ಜಿಲ್ಲೆ

ಶೋಕಿಗಾಗಿ ಕಳವು ಮಾಡುತ್ತಿದ್ದ ಮಹಿಳೆಯರ ಸೆರೆ

ಎನ್.ವೆಂಕಟೇಶ್

ಕೂಲಿ ಮಾಡುತ್ತಿದ್ದವರಿಗೆ ಕಳ್ಳತನವೇ ಪ್ರವೃತ್ತಿ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ

ಚಿಕ್ಕಬಳ್ಳಾಪುರ: ಜನನಿಬಿಡ ಸ್ಥಳಗಳಲ್ಲಿ ಹಣ ಹಾಗೂ ಒಡವೆ ಕದಿಯುತ್ತಿದ್ದ ಮೂವರು ಚಾಲಾಕಿ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಕಳ್ಳತನದ ಮಾಲು ವಶಪಡಿಸಿಕೊಂಡಿದ್ದಾರೆ.

ಕಲಬುರಗಿಯ ಮಾಂಗರವಾಡಿ ಬಾಡಾ ತಾಂಡಾದ ರೇಖಾ ಬಾಯಿ (58), ಬಾಪುನಗರದ ರೋಜಾ (27) ಹಾಗೂ ಕರೀನಾ (25) ಬಂಧಿತರು. ಆರೋಪಿಗಳ ಬಳಿಯಿದ್ದ ಹಣ ಮತ್ತು ಒಡವೆಯನ್ನು ವಶಪಡಿಸಿಕೊಳ್ಳಲಾಗಿದೆ. ಇವರ ಬಂಧನದಿಂದ ತುಮಕೂರು, ಹೊಳೆನರಸೀಪುರ, ಹಲಸೂರು, ರಾಮನಗರ ಸೇರಿ ವಿವಿಧೆಡೆ ನಡೆದ ಕಳವು ಪ್ರಕರಣಗಳು ಬೆಳಕಿಗೆ ಬಂದಿದೆ.

ಊರಿನಿಂದ ಊರಿಗೆ ವಲಸೆ

ಕೂಲಿಕಾರ್ಮಿಕರಾಗಿರುವ ಆರೋಪಿಗಳು ಕಳ್ಳತನವನ್ನು ಪ್ರವೃತ್ತಿಯಾಗಿಸಿಕೊಂಡಿದ್ದರು. ಬಸ್ ನಿಲ್ದಾಣ ಸೇರಿ ಜನನಿಬಿಡ ಪ್ರದೇಶಗಳಲ್ಲಿ ಚಾಲಾಕಿತನ ತೋರಿ ಕಳವು ಮಾಡುತ್ತಿದ್ದರು. ನೂಕುನುಗ್ಗಲಿನ ಜನರ ನಡುವೆ ಸೇರಿಕೊಂಡು ಹಣ, ವಸ್ತುಗಳನ್ನು ಕದಿಯುತ್ತಿದ್ದರು. ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗಿ ಕದ್ದು ಶೋಕಿ ಜೀವನ ನಡೆಸುವುದನ್ನು ರೂಢಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ತೆಯಾಗಿದ್ದು ಹೇಗೆ?

ಕಳೆದ ನ.16ರಂದು ಗೌರಿಬಿದನೂರು ನಗರದಿಂದ ಬೆಂಗಳೂರಿಗೆ ಹೋಗಲು ಬಸ್ ಹತ್ತುವಾಗ ಶಾಂತಕುಮಾರಿ ಎಂಬುವರ 50 ಗ್ರಾಂ ಬಂಗಾರದ ಚೈನನ್ನು ಬುರ್ಖಾ ಧರಿಸಿದ್ದ ಮಹಿಳೆಯರು ಕಳವು ಮಾಡಿದ್ದರು. ಡಿ.2ರಂದು ರತ್ನಮ್ಮ ಎಂಬುವರ ಬ್ಯಾಗ್‌ನಲ್ಲಿದ್ದ ಒಂದು ಲಕ್ಷ ರೂ. ಹಣ ಕಳವಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಹೀಗೆ ಒಂದು ತಿಂಗಳಲ್ಲಿ ಗೌರಿಬಿದನೂರು ಬಸ್ ನಿಲ್ದಾಣದಲ್ಲಿ ನಡೆದ 2 ಕಳವು ಪ್ರಕರಣಗಳನ್ನು ಭೇದಿಸಲು ಪೊಲೀಸರ ವಿಶೇಷ ತಂಡ ರಚಿಸಲಾಗಿತ್ತು. ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ಮೂವರು ಅನುಮಾನಾಸ್ಪದವಾಗಿ ವರ್ತಿಸಿರುವುದು ಗೊತ್ತಾಗಿದೆ. ಇದರ ನಡುವೆ ಡಿ.23ರಂದು ಮತ್ತೆ ಮೂವರು ಆರೋಪಿಗಳು ಗೌರಿಬಿದನೂರು ನಗರದ ಬಸ್ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ವಿಶೇಷ ತಂಡ ರಚನೆ

ಪ್ರಕರಣ ಭೇದಿಸಲು ಡಿವೈಎಸ್ಪಿ ಶಿವಕುಮಾರ್ ಮಾರ್ಗದರ್ಶನದಲ್ಲಿ ಗೌರಿಬಿದನೂರು ಸಿಪಿಐ ಕೆ.ಪಿ. ಸತ್ಯನಾರಾಯಣ್, ನಗರ ಠಾಣೆ ಪಿಎಸ್‌ಐ ಚಂದ್ರಕಲಾ, ಸಿಬ್ಬಂದಿ ಶ್ರೀರಾಮಯ್ಯ, ಆರ್.ಎಸ್. ಪುಷ್ಪಾ, ಶಿವಶೇಖರ, ಮಹಂತೇಶ್, ರಿಜ್ವಾನ್, ಶ್ರೀನಿವಾಸರೆಡ್ಡಿ, ಅಶ್ವತ್ಥಪ್ಪ ಅವರನ್ನೊಳಗೊಂಡ ತಂಡವನ್ನು ಎಸ್ಪಿ ಕುಶಾಲ್ ಚೌಕ್ಸೆ ರಚಿಸಿದ್ದರು.

"ಕಳ್ಳತನ ಪ್ರಕರಣಗಳಿಗೆ ಅವಕಾಶ ನೀಡದಿರಲು ಜನಸಂದಣಿ ಸ್ಥಳಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಒಡವೆಗಳನ್ನು ಎಲ್ಲರಿಗೂ ಕಾಣುವಂತೆ ಧರಿಸಬಾರದು." - ಕುಶಾಲ್ ಚೌಕ್ಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಿಕ್ಕಬಳ್ಳಾಪುರ