ವಿಜಯವಾಣಿ ಸುದ್ದಿಜಾಲ ತೂಬಗೆರೆ
ನರಗನಹಳ್ಳಿ ಹಾಗೂ ಕೊಂಡಸಂದ್ರ ಗ್ರಾಮಗಳಲ್ಲಿ ಚರಂಡಿ, ರಸ್ತೆ, ಬೀದಿ ದೀಪಗಳು ಸೇರಿ ಅಗತ್ಯ ಮೂಲಸೌಕರ್ಯ ಒದಗಿಸಿಲ್ಲ ಎಂದು ಆರೋಪಿಸಿ ಗ್ರಾಪಂ ಸದಸ್ಯ ಕೃಷ್ಣಪ್ಪ ಪಿಡಿಒ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಹೋಬಳಿಯ ನರಗನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಗ್ರಾಪಂನಿಂದ ಹಮ್ಮಿಕೊಂಡಿದ್ದ ವಾರ್ಡ್ ಸಭೆಯಲ್ಲಿ ಮಾತನಾಡಿದರು. ಗ್ರಾಮದಲ್ಲಿ 3ನೇ ಬಾರಿಗೆ ವಾರ್ಡ್ ಸಭೆ ಕರೆಯಲಾಗಿದೆ. ಆದರೆ, ಮೂಲಸೌಕರ್ಯ ಕಲ್ಪಿಸಲು ಸಾಕಷ್ಟು ಬಾರಿ ಮನವಿ ನೀಡಿದರೂ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.
ಗ್ರಾಪಂ ಪಿಡಿಒ ವೆಂಕಟೇಶ್ ಮಾತನಾಡಿ, ಎಲ್ಲ ಗ್ರಾಮಗಳಲ್ಲಿ ಚರಂಡಿ, ಬೀದಿ ದೀಪ, ರಸ್ತೆ ಕಾಮಗಾರಿಗಳು ನೇರೆಗಾ ಯೋಜನೆಯಡಿ ನಡೆಯುತ್ತಿದ್ದು, ನರಗನಹಳ್ಳಿ, ಕೊಂಡಸಂದ್ರದಲ್ಲಿ ಸ್ವಲ್ಪಮಟ್ಟಿಗೆ ಆಗಿವೆ. ಮುಂದಿನ ಗ್ರಾಮ ಸಭೆಯ ನಂತರ ಗ್ರಾಮಗಳಿಗೆ ಬೇಕಾದ ಎಲ್ಲ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಪಂ ಮಾಜಿ ಅಧ್ಯಕ್ಷ ಸತ್ಯನಾರಾಯಣ ಮಾತನಾಡಿ, ವಾರ್ಡ್ ಸಭೆಗಳಲ್ಲಿ ಜನರ ಅಹವಾಲು ಆಲಿಸಿ, ಗ್ರಾಮ ಸಭೆ ವೇಳೆ ಪರಿಹರಿಸುವ ಪ್ರಯತ್ನ ಮಾಡಲಾಗುವುದು ಎಂದರು.