ಜಿಲ್ಲೆ

ಕರೊನಾ ಸೇನಾನಿಗಳ ಜತೆ ದುರ್ವರ್ತನೆ ತೋರಿದರೆ ಕೇಸ್

Chikkamagaluru

ಚಿಕ್ಕಮಗಳೂರು: ಕರೊನಾ ನಿಯಂತ್ರಣ ಕರ್ತವ್ಯ ನಿರತ ವೈದ್ಯರು ಹಾಗೂ ಸಿಬ್ಬಂದಿ ಜತೆ ಯಾರೇ ಆದರೂ ನಿಯಮಬಾಹಿರವಾಗಿ ನಡೆದುಕೊಂಡರೆ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಡಾ. ಎಚ್.ಎಲ್.ನಾಗರಾಜ್ ಎಚ್ಚರಿಸಿದರು.

ತಾಪಂ ಸಭಾಂಗಣದಲ್ಲಿ ಸೋಮವಾರ ಸಂಜೆ ವೈದ್ಯಾಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕರೊನಾ ಸೇನಾನಿಗಳ ಜತೆ ಒರಟಾಗಿ ನಡೆದುಕೊಳ್ಳುವುದು, ಅವಾಚ್ಯ ಪದ ಬಳಸಿ ನಿಂದಿಸುವುದು ಹಾಗೂ ಸರ್ಕಾರದ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದರು.

ಕರೊನಾ ರಾಷ್ಟ್ರೀಯ ಸಮಸ್ಯೆಯಾಗಿದ್ದು, ಡಬ್ಲ್ಯುಎಚ್​ಒ ಸಹ ಗಂಭೀರವಾಗಿ ಪರಿಗಣಿಸಿ ಹಲವು ನಿರ್ದೇಶನಗಳನ್ನು ನೀಡಿದೆ. ಸೋಂಕು ದಿನೇ ದಿನೆ ವ್ಯಾಪಿಸುತ್ತಿರುವುದರಿಂದ ವೈದ್ಯಕೀಯ ಸಿಬ್ಬಂದಿ ಸಭೆ ನಡೆಸಿ ಮಾರ್ಗದರ್ಶನ ನೀಡುವಂತೆ ವಿಭಾಗೀಯ ಆಯುಕ್ತರು ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಸಭೆ ನಡೆಸಲಾಗಿದೆ ಎಂದರು.

ಸೋಂಕಿನಿಂದ ಇತ್ತೀಚೆಗೆ 35 ರಿಂದ 40 ವರ್ಷದ ಯುವಕರು ಮೃತಪಟ್ಟಿರುವ ನಿದರ್ಶನಗಳಿವೆ. ಹೀಗಾಗಿ ಕರೊನಾ ವಿಚಾರದಲ್ಲಿ ಸಾರ್ವಜನಿಕರು ನಿರ್ಲಕ್ಷ್ಯ ಮಾಡುವುದು ಸಲ್ಲದು. ಸೋಂಕಿತರು ಮತ್ತು ಪ್ರಾಥಮಿಕ ಹಾಗೂ ದ್ವಿತೀಯ ಸಂರ್ಪತರು ಕನಿಷ್ಠ ಹತ್ತು ದಿನ ಮನೆಯಲ್ಲೇ ಇರಬೇಕಾಗುತ್ತದೆ ಎನ್ನುವುದನ್ನು ಹೊರತುಪಡಿಸಿದರೆ ಬೇರೆ ರೀತಿಯ ಭಯ ಅನಗತ್ಯ. ಎಲ್ಲಕ್ಕಿಂತ ಜೀವ ಉಳಿಸಿಕೊಳ್ಳುವುದು ಅತ್ಯಂತ ಮುಖ್ಯ ಎನ್ನುವುದನ್ನು ಅರಿಯಬೇಕು. ವೈದ್ಯರ ಸೂಚನೆಗಳನ್ನು ಸಮರ್ಪಕವಾಗಿ ಪಾಲಿಸಿ ಸಹಕರಿಸಬೇಕು ಎಂದರು.

ಕರೊನಾ ನಿಯಂತ್ರಣ ವಿಚಾರದಲ್ಲಿ ಯಾರೂ ನಾಟಕ ಮಾಡುವುದಾಗಲಿ, ಜನರನ್ನು ಅನಗತ್ಯ ಭೀತಿಗೊಳಪಡಿಸುವುದಾಗಲಿ ನಡೆಯುತ್ತಿಲ್ಲ. ಅಂತಹ ಆರೋಪ ಮಾಡುವುದೂ ಸರಿಯಲ್ಲ. ಪಾಸಿಟಿವ್ ಅಥವಾ ನೆಗೆಟಿವ್ ವಿಚಾರದಲ್ಲಿ ಸುಳ್ಳು ಹೇಳಿ ಯಾರೂ ಮಾಡಬೇಕಾಗಿದ್ದು ಇಲ್ಲಿ ಏನೂ ಇಲ್ಲ ಎಂದು ಹೇಳಿದರು.