ಬಳ್ಳಾರಿ: ಮಹಾತ್ಮಗಾಂಧಿ ಅವರನ್ನ ಕೊಂದ ಗೋಡ್ಸೆಯಾಗಲಿ ಹಾಗೆಯೇ ಸಾವರ್ಕರ್, ಗೋಳ್ವಾಲ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೈಲಿಗೆ ಹೋಗಿದ್ದಾರಾ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ(CM Siddaramaiah) ಗುಡುಗಿದರು.
ಸಂಡೂರು ವಿಧಾನಸಭಾ ಕ್ಷೇತ್ರದ ಪ್ರಚಾರ ಸಭೆಯಲ್ಲಿ ಶನಿವಾರ (ನ.09) ಮಾತನಾಡಿದರು.
ಬಿಜೆಪಿ, RSS ಪರಿವಾರದ ಯಾರೊಬ್ಬರೂ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಒಂದೇ ಒಂದು ಉದಾಹರಣೆ ಇದೆಯಾ ಎಂದು ಪ್ರಶ್ನಿಸಿದ ಸಿಎಂ, ನಾವು ಕೊಟ್ಟ ಕಲ್ಯಾಣ ಕಾರ್ಯಕ್ರಮಗಳು ಪ್ರತಿಯೊಂದು ಮನೆ ತಲುಪಿವೆ. ಬಿಜೆಪಿ ಯವರದ್ದು ಕೇವಲ ಸುಳ್ಳುಗಳು ಮಾತ್ರ ಮನೆ ಮನೆ ತಲುಪುತ್ತಿವೆ ಎಂದು ವ್ಯಂಗ್ಯವಾಡಿದರು.
ಮೊದಲ ಬಾರಿ ಮುಖ್ಯಮಂತ್ರಿಯಾಗಿ ಹಲವಾರು ಭಾಗ್ಯಗಳನ್ನು ಯಶಸ್ವಿಯಾಗಿ ಕೊಟ್ಟ ರೀತಿಯಲ್ಲೇ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ವರ್ಷಕ್ಕೆ 56 ಸಾವಿರ ಕೋಟಿ ರೂ. ವೆಚ್ಚದಲ್ಲಿ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದರು.
ಗಣಿ ಲೂಟಿ ಮಾಡಿದ ಜನಾರ್ದನ ರೆಡ್ಡಿ, ಗಣಿ ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡಿದವರು, ವೋಟು ಕೊಡಿ ಅಂತ ಕೇಳೋಕೆ ನಿಮ್ಮ ಬಳಿಗೆ ಬರ್ತಾರೆ. ನಾನಾ ರೀತಿ ಸುಳ್ಳುಗಳನ್ನು ಹೇಳಿ ಮತ ಕೇಳ್ತಾರೆ. ಅವರಿಂದ ಸಂಡೂರಿನ ಅಭಿವೃದ್ಧಿ ಈ ಹಿಂದೆಯೂ ಆಗಿಲ್ಲ, ಮುಂದೆಯೂ ಆಗಲ್ಲ ಎಂದರು.
ಈ.ತುಕಾರಾಮ್ ಸಂಸದರಾಗಿದ್ದು, ಇವರ ಪತ್ನಿ ಅನ್ನಪೂರ್ಣಮ್ಮ ಸಂಡೂರಿನ ಶಾಸಕಿ ಆಗ್ತಾರೆ. ಇಬ್ಬರೂ ಸೇರಿ ಸಂಡೂರನ್ನು ಹೆಚ್ಚೆಚ್ಚು ಅಭಿವೃದ್ಧಿ ಮಾಡ್ತಾರೆ ಎಂದರು.