ ದಿಕ್ಕು ತಪ್ಪಿಸುತ್ತಿದ್ದಾರೆ. ಅವರೀಗ ಪಂಚಾಯಿತಿ ಆಡಳಿತದ ಹಿಡಿತ ಸಾಧಿಸುವಷ್ಟು ಮುಂದುವರಿದಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ. ತಾನೇ ಗ್ರಾಮದ ತ್ಯಾಜ್ಯ ವಿಲೇ ಮಾಡುವುದಾಗಿ ಹೇಳಿ, ತ್ಯಾಜ್ಯ ಸಾಗಾಟಕ್ಕೆ ಖಾಸಗಿ ವಾಹನ ಗೊತ್ತುಪಡಿಸಿ ಪಚ್ಚನಾಡಿ ಮತ್ತು ಕಳಸಗುರಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ತ್ಯಾಜ್ಯ ಡಂಪ್ ಮಾಡಿ ಪಂಚಾಯಿತಿ ಸದಸ್ಯರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈಗಾಗಲೇ ಎರಡು ಖಾಸಗಿ ತ್ಯಾಜ್ಯ ವಿಲೇ ವಾಹನ ಮುಟ್ಟುಗೋಲು ಹಾಕಿ ಎಫ್‌ಐಆರ್ ದಾಖಲಾಗಿದೆ. ಇಷ್ಟಕ್ಕೆ ಅವರು ತ್ಯಾಜ್ಯ ವಿಲೇಯನ್ನೇ ಕೈ ಬಿಟ್ಟಿದ್ದಾರೆ. ಇದರಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ರಾಶಿ ಗುಡ್ಡೆ ಬಿದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳು ವೈರಲ್ ಆಗುತ್ತಿವೆ.
ವಿಲೇವಾರಿಗೆ ಗ್ರಾಮಸ್ಥರ ಒತ್ತಾಯ: ಮೂಳೂರು ಮತ್ತು ಅಡ್ಡೂರು ಗ್ರಾಮಗಳಲ್ಲಿ ಎರಡು ವಾರದಿಂದ ಮನೆಮನೆಯಿಂದ ತ್ಯಾಜ್ಯ ಸಂಗ್ರಹಿಸುವವರಿಲ್ಲ. ಗ್ರಾಮವಾಸಿಗಳಿಂದ ದೂರುಗಳು ಬರಲಾರಂಭಿಸಿವೆ. ರಸ್ತೆ ಬದಿ ಮತ್ತು ಜನವಸತಿ ಪ್ರದೇಶದ ಗುಡ್ಡಗಳ ಖಾಲಿ ಪ್ರದೇಶಗಳಲ್ಲಿ ತ್ಯಾಜ್ಯ ರಾಶಿ ಬಿದ್ದಿದೆ. ಬೀಡಾಡಿ ದನಗಳು, ಬೀದಿ ನಾಯಿಗಳು ತ್ಯಾಜ್ಯ ಎಳೆದಾಡುತ್ತಿದ್ದರೆ, ಹಸಿ ತ್ಯಾಜ್ಯ ಮಳೆ ನೀರಿಗೆ ಕೊಳೆತು ನಾರುತ್ತಿದೆ. ಅಧಿಕಾರಿ, ಜನಪ್ರತಿನಿಧಿ ಮಟ್ಟದಲ್ಲಿ ತ್ಯಾಜ್ಯ ವಿಲೇ ವಿಷಯದಲ್ಲಿ ಕಾಯಕಲ್ಪವಾಗಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತ್ಯಾಜ್ಯ ವಿಲೇ ಸಮಸ್ಯೆ ಉಂಟಾಗಿರುವುದು ಸತ್ಯ. ಈ ಸಮಸ್ಯೆ ಶೀಘ್ರ ಬಗೆಹರಿಯಲಿದೆ. ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಬ್ರೈಟ್ ಎಂಟರ್‌ಪ್ರೈಸೆಸ್ ಗುತ್ತಿಗೆ ಪಡೆದಿದೆ. ಅಬೂಬಕ್ಕರ್, ಪಿಡಿಒ ಗುರುಪುರ