ಜಿಲ್ಲೆ

ಪಾಲಿಕೆ ಸದಸ್ಯರಿಗೆ ವಾರ್ಡ್ ಫಂಡ್ ಕೊಟ್ಟಿಲ್ಲ

ಹುಬ್ಬಳ್ಳಿ: ವಾರ್ಡ್​ನಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳಲು ಪ್ರತಿ ವಾರ್ಡ್​ಗೆ 50 ಲಕ್ಷ ರೂ. ಅನುದಾನ ನೀಡುವುದಾಗಿ ಹಿಂದಿನ ಮೇಯರ್ ಹೇಳಿದ್ದರು. ಆದರೆ, ಈವರೆಗೆ 1 ರೂ. ನೀಡಿಲ್ಲ ಎಂದು ಹು-ಧಾ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ಸುವರ್ಣ ಕಲ್ಲಕುಂಟ್ಲ ಆರೋಪಿಸಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಅನುದಾನವೇ ಹಂಚಿಕೆ ಮಾಡಿಲ್ಲ. ನೂತನ ಮೇಯರ್ ವೀಣಾ ಬರದ್ವಾಡ ಅವರು ಕಳೆದ ಸಭೆಯಲ್ಲಿ ಪ್ರತಿ ವಾರ್ಡ್​ಗೆ ಈ ಬಾರಿ 75 ಲಕ್ಷ ರೂ. ನೀಡುವುದಾಗಿ ಘೊಷಿಸಿದ್ದಾರೆ. 2023-24ನೇ ಸಾಲಿಗೆ ಒಂದು ಸಾವಿರ ಕೋಟಿ ರೂ. ಮೀರಿದ ಬಜೆಟ್ ಮಂಡಿಸಿರುವ ಬಿಜೆಪಿ ಆಡಳಿತದ ಪಾಲಿಕೆಯಲ್ಲಿ ರಸ್ತೆ ತಗ್ಗು-ಗುಂಡಿ ಮುಚ್ಚಲು ಹಣವಿಲ್ಲ. ನಾಲಾ ಹೂಳೆತ್ತುವ ಕೆಲಸವೂ ಸಮರ್ಪಕವಾಗಿ ನಡೆದಿಲ್ಲ ಎಂದು ದೂರಿದರು.

ಪಾಲಿಕೆಯಲ್ಲಿ ವಿರೋಧ ಪಕ್ಷದ ನಾಯಕಿಯ ಕಚೇರಿ ಉದ್ಘಾಟನೆ ಕಾರ್ಯಕ್ರಮ ಜು. 26ರಂದು ಸಂಜೆ 5 ಗಂಟೆಗೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಎಂಎಲ್​ಸಿ ಜಗದೀಶ ಶೆಟ್ಟರ್, ಶಾಸಕ ಪ್ರಸಾದ ಅಬ್ಬಯ್ಯ, ಮೇಯರ್ ವೀಣಾ ಬರದ್ವಾಡ, ಉಪ ಮೇಯರ್ ಸತೀಶ ಹಾನಗಲ್, ಇತರರು ಪಾಲ್ಗೊಳ್ಳುವರು. ಪಾಲಿಕೆಯ ಎಲ್ಲ ಸದಸ್ಯರನ್ನು ದಂಪತಿ ಸಮೇತರಾಗಿ ಸನ್ಮಾನಿಸಲಾಗುವುದು. ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಎಸ್. ಸಂದಿಲಕುಮಾರ್, ದೀಪಾ ಗೌರಿ ಇದ್ದರು.