- ಅನ್ಸಾರ್ ಇನೋಳಿ ಉಳ್ಳಾಲ
ಒಂದು ಸಮಸ್ಯೆಗೆ ಪರಿಹಾರ ಕಂಡುಕೊಂಡರೆ ಇನ್ನೊಂದು ಸಮಸ್ಯೆ ಎದುರಾಗುತ್ತದೆ ಎಂಬುದಕ್ಕೆ ಸಾಕ್ಷಿ ಹೇಳುತ್ತಿದೆ ಉಳ್ಳಾಲದ ನೇತ್ರಾವತಿ ಸೇತುವೆ. ನದಿಗೆ ಹಾರಿ ಆತ್ಮಹತ್ಯೆ ಮಾಡುವವರನ್ನು ತಡೆಯಲೆಂದು ನಿರ್ಮಿಸಲಾಗಿರುವ ರಕ್ಷಣಾ ಬೇಲಿಯಲ್ಲೀಗ ಕಸ ತುಂಬಿದ ಪ್ಲಾಸ್ಟಿಕ್ ಚೀಲಗಳು ನೇತಾಡುತ್ತಿದ್ದು ವ್ಯವಸ್ಥೆಯನ್ನೇ ಅಣಕವಾಡುವಂತಾಗಿದೆ.
ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಆತ್ಮಹತ್ಯೆ ಪ್ರಕರಣಗಳು ನಡೆಯುವುದು ಸಾಮಾನ್ಯ. ಇದನ್ನು ತಡೆಯಲು ಸೇತುವೆಗೆ ಬೇಲಿ, ಸಿಸಿ ಕ್ಯಾಮರಾ ಅಳವಡಿಸಬೇಕು ಎಂಬ ಬೇಡಿಕೆ ಹಿಂದೆಯೇ ಇತ್ತಾದರೂ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಆತ್ಮಹತ್ಯೆ ಬಳಿಕ ಈ ಬೇಡಿಕೆಗೆ ಬಲ ಬಂತು. ಈ ಪ್ರಕರಣದ ಬಳಿಕ ಒಂದೆರೆಡು ದಿನ ಪೊಲೀಸ್ ಕಾವಲು ಹಾಕಲಾಯಿತಾದರೂ, ಆತ್ಮಹತ್ಯೆ ಮಾಡುವವರಿಗೆ ಕಡಿವಾಣ ಸಾಧ್ಯವಾಗಲಿಲ್ಲ. ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಲೇ ಹೋಯಿತು.
ಒಂದೆಡೆ ನೇತ್ರಾವತಿ ಸೇತುವೆ ಆತ್ಮಹತ್ಯೆಯ ಹಾಟ್‌ಸ್ಪಾಟ್ ಆಗಿದ್ದರೆ ಮತ್ತೊಂದೆಡೆ ತ್ಯಾಜ್ಯ, ಕಸ ಸುರಿಯುವವರು, ವಾಮಾಚಾರ ಮಾಡಿದ ವಸ್ತುಗಳನ್ನು ಎಸೆಯುವವರ ಫೇವರಿಟ್ ತಾಣವೂ ಆಗುತ್ತಿದೆ. ವಾಮಾಚಾರಕ್ಕೆ ಬಳಸಿದ ವಸ್ತು, ಮನೆಯ ಕಸ, ತ್ಯಾಜ್ಯವನ್ನು ಪ್ಲಾಸ್ಟಿಕ್ ಹಾಗೂ ಇತರ ಚೀಲಗಳಲ್ಲಿ ತುಂಬಿಸಿ ವಾಹನದಲ್ಲಿ ಸಂಚರಿಸುತ್ತಿರುವಾಗಲೇ ಸೇತುವೆಗೆ ಎಸೆಯುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಸೇತುವೆಯಲ್ಲಿ ತಡೆಬೇಲಿ ಇರುವುದರಿಂದ ಪ್ಲಾಸ್ಟಿಕ್ ಚೀಲಗಳು ನೀರಿಗೆ ಬೀಳದೆ ಬೇಲಿಯಲ್ಲೇ ನೇತಾಡುತ್ತಿದ್ದು, ಇಲ್ಲವೇ ಸೇತುವೆ ಮೇಲೆ ಬಿದ್ದು ಅಸಹ್ಯ ಸೃಷ್ಟಿಸುತ್ತಿದೆ. ಸಿಸಿ ಕ್ಯಾಮರಾ ಅಳವಡಿಸುವ ಕಾರ್ಯ ಆದಷ್ಟು ಬೇಗ ನಡೆದು ಸೇತುವೆಯನ್ನು ಕುರೂಪಗೊಳಿಸುವವರಿಗೆ ಶಿಕ್ಷೆ, ದಂಡ ವಿಧಿಸುವ ನಿಯಮ ಜಾರಿಯಾಗಲಿ ಎಂಬ ಆಗ್ರಹ ಕೇಳಿ ಬಂದಿದೆ.
ನೇತ್ರಾವತಿ ಸೇತುವೆ ಮಂಗಳೂರಿನ ಸಂಪರ್ಕ ಕೊಂಡಿಯಾಗಿದ್ದು, ಸಾರ್ವಜನಿಕವಾಗಿ ಆಕರ್ಷಣೆಯ ತಾಣವೂ ಹೌದು. ಆದರೆ ಕೆಲವರು ತ್ಯಾಜ್ಯ ಎಸೆದು ನದಿ ಕಲುಷಿತಗೊಳಿಸುತ್ತಿದ್ದರು. ಪ್ರಸಕ್ತ ತ್ಯಾಜ್ಯ ಪ್ಲಾಸ್ಟಿಕ್ ಚೀಲಗಳು ಸೇತುವೆ ಬೇಲಿಯಲ್ಲಿ ನೇತಾಡುತ್ತಿರುವುದು ಅಸಹ್ಯ ಸೃಷ್ಟಿಸುವಂತಾಗಿದೆ. -ನಾಸಿರ್ ನಡುಪದವು, ಸಾಮಾಜಿಕ ಮುಖಂಡ ಮನೆಗಳಲ್ಲಿ ಸ್ವಚ್ಛತೆ ಕಾಪಾಡಿದಂತೆ ಸಾರ್ವಜನಿಕ ಸ್ಥಳಗಳನ್ನೂ ಶುಚಿಯಾಗಿಡುವ ಜವಾಬ್ದಾರಿ ಜನರದ್ದು. ನದಿಗೆ ತ್ಯಾಜ್ಯ ಎಸೆಯುವುದರಿಂದ ಮತ್ಸ್ಯ ಸಂಕುಲಕ್ಕೂ ಅಪಾಯ. ನೇತ್ರಾವತಿ ನದಿ ಮತ್ತು ಸೇತುವೆ ಸ್ವಚ್ಛತೆ ಕಾಪಾಡಲು ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕು. -ದೇವಣ್ಣ ಶೆಟ್ಟಿ ಕೊಣಾಜೆ, ಸಮಾಜ ಸೇವಕರು ಆತ್ಮಹತ್ಯೆ ತಡೆಯಲು ಸೇತುವೆಗೆ ತಡೆಬೇಲಿ ನಿರ್ಮಿಸಲು ಮಾಡಿರುವ ಪ್ರಸ್ತಾಪ ಜಾರಿಗೆ ಬಂದಿದೆ. ಈಗ ಆಗಿರುವ ಕಾಮಗಾರಿಗೆ ಎಷ್ಟು ವರ್ಷಗಳ ಗ್ಯಾರಂಟಿ ಇದೆ ಎಂಬುದನ್ನು ಗುತ್ತಿಗೆದಾರರು ತಿಳಿಸಬೇಕು. ಮಧ್ಯಭಾಗದಲ್ಲಿ ಕೂಡ ತಡೆ ಬೇಲಿ ನಿರ್ಮಿಸಬೇಕು. ಆದಷ್ಟು ಬೇಗ ವಿದ್ಯುತ್ ಕಂಬಗಳಿಗೆ ಸಿಸಿ ಕ್ಯಾಮರಾ ಅಳವಡಿಸಿ, ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಯಮ ಜಾರಿ ತರಬೇಕು. -ಯು.ಟಿ. ಖಾದರ್, ಮಂಗಳೂರು ಶಾಸಕ