ಮುಗಳಿಹಾಳ ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದ ಯರಗಟ್ಟಿ ತಹಸೀಲ್ದಾರ್ ಎಂ.ಎನ್. ಮಠದ ಅವರು ವಾರ್ಡನ್ ನಾಗರತ್ನಾ ನಾಯ್ಕರ ಅವರನ್ನು ತರಾಟೆಗೆ ತೆಗೆದುಕೊಂಡರು. ಅಶೋಕ ದುಡಗುಂಟಿ, ವೈ.ಎ್. ಮೂರ್ತೆನ್ನವರ, ಅಮಿತ ನಾಯಿಕ, ನಿಂಗಪ್ಪ ದಳವಾಯಿ, ದುರ್ಗಪ್ಪ ದಳವಾಯಿ ಇತರರಿದ್ದರು. 
ಜಿಲ್ಲೆ

ವಾರ್ಡನ್ ನಾಗರತ್ನಾ ನಾಯ್ಕರ ತರಾಟೆಗೆ

ರಾಘವೇಂದ್ರಗೌಡ ಭೀ ಪಾಟೀಲ್

ಮುಗಳಿಹಾಳ: ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯಕ್ಕೆ ಯರಗಟ್ಟಿ ತಾಲೂಕು ನೋಡಲ್ ಅಧಿಕಾರಿ ಅಶೋಕ ದುಡಗುಂಟಿ ಹಾಗೂ ತಹಸೀಲ್ದಾರ್ ಎಂ.ಎನ್. ಮಠದ ಅವರು ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ವಾರ್ಡನ್ ನಾಗರತ್ನಾ ನಾಯ್ಕರ ಅವರನ್ನು ತರಾಟೆಗೆ ತೆಗೆದುಕೊಂಡರು.

ವಸತಿ ನಿಲಯದ ಕೊಠಡಿಗಳು ಹಾಗೂ ಅಡುಗೆ ಮನೆ ವೀಕ್ಷಿಸಿದರು. ವಿದ್ಯಾರ್ಥಿಗಳಿಗೆ ಕೊಡುವಂತಹ ಕಿಟ್ ದುರುಪಯೋಗವಾಗುತ್ತಿದೆ. ಮಕ್ಕಳಿಗೆ ಸದುಪಯೋಗವಾಗಲಿ ಎಂದು ಸರ್ಕಾರ ನಿಮಗೆ ದುಡ್ಡು ಕೊಟ್ಟರೆ ನಿಮಗೆ ಬೇಕಾಬಿಟ್ಟಿಯಾಗಿ ನಡೆಸುತ್ತಿದ್ದೀರಿ ಎಂದು ವಾರ್ಡನ್‌ಗೆ ಚಳಿ ಬಿಡಿಸಿದರು.

ಮಕ್ಕಳಿಗೆ ಊಟ, ಬಟ್ಟೆ ನೀಡುವುದರಲ್ಲಿ ವ್ಯತ್ಯಾಸ ಮಾಡಲಾಗಿದೆ. ಮಕ್ಕಳನ್ನು ವಸತಿ ನಿಲಯಕ್ಕೆ ಸೇರಿಸಿಕೊಳ್ಳುವಲ್ಲಿ ಸರ್ವಾಧಿಕಾರಿಯಂತೆ ವರ್ತಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದರು. ಮಕ್ಕಳಿಗೆ ಮಾತನಾಡಿಸಿದಾಗ ಬಟ್ಟೆ ಸರಿಯಾಗಿ ಕೊಟ್ಟಿಲ್ಲ. ಕಿಟ್ ಸರಿಯಾಗಿ ವಿತರಣೆ ಮಾಡಿಲ್ಲ. ಊಟದಲ್ಲಿ ಒಂದೇ ಚಪಾತಿ ಕೊಡುತ್ತಾರೆಂದು ಹೇಳುತ್ತಾರೆ.

ಇಂತಹ ಬಡ ಮಕ್ಕಳ ಅನ್ನ ಕಸಿದುಕೊಂಡು ವಾರ್ಡನ್ ಏನು ಉದ್ಧಾರ ಆಗುತ್ತಾರೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ವಿಠ್ಠಲ ದುರಗಪ್ಪ ದಳವಾಯಿ ಪ್ರಶ್ನಿಸಿದರು. ವೈ.ಎ್. ಮೂರ್ತೆನ್ನವರ, ಪಿಡಿಒ ಅಮಿತ ನಾಯಿಕ, ಗೋಪಾಲ ದಳವಾಯಿ, ಬಸವರಾಜ ಇಟಗೌಡ್ರ, ಕೀರಪ್ಪ ದಳವಾಯಿ, ದುರ್ಗಪ್ಪ ದಳವಾಯಿ, ಎಸ್‌ಡಿಎಂಸಿ ಅಧ್ಯಕ್ಷ ನಿಂಗಪ್ಪ ದಳವಾಯಿ, ಸದಸ್ಯ ದುರ್ಗಪ್ಪ ದಳವಾಯಿ, ಸಂಜೀವ ದಳವಾಯಿ, ವೀರನಗೌಡ ಪಾಟೀಲ ಇತರರಿದ್ದರು.