ಹುಬ್ಬಳ್ಳಿ: ನಗರದ ವಿಮಾನ ನಿಲ್ದಾಣ ಎದುರಿನ ವೇರ್ ಬಿಡಿಕೆ ವಾಲ್ವಸ್ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಬೇಡಿಕೆ ಈಡೇರಿಕೆಗಾಗಿ ಆರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಹುಬ್ಬಳ್ಳಿ ಧಾರವಾಡ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಸೋಮವಾರ ಬೆಂಬಲ ಸೂಚಿಸಿ ಪ್ರತಿಭಟಿಸಿತು.
ಜೆಸಿಟಿಯು ಸಂಚಾಲಕ ಹಾಗೂ ಸಿಐಟಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ಮಾತನಾಡಿ, ಹಲವು ತಿಂಗಳ ಹಿಂದೆ ಏಕಾಏಕಿ 41 ಕಾರ್ಮಿಕರನ್ನು ಗುಜರಾತಿಗೆ ವರ್ಗಾಯಿಸಲಾಗಿದೆ. ಈ ಕಾರ್ಮಿಕರು ಅಲ್ಲಿ ಹೋಗಲು ಸಾಧ್ಯವಾಗದೆ ಇಲ್ಲಿ ವೇತನ ಇಲ್ಲದೆ ಬೀದಿಪಾಲಾಗಿದ್ದಾರೆ. ನ್ಯಾಯಕೇಳಿದ ಸಂಘದ 12 ಮುಖಂಡರನ್ನು ಅಮಾನತು ಮಾಡಲಾಗಿದೆ. ಆಡಳಿತ ಮಂಡಳಿ ಕಾರ್ಮಿಕರಿಗೆ ನಿರಂತರ ಕಿರುಕಳ ನೀಡುತ್ತಿದೆ. ಈ ಕುರಿತಂತೆ ಹಿರಿಯ ಕಾರ್ಮಿಕ ಅಧಿಕಾರಿಗಳು ಹಲವು ಹಂತದ ಸಂಧಾನ ಸಭೆ ನಡೆಸಿದ್ದರೂ ಮಾಲೀಕರ ಮೊಂಡುತನದಿಂದಾಗಿ ವಿಫಲವಾಗಿವೆ. ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಕಾರ್ಮಿಕ ಸಚಿವರೂ ಆದ ಸಂತೋಷ ಲಾಡ ಅವರ ಗಮನಕ್ಕೂ ತರಲಾಗಿದೆ. ಆದಾಗ್ಯೂ ಸಮಸ್ಯೆ ಪರಿಹಾರವಾಗಿಲ್ಲ. ಕನ್ನಡ ಕಾರ್ಮಿಕರ ವಿರೋಧಿಯಾದ ಈ ಕಂಪನಿಯ ಗುಜರಾತಿ ಮೂಲದ ಮಾಲೀಕರು ಕಂಪನಿಯನ್ನು ಗುಜರಾತಿಗೆ ಸ್ಥಾಳಾಂತರಿಸಿ ಸದರಿ ಕಂಪನಿಯ ಜಮೀನನ್ನು ರಿಯಲ್ ಎಸ್ಟೇಟ್ ದಂಧೆ ಮಾಡಲು ಹುನ್ನಾರ ನಡೆಸುವ ಸಂದೇಹ ಇದೆ. ಕಾರ್ಮಿಕ ಸಚಿವರು ಹಾಗೂ ಕಾರ್ಮಿಕ ಅಧಿಕಾರಿಗಳು ಕಾರ್ಮಿಕರ ಪರವೋ ಅಥವಾ ಮಾಲೀಕರ ಪರವೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಎಐಟಿಯುಸಿ ಮುಖಂಡ ಎ.ಎಸ್. ಪೀರಜಾದೆ, ಶ್ರಮಜೀವಿ ಅಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಚಿದಾನಂದ ಸವದತ್ತಿ, ಲಕ್ಷ್ಮಣ ಹಿರೇಕೆರೂರ ಅಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಹನುಮಂತಪ್ಪ ಪವಾಡಿ, ಟಿಯುಸಿಸಿ ಜಿಲ್ಲಾಧ್ಯಕ್ಷ ಅಶೋಕ ಬಾರ್ಕಿ ಮುಷ್ಕರ ಬೆಂಬಲಿಸಿ ಮಾತನಾಡಿದರು. ಮಾರ್ಕೋಪೋಲೋ ಕಂಪನಿ ನೌಕರರ ಸಂಘದ ಮುಖಂಡರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮುಷ್ಕರವನ್ನು ಬೆಂಬಲಿಸಿ ಭಾಗವಹಿಸಿದ್ದರು.