ಜಿಲ್ಲೆ

ಕಾನೂನು ಬದ್ಧವಾಗಿ ರಚನೆಯಾಗಿಲ್ಲ ವಾರ್ಡ್ ಸಮಿತಿ

ಉತ್ತರ ಕನ್ನಡ ಡೆಸ್ಕ್

ಕುಮಟಾ: ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ 10 ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ 8420 ಅರಣ್ಯವಾಸಿಗಳ ಕುಟುಂಬಗಳಿಂದ ಮಾತ್ರ ಸಮರ್ಪಕವಾಗಿ ಅರ್ಜಿ ವಾರ್ಡ್ ಸಮಿತಿಯಡಿ ದಾಖಲಾಗಿದ್ದು, ಇನ್ನುಳಿದ ಅರ್ಜಿಗಳು ದಾಖಲಾಗಿಲ್ಲ. ಅರಣ್ಯ ಹಕ್ಕು ಸಮಿತಿಗಳ ನಿಷ್ಕ್ರಿಯತೆಯಿಂದ ನಗರ ಅರಣ್ಯವಾಸಿಗಳು ಮಂಜೂರಿ ಪ್ರಕ್ರಿಯೆ ಅತಂತ್ರ ಆಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಪಟ್ಟಣದ ಹೊನ್ಮಾಂವದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನಗರ ಅರಣ್ಯ ಅತಿಕ್ರಮಣದಾರರ ಸಭೆಯಲ್ಲಿ ಅವರು ಮಾತನಾಡಿದರು.

ನಗರ ಅರಣ್ಯ ಅತಿಕ್ರಮಣದಾರರ ಮಂಜೂರಿ ಪ್ರಕ್ರಿಯೆಗೆ ವಾರ್ಡ್ ಸಮಿತಿಗಳನ್ನು ಕಾನೂನು ಬದ್ಧವಾಗಿ ರಚಿಸದೆ, ಸಮಿತಿಗಳಿಗೆ ಕಾನೂನಿನ ತಿಳಿವಳಿಕೆ ಪ್ರಸ್ತುತಪಡಿಸದೆ ವಾರ್ಡ್ ಸಭೆ, ಜಿಪಿಎಸ್ ಸರ್ವೆ, ಅರ್ಜಿ ಪರಿಶೀಲನೆ ಮುಂತಾದವು ಸಮರ್ಪಕವಾಗಿ ನಡೆದಿಲ್ಲ. ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ವಾರ್ಡ್ ಅರಣ್ಯ ಹಕ್ಕು ಸಮಿತಿಯ ನಿಷ್ಕ್ರಿಯತೆಯಿಂದ ಮತ್ತು ಸೂಕ್ತ ಕಾನೂನು ತಿಳಿವಳಿಕೆ ಕೊರತೆಯಿಂದ ಮಂಜೂರಿ ಪ್ರಕ್ರಿಯೆ ಕುಂಠಿತವಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ವಿವಿಧ ನಗರ ಸ್ಥಳೀಯ ಸಂಸ್ಥೆಗಳಾದ ಶಿರಸಿಯಲ್ಲಿ 1241, ಸಿದ್ದಾಪುರ 1391, ಯಲ್ಲಾಪುರ 1750, ಮುಂಡಗೋಡ 854, ಭಟ್ಕಳ 391, ಹೊನ್ನಾವರ 519, ಕುಮಟಾ 414, ಅಂಕೋಲಾ 270, ಕಾರವಾರ 20, ಹಳಿಯಾಳದಲ್ಲಿ (ಟೌನ್ ಪಂಚಾಯಿತಿ 260, ಕಾಪೋರೇಷನ್ 62) 1570 ಅರಣ್ಯವಾಸಿ ಕುಟುಂಬಗಳು ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿವೆ ಎಂದರು.

ಸಭೆಯಲ್ಲಿ ಹೋರಾಟ ವೇದಿಕೆಯ ತಾಲೂಕು ಅಧ್ಯಕ್ಷ ಮಂಜುನಾಥ ಮರಾಠಿ, ಸೀತಾರಾಮ ನಾಯ್ಕ, ಗಜಾನನ ಪಟಗಾರ ಹೆಗಡೆ, ಕುಸುಂಬಿ ಕಿಮಾನಿ, ರಮ್ಯಾ ಮುಕ್ರಿ, ಗಜಾನನ ನಾಯ್ಕ, ನವೀನ ಗಜಾನನ ನಾಯ್ಕ ಇತರರು ಇದ್ದರು.