ಕೃಷ್ಣಮೂರ್ತಿ.ಪಿ. ಎಚ್ ಮಾಯಕೊಂಡ
ಎಂಥ ಬರ ಎದುರಾದರೂ ಜನತೆಗೆ ನೀರುಣಿಸುತ್ತಿದ್ದ ದಾವಣಗೆರೆ ತಾಲೂಕು ಹುಚ್ಚವ್ವನಹಳ್ಳಿ ಗ್ರಾಮದ ಐದು ತೆರೆದಬಾವಿಗಳು ಕಲುಷಿತವಾಗಿದ್ದು ಸ್ವಚ್ಛತೆಯ ನಿರೀಕ್ಷೆಯಲ್ಲಿವೆ.
ಕಸವಿಲೇವಾರಿ ಘಟಕಗಳೆಂಬಂತೆ ಸ್ಥಳೀಯರು ನಿತ್ಯ ಎಸೆಯುತ್ತಿರುವ ಅನುಪಯುಕ್ತ ವಸ್ತು ಗಳು ಹಾಗೂ ಬಾವಿಗಳ ಸುತ್ತ ಬೆಳೆದ ಗಿಡಗಂಟಿಗಳಿಂದ ನೀರು ಕಲುಷಿತವಾಗಿದೆ.
ಸುಮಾರು 75-80 ವರ್ಷಗಳ ಹಿಂದೆ ವೀರಬಸಪ್ಪ ಎಂಬವರು ಗ್ರಾಮದಲ್ಲಿ 80-100 ಅಡಿ ಆಳದ 5 ತೆರೆದ ಬಾವಿಗಳನ್ನು ನಿರ್ವಿುಸಿದ್ದರು.ಗ್ರಾಮಕ್ಕೆ ಎಷ್ಟೇ ಬರ ಎದುರಾದರೂ ಈ ಐದು ಬಾವಿಗಳ ಪೈಕಿ ಮೂರು ಬಾವಿಗಳ ನೀರು ಎಂದಿಗೂ ಬತ್ತಿಲ್ಲ.
ಕಳೆದ ಆರೇಳು ವರ್ಷಗಳ ಹಿಂದೆ ಸಮರ್ಪಕ ಮಳೆ ಬಾರದೆ ಹನಿ ನೀರಿಗೆ ಪರದಾಡುವ ಸ್ಥಿತಿ ಇದ್ದಾಗಲೂ ಬಾವಿಗಳಲ್ಲಿ ನೀರು ತುಂಬಿ ತುಳುಕುತ್ತಿದ್ದವು. ಇವುಗಳನ್ನು ಗ್ರಾಮದ ಆಸ್ತಿ ಎಂಬಂತೆ ಸಂರಕ್ಷಿಸಬೇಕಿದ್ದ ಸ್ಥಳೀಯ ಆಡಳಿತ ಇತ್ತ ಗಮನ ನೀಡುವ ಗೋಜಿಗೆ ಹೋದಂತಿಲ್ಲ.
2017-18 ನೇ ಸಾಲಿನಲ್ಲಿ 14ನೇ ಹಣಕಾಸು ಯೋಜನೆಯಡಿ 50 ಸಾವಿರ ರೂ. ವೆಚ್ಚದಲ್ಲಿ ಬಾವಿಯ ಮೇಲ್ಭಾಗಕ್ಕೆ ಕಬ್ಬಿಣದ ಜರಡಿ ಅಳವಡಿಸಲಾಗಿದೆ. ಈ ಗ್ರಾಮದಲ್ಲಿ 2 ವಾರ್ಡ್ಗಳಿಂದ ಆರು ಸದಸ್ಯರಿದ್ದರೂ ನೀರು ನೈರ್ಮಲ್ಯದ ಕಡೆಗೆ ಗಮನ ನೀಡಿಲ್ಲ ಎಂಬ ದೂರಿದೆ.
ಗಣೇಶ ಚತುರ್ಥಿಯಲ್ಲಿ ಪ್ಲಾಸ್ಟ್ರ ಆಫ್ ಪ್ಯಾರಿಸ್ನ ಮೂರ್ತಿಗಳನ್ನು ಈ ಬಾವಿಗಳಲ್ಲಿ ವಿಸರ್ಜನೆ ಮಾಡುತ್ತಾರೆ. ಪೂಜೆಗೆಂದು ಕಟ್ಟಿರುವ ತೆಂಗಿನ ಕಾಯಿ, ನಿರುಪಯುಕ್ತ ವಸ್ತುಗಳು ಕೂಡ ಇಲ್ಲಿಗೆ ಸೇರುತ್ತಿವೆ. ಗೌರಸಮುದ್ರ ಮಾರಮ್ಮ ದೇವಾಲಯದ ಎದುರಿನ ಬಾವಿ ಸೇರಿ ಎಲ್ಲ ಐದೂ ತೆರೆದ ಬಾವಿಗಳ ನೈರ್ಮಲ್ಯ ಕಾಪಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ತೆರೆದ ಬಾವಿಗಳು, ಪುಷ್ಕರಣಿಗಳ ಜಲ ಸಂರಕ್ಷಣೆಗೆ ಸ್ಥಳೀಯ ಗ್ರಾಪಂ ಮುಂದಾಗಬೇಕು. ಗಣೇಶ ವಿಗ್ರಹ ಹಾಗೂ ನಿರುಪಯುಕ್ತ ವಸ್ತುಗಳನ್ನು ಬಾವಿಗಳಿಗೆ ಹಾಕದಂತೆ ಜಾಗೃತಿ ವಹಿಸ ಬೇಕು. ಬಳಕೆಗೆ ಯೋಗ್ಯವಾದ ಬಾವಿಗಳ ನೀರು ಕಲುಷಿತಗೊಂಡ ಹಿನ್ನೆಲೆಯಲ್ಲಿ ಗ್ರಾಪಂ ಸದಸ್ಯರು ಪಿಡಿಒ ಗಮನಹರಿಸಬೇಕು. | ಹುಚ್ಚವನಹಳ್ಳಿ ಗಣೇಶ್, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ, (ನಂಜುಂಡಸ್ವಾಮಿ ಬಣ)
ಗ್ರಾಮದಲ್ಲಿರುವ ತೆರೆದ ಬಾವಿಗಳಲ್ಲಿ ನೀರು ತುಂಬಿದೆ. ನಿರುಪಯುಕ್ತ ವಸ್ತುಗಳನ್ನು ಹಾಕಿದ್ದರಿಂದ ನೀರು ಕಲುಷಿತವಾಗಿದೆ. ಗ್ರಾಪಂ ಸ್ವಚ್ಛತೆಗೆ ಮುಂದಾಗಬೇಕು. | ಕೆ. ಜಯಮ್ಮ, ಗ್ರಾಪಂ ಮಾಜಿ ಉಪಾಧ್ಯಕ್ಷ
ಬಾವಿಗಳಲ್ಲಿ ಗಿಡಮರಗಳು ಬೆಳೆದು ನಿಂತಿವೆ.ನೀರು ಕಲುಷಿತಗೊಂಡಿದೆ. ಸದ್ಯದಲ್ಲೇ ಸ್ವಚ್ಛತೆ ಮಾಡಿಸಲು ಕ್ರಮ ತೆಗೆದುಕೊಳ್ಳಲಾಗುವುದು. | ಆರ್.ಸಿ. ಗಣೇಶ್, ಗ್ರಾಪಂ ಮಾಜಿ ಅಧ್ಯಕ್ಷ.