ಜಿಲ್ಲೆ

ಕಡಲತೀರದಲ್ಲಿ ಖಾಲಿ ಬಾಟ್ಲಿ ರಾಶಿ !

Udupi

ಉಡುಪಿ: ತೋನ್ಸೆ ಕೆಮ್ಮಣ್ಣು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೂಡೆ ಕಡಲತೀರದಲ್ಲಿ ಸ್ವಚ್ಛತೆಯ ಸಮಯದಲ್ಲಿ ಬಂಡೆಕಲ್ಲಿನ ಎಡೆಗಳೊಳಗೆ ಸುಮಾರು 5000ಕ್ಕೂ ಅಧಿಕ ಮದ್ಯದ ಬಾಟಲಿಗಳು ಪತ್ತೆಯಾಗಿವೆ!

ಹೂಡೆ ನಿರ್ಮಲ ತೋನ್ಸೆ ಸಂಸ್ಥೆ ಇತರ ಸಂಘಟನೆಗಳೊಂದಿಗೆ ಪರಿಸರ ಸುಂದರಗೊಳಿಸಲು ಸ್ವಚ್ಛತೆ ಅಭಿಯಾನ ನಡೆಸಿದಾಗ ಸಮದ್ರದಂಡೆಗೆ ಹಾಕಿದ ಬಂಡೆಕಲ್ಲುಗಳ ಎಡೆಯಲ್ಲಿ ಒಂದು ಕಿ. ಮೀ. ವ್ಯಾಪ್ತಿಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಖಾಲಿ ಸೀಸೆಗಳು ಪತ್ತೆಯಾಗಿವೆ. ಸಂಸ್ಥೆಯು ಕೆಮ್ಮಣ್ಣು ಗ್ರಾ.ಪಂ., ಎಸ್‌ಕೆಪಿಎ, ಜಯಂಟ್ಸ್ ವೆಲ್ಫೇರ್ ಪೌಂಡೇಶನ್, ಕೆಮ್ಮಣ್ಣು ಕಾಲೇಜು ಹಳೆವಿದ್ಯಾರ್ಥಿ ಸಂಘ, ಕಲ್ಯಾಣಪುರ ಲಯನ್ಸ್, ಲಿಯೋ ಕ್ಲಬ್, ಯುವಶಕ್ತಿ, ಸ್ವಚ್ಛಾ ಭಾರತ್ ಫ್ರೆಂಡ್ಸ್ ಕೊಡವೂರು, ಉಡುಪರತ್ನ ಪ್ರತಿಷ್ಠಾನ, ಕೆಮ್ಮಣ್ಣು ಡಾಟ್‌ಕಾಂ ಸೇರಿದಂತೆ ವಿವಿಧ ಸಂಘಟನೆಗಳು ಹೂಡೆ ಸಮುದ್ರ ತೀರದ ಅಕ್ಕಪಕ್ಕ ಸ್ವಚ್ಛತಾ ಕಾರ್ಯ ಕೈಗೊಂಡಿದೆ.

ಹೆಚ್ಚಾಗಿ ರಾತ್ರಿ ವೇಳೆ ಮೋಜು ಮಸ್ತಿಗೆಂದು ಸಮುದ್ರ ತೀರಕ್ಕೆ ಬರುವ ಕೆಲವರು ಕಂಠಪೂರ್ತಿ ಕುಡಿದು ಬಾಟಲಿ ಅಲ್ಲಿಯೇ ಎಸೆದು ಹೋಗುತ್ತಿದ್ದು, ಗಾಜಿನ ಬಾಟಲಿ, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಬಾಟಲಿಗಳಿಂದ ಬರುವ ಪಾನೀಯಗಳಿಂದಾಗಿ ಸಮುದ್ರತಟ ತ್ಯಾಜ್ಯದ ರಾಶಿಯಾಗಿದೆ. ಪ್ರತೀ ವಾರ ಮದ್ಯದ ಬಾಟಲಿ ಹೆಚ್ಚುತ್ತಾ ಹೋಗುತ್ತದೆ. ಕುಡಿತದ ಮಜಾ ತೆಗೆದುಕೊಳ್ಳುವ ಕೆಲವರಿಂದ ಇತರ ಪ್ರವಾಸಿಗರಿಗೂ ತೊಂದರೆಯಾಗುತ್ತದೆ. ಇದು ಪ್ರವಾಸೋದ್ಯಮದ ಮೇಲೂ ಹೊಡೆತ ನೀಡುತ್ತದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಕತ್ತಲಾದ ಮೇಲೆ ಹೊರಗಿನ ಮಂದಿ ಇಲ್ಲಿ ಕುಡಿದು ಮಜಾ ಮಾಡಲು ಬರುತ್ತಾರೆ. ಇಲ್ಲಿ ಕುಳಿತು ಕುಡಿಯಬೇಡಿ ಎಂದು ಸ್ಥಳೀಯರು ವಿನಂತಿಸಿದರೂ ಯಾರು ಕ್ಯಾರೇ ಅನ್ನುತ್ತಿಲ್ಲ. ಕುಡಿದು ಮತ್ತೇರಿದಾಗ ಇವರಿಂದ ಇತರ ಪ್ರವಾಸಿಗರಿಗೂ ತೊಂದರೆಯಾಗುತ್ತದೆ. ಇದರಿಂದ ಮಹಿಳೆಯರಿಗೆ ಇಲ್ಲಿ ಭಯದ ವಾತಾವರಣ ನಿರ್ಮಾಣವಾದಂತಿದೆ ಎಂದು ಸ್ಥಳೀಯರ ಆರೋಪವಾಗಿದೆ.

ನಮ್ಮ ಕಡಲತೀರ ಸ್ವಚ್ಛತೆ ಶಾಂತಿಮಯ ವಾತಾವರಣದಿಂದ ಕೂಡಿರಬೇಕು. ತ್ಯಾಜ್ಯದ ತೊಟ್ಟಿಯಾಗಬಾರದು. ರಾತ್ರಿ ಪೊಲೀಸ್ ಬೀಟ್ ವ್ಯವಸ್ಥೆ ಇನ್ನಷ್ಟು ಹೆಚ್ಚಿಸಬೇಕು. ಮದ್ಯದ ಬಾಟಲಿ, ತ್ಯಾಜ್ಯ ಎಸೆಯುವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

- ರಿಚರ್ಡ್ ಕ್ರಾಸ್ತೋ, ನಿರ್ಮಲ ತೋನ್ಸೆ ಸಂಘಟನೆ ಸದಸ್ಯ