ಜಿಲ್ಲೆ

ಸ್ಥಳೀಯ ಮಾರುಕಟ್ಟೆ ಸೃಷ್ಟಿಯಿಂದ ಆರ್ಥಿಕ ವೃದ್ಧಿ

Chitradurga

ಜಗಳೂರು: ರೈತ ಉತ್ಪಾದಕ ಕಂಪನಿಗಳಿಂದ ಸ್ಥಳೀಯ ಮಾರುಕಟ್ಟೆ ಸೃಷ್ಟಿಸಿ ಮೌಲ್ಯವರ್ಧನೆಗೊಳಿಸಿ ಬ್ರ್ಯಾಂಡ್ ಮಾಡಿಕೊಂಡು ಆರ್ಥಿಕ ಲಾಭ ಗಳಿಸಬಹುದು ಎಂದು ಕೃಷಿ ಇಲಾಖೆ ಜಿಲ್ಲಾ ಉಪ ನಿರ್ದೇಶಕ ತಿಪ್ಪೇಸ್ವಾಮಿ ಹೇಳಿದರು.

ಅಮೃತ ರೈತ ಉತ್ಪಾದಕ ಕಂಪನಿ ತಾಲೂಕಿನ ಬಿದರಕೆರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ 10.5 ಲಕ್ಷ ರೂ. ವೆಚ್ಚದ ಗೋದಾಮು ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ದೇಶ ಮುನ್ನಡೆಯುತ್ತಿರುವುದು ರೈತರು. ಅವರಿಗೆ ಉತ್ತಮ ಬೆಲೆ ನೀಡಲು ಹಾಗೂ ಅಭಿವೃದ್ಧಿಗೊಳಿಸಲು ಕೇಂದ್ರ ಸರ್ಕಾರ ರೈತ ಉತ್ಪಾದಕ ಕಂಪನಿ ಮೂಲಕ ಅನೇಕ ಕಾರ್ಯಕ್ರಮ ಕೊಟ್ಟು ಉತ್ತೇಜನ ನೀಡುತ್ತಿದೆ. ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯ ಗೋದಾಮು ನಿರ್ಮಾಣಕ್ಕೆ 10.5 ಲಕ್ಷ ರೂ. ಆರ್ಥಿಕ ನೆರವು ನೀಡಿದೆ ಎಂದರು.

ಮುಂದಿನ ದಿನಗಳಲ್ಲಿ ರೈತ ಉತ್ಪಾದಕರ ಕಂಪನಿಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಯಾವುದೇ ಮಧ್ಯವರ್ತಿಗಳಿಂದ ರೈತರು ಅನ್ಯಾಯವಾಗದಂತೆ ಮೆಕ್ಕೆಜೋಳ, ರಾಗಿ, ಕಡಲೆ ಸೇರಿ ವಿವಿಧ ಬೆಳೆ ನೇರವಾಗಿ ಖರೀದಿಸುವುದರಿಂದ ಕೃಷಿಕರಿಗೆ ಲಾಭ ಆಗಲಿದೆ ಎಂದು ತಿಳಿಸಿದರು.

ಆಯಿಲ್ ಮಿಲ್, ದಾಲ್ ಮಿಲ್, ಆಹಾರ ಪದಾರ್ಥಗಳ ಪ್ರೊಸೆಸಿಂಗ್ ಯೂನಿಟ್‌ಗಾಗಿ ಇನ್ನು ಹೆಚ್ಚಿನ ಹಣ ಇಲಾಖೆ ನೀಡಲು ಸಿದ್ಧವಿದೆ. ಅದನ್ನು ಬಳಸಿಕೊಂಡು ಕೃಷಿ ಉತ್ಪನ್ನಗಳಿಗೆ ಸ್ಥಳೀಯವಾಗಿ ಮಾರುಕಟ್ಟೆ ಸೃಷ್ಟಿಸಿ, ಮೌಲ್ಯವರ್ಧನೆ ಮಾಡಿ ಬ್ರ್ಯಾಂಡ್ ಮಾಡಿಕೊಂಡು ಆರ್ಥಿಕ ಲಾಭಗಳಿಸಬೇಕು ಎಂದು ರೈತರಿಗೆ ಸಲಹೆ ನೀಡಿದರು.

ಕೆವಿಕೆ ಬೇಸಾಯ ತಜ್ಞ ಬಿ.ಓ.ಮಲ್ಲಿಕಾರ್ಜುನ್ ಮಾತನಾಡಿ, ತಾಲೂಕಿನ ಬಿದರಕೆರೆ ಅಮೃತ ಎಫ್‌ಪಿಒ ಆರಂಭದಿಂದ ಈ ಭಾಗದ ಸುತ್ತಮುತ್ತಲಿನ ರೈತರಿಗೆ ಸಹಕಾರಿಯಾಗಿದೆ ಎಂದರು.

ಸಹಾಯಕ ಕೃಷಿ ನಿರ್ದೇಶಕ ಮಿಥುನ್ ಕಿಮಾವತ್, ಅಧ್ಯಕ್ಷ ಮೆದಗಿನಕೆರೆ ಮಂಜುನಾಥ್, ಉಪಾಧ್ಯಕ್ಷ ಸೋಮನಗೌಡ, ನಿರ್ದೇಶಕರಾದ ಉಮಾಪತಿ, ಅರಿಶಿಣಗುಂಡಿ ನಾಗರಾಜ್, ಬಿಸ್ತುವಳ್ಳಿ ನಾಗರಾಜ್, ರಸ್ತೆಮಾಕುಂಟೆ ಕವಿತಾ ಸ್ವಾಮಿ, ಗುತ್ತಿದುರ್ಗ ಬಸವನಗೌಡ ಮತ್ತಿತರರಿದ್ದರು.