ಜಿಲ್ಲೆ

ಚರಂಡಿಗಳಲ್ಲಿನ ತ್ಯಾಜ್ಯ ತೆರವು ಕಾರ್ಯ

Hassan

ಚನ್ನರಾಯಪಟ್ಟಣ: ತಾಲೂಕಿನ ಬಾಗೂರು ಹೋಬಳಿ ಕೆಂಬಾಳು ಗ್ರಾಮದ ಚರಂಡಿಗಳಲ್ಲಿ ತುಂಬಿಕೊಂಡಿದ್ದ ತ್ಯಾಜ್ಯವನ್ನು ಗ್ರಾಮ ಪಂಚಾಯಿತಿ ವತಿಯಿಂದ ತೆರವುಗೊಳಿಸುವ ಕಾರ್ಯ ಗುರುವಾರ ನಡೆಯಿತು.

ಕೆಂಬಾಳು ಗ್ರಾಮದಲ್ಲಿ ಬಹುತೇಕ ಚರಂಡಿಗಳು ತ್ಯಾಜ್ಯದಿಂದ ತುಂಬಿಹೋಗಿ, ಕೊಳಚೆ ನೀರು ರಸ್ತೆ ಮಧ್ಯೆಯೇ ಹರಿಯುತ್ತಿದ್ದ ಅವ್ಯವಸ್ಥೆ ಕುರಿತು ‘ಕೆಂಬಾಳು ಗ್ರಾಮದಲ್ಲಿ ಅನೈರ್ಮಲ್ಯ ತಾಂಡವ’ ಶೀರ್ಷಿಕೆಯಡಿ ಮೇ 6 ರಂದು ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿತ್ತು.

ಎಚ್ಚೆತ್ತುಕೊಂಡ ಗ್ರಾಮ ಪಂಚಾಯಿತಿ ಅಧಿಕಾರಿಗಳು ಚರಂಡಿಗಳಲ್ಲಿ ತುಂಬಿರುವ ತ್ಯಾಜ್ಯವನ್ನು 15ನೇ ಹಣಕಾಸಿನ ಯೋಜನೆಯಡಿ ತೆರವುಗೊಳಿಸಿ ಸ್ವಚ್ಛಗೊಳಿಸುವಲ್ಲಿ ಕ್ರಮ ಕೈಗೊಂಡಿದ್ದಾರೆ. ಗುರುವಾರ ಬೆಳಗ್ಗೆಯಿಂದಲೇ ಮೂರ‌್ನಾಲ್ಕು ಕಾರ್ಮಿಕರು ತ್ಯಾಜ್ಯ ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು.

ಎರಡು ತಿಂಗಳ ಹಿಂದೆಯೇ ಚರಂಡಿಗಳಲ್ಲಿ ತುಂಬಿರುವ ತ್ಯಾಜ್ಯದ ತೆರವು ಕಾರ್ಯ ನಡೆಯಬೇಕಿತ್ತು. ಆದರೆ ಕರೊನಾ ಸೋಂಕಿನ ಅಬ್ಬರದ ಜತೆಗೆ ಕೂಲಿ ಕಾರ್ಮಿಕರ ಕೊರತೆ ಎದುರಾಗಿದ್ದರಿಂದ ವಿಳಂಬವಾಯಿತು. ಸದ್ಯ ಕೂಲಿ ಕಾರ್ಮಿಕರು ಸಿಕ್ಕಿದ್ದು ಇನ್ನೆರಡು ದಿನಗಳಲ್ಲಿ ಗ್ರಾಮದ ಸಂಪೂರ್ಣ ಚರಂಡಿಗಳನ್ನು ಸ್ವಚ್ಛಗೊಳಿಸಲಾಗುವುದು ಎಂದು ಪಿಡಿಒ ಕೃಷ್ಣೇಗೌಡ ವಿಜಯವಾಣಿಗೆ ತಿಳಿಸಿದರು.

15 ನೇ ಹಣಕಾಸಿನ ಯೋಜನೆಯನ್ನು ಬಳಕೆ ಮಾಡಿಕೊಂಡು ಕೆಂಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಎಲ್ಲ ಗ್ರಾಮಗಳ ಚರಂಡಿಗಳನ್ನು ಸ್ವಚ್ಛಗೊಳಿಸಲಾಗುವುದು. ಜತೆಗೆ ಗ್ರಾಪಂ ಕೇಂದ್ರಸ್ಥಾನ ಕೆಂಬಾಳು ಗ್ರಾಮದಲ್ಲಿ ಸಂಪೂರ್ಣ ಶಿಥಿಲಾವಸ್ಥೆ ತಲುಪಿರುವ ಓವರ್ ಹೆಡ್ ಟ್ಯಾಂಕ್ ಅನ್ನು ವಾರಾಂತ್ಯದಲ್ಲಿ ತೆರವುಗೊಳಿಸಲಾಗುವುದು.
ಕೃಷ್ಣೇಗೌಡ ಪಿಡಿಒ, ಕೆಂಬಾಳು ಗ್ರಾಪಂ