ಜಿಲ್ಲೆ

ಅರ್ಕಾವತಿ ನದಿ ಪ್ರದೇಶದ ವಾರ್ಡ್​ಗೆ ಬೇಕು ಅಭಿವೃದ್ಧಿಯ ಸ್ಪರ್ಶ!

ಗಂಗಾಧರ ಬಿ ವಿ

* ಬಾಲಗೇರಿಯ 17ನೇ ವಾರ್ಡ್​ ದುಸ್ಥಿತಿ

* ತಡೆಗೋಡೆ ನಿರ್ಮಾಣ, ವಸತಿ ಮತ್ತು ನಿವೇಶನ ಮಂಜೂರಿ ನಿರೀೆಯಲ್ಲಿ ನಿವಾಸಿಗಳು

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಅರ್ಕಾವತಿ ನದಿ ತೀರ ಪ್ರದೇಶಕ್ಕೆ ಹೊಂದಿಕೊಂಡಿರುವ ವಾರ್ಡ್​ಗಳ ಪೈಕಿ ಒಂದಾಗಿರುವ ಬಾಲಗೇರಿಯ 17ನೇ ವಾರ್ಡ್​ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದರೂ ರಸ್ತೆ, ಚರಂಡಿ, ವಸತಿ ಸಮಸ್ಯೆ ತುಸು ಹೆಚ್ಚೇ ಇದೆ.

17ನೇ ವಾರ್ಡ್​ನಲ್ಲಿ ಹೆಚ್ಚಾಗಿ ಕೂಲಿಕಾರರು ವಾಸವಾಗಿದ್ದು, ಹಿಂದುಳಿದ ಪ್ರದೇಶವಾಗಿದೆ. ವಾರ್ಡಿನಲ್ಲಿ ಸೀಟು, ಗರಿಶೆಡ್​, ನಾಡಹೆಂಚು, ಮಂಗಳೂರು ಹೆಂಚು ಮನೆಗಳಿದ್ದು, ಎಲ್ಲೂ ಎರಡು ಅಂತಸ್ತಿನ ಮನೆಗಳಿಲ್ಲ.

ಬಹುತೇಕ ಮಂದಿ ಎಪಿಎಂಸಿ, ರೇಷ್ಮೆ ಫಿಲೇಚರ್​, ಗಾರ್ಮೆಂಟ್ಸ್​ ಇನ್ನಿತರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಹುತೇಕ ಮಂದಿ ಕಿರಿದಾದ ಜಾಗದಲ್ಲಿ ವಾಸ ಮಾಡುತ್ತಿದ್ದು, ವಸತಿ&ನಿವೇಶನ ಸೌಲಭ್ಯ ಕಲ್ಪಿಸಬೇಕಿದೆ.

ಕುಡಿಯುವ ನೀರಿನ ಸಂಪರ್ಕ ಹಾಗೂ ಇತರ ಅಭಿವೃದ್ಧಿ ಕೆಲಸಗಳಿಗೆ ರಸ್ತೆ ಅಗೆದಿರುವುದರಿಂದ ಬಹುತೇಕ ರಸ್ತೆಗಳು ಹಾಳಾಗಿವೆ. ಮಳೆ ಬಂದ ಸಂದರ್ಭದಲ್ಲಿ ಕೆಸರುಮಯವಾಗುತ್ತವೆ. ಬಿಸಿಲಿನಲ್ಲಿ ಧೂಳಿನ ಕಿರಿಕಿರಿ ಅನುಭವಿಸುವಂತಾಗಿದೆ. ಹಾಗಾಗಿ ಪ್ರಮುಖವಾಗಿ ವಾರ್ಡಿನಲ್ಲಿ ರಸ್ತೆ, ಚರಂಡಿ ವೈಜ್ಞಾನಿಕವಾಗಿ ಅಭಿವೃದ್ಧಿಯಾಗಬೇಕು ಎನ್ನುತ್ತಾರೆ ಸ್ಥಳಿಯರು.

ವಾರ್ಡ್​ ವ್ಯಾಪ್ತಿ

ಅರ್ಕಾವತಿ ನದಿ ಪಕ್ಕದಿಂದ 14ನೇ ವಾರ್ಡ್​ವರೆಗೆ, ಇನ್ನೊಂದು ಕಡೆ 16ನೇ ವಾರ್ಡ್​ ಮತ್ತೊಂದು ಕಡೆ. ರೈಲು ಹಳಿವರೆಗೆ ವಿಸ್ತಾರ ಹೊಂದಿದೆ. ವಾರ್ಡಿನಲ್ಲಿ ಬಿಸಿಲಮ್ಮ, ಕೊಲ್ಲಾಪುರದಮ್ಮ, ಮಗ್ಗದಕೇರಿ ಮಾರಮ್ಮ, ರಾಮಮಂದಿರ, ದೊಡ್ಡಮ್ಮ ಚಿಕ್ಕಮ್ಮ ದೇವಾಲಯ, ದರ್ಗಾ, ಚರ್ಚ್​ ಇವೆ.

ಬೇಕಿದೆ ಕಾಯಕಲ್ಪ

ಯು.ಜಿ.ಡಿ. ಸಂಪರ್ಕ ಕೆಲವು ಭಾಗಗಳಲ್ಲಿ ಇದೆ. ಆದರೆ, ಅದು ಕಡಿಮೆ ಎತ್ತರದಲ್ಲಿದೆ, ಇದನ್ನು ಎತ್ತರಿಸಬೇಕು. ಜತೆಗೆ ಬಹುತೇಕ ಕಡೆ ಇನ್ನೂ ಕಾಮಗಾರಿ ನಡೆಯುತ್ತಿದ್ದು ಯು.ಜಿ.ಡಿ ಸಂಪರ್ಕ ಆಗಬೇಕಿದೆ. ಹಾಗೆಯೇ, ಗುಂಡಿಬಿದ್ದ ರಸ್ತೆ ದುರಸ್ತಿ, ಚರಂಡಿ, ಸ್ಲ್ಯಾಬ್ ಅಳವಡಿಕೆ, ಅಂಗನವಾಡಿ ಕಟ್ಟಡ ಬೇಕು, ಸರ್ಕಾರಿ ಶಾಲೆಯಲ್ಲಿ ಒಂದು ಕೊಠಡಿ ನಿರ್ಮಾಣವಾಗುತ್ತಿದ್ದು, ಮತ್ತೊಂದು ಕಟ್ಟಡ ಬೇಕು. ಆಟದ ಮೈದಾನ ಅಭಿವೃದ್ಧಿ ಆಗಬೇಕು. ಜನರಿಗೆ ಅಗತ್ಯವಾಗಿ ವಸತಿ ಮತ್ತು ನಿವೇಶನ ಬೇಕು. ಉದ್ಯಾನವನ, ವಾರ್ಡಿನಿಂದ ಕನಕಪುರ ರಸ್ತೆಗೆ ಸಂಪರ್ಕ ಕಲ್ಪಿಸುವಂತೆ ಅರ್ಕಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್​ ನಿರ್ಮಾಣ ಮಾಡಬೇಕು.

ತಡೆಗೋಡೆ ನಿರ್ಮಿಸಿ

ವಾರ್ಡಿನ ಬಹುತೇಕ ಭಾಗ ಅರ್ಕಾವತಿ ನದಿಯಿದ್ದು, ನದಿ ಪಕ್ಕದಲ್ಲೇ ವಾಸದ ಮನೆಗಳಿವೆ. ನದಿ ತುಂಬಿ ಬಂದಾಗ ಮನೆಗಳಿಗೆ ನೀರು ನುಗ್ಗಿ ಬರುತ್ತದೆ. ಕಳೆದ ತಿಂಗಳೂ ನದಿ ತುಂಬಿ ಹರಿದಾಗ ಐದಾರು ಮನೆಗಳಿಗೆ ನೀರು ನುಗ್ಗಿ ನಗರಸಭೆ ಆಯಕ್ತ ಡಾ. ಜಯಣ್ಣ ಗಂಜಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಿದ್ದರು. ಹಾಗಾಗಿ ಅರ್ಕಾವತಿ ನದಿ ಉದ್ದಕ್ಕೂ ತಡೆಗೋಡೆ ನಿರ್ಮಾಣ ಆಗಬೇಕಿದೆ.

ಗಿರಿಜಮ್ಮ ಎಚ್​.ಜಿ. ಗುರುವೇಗೌಡ

ವಾರ್ಡಿನಲ್ಲಿ ಈಗಾಗಲೇ ಶಾಸಕರು 9 ವಸತಿ ಮನೆ ನೀಡಿದ್ದು, ಇನ್ನೂ 100 ಮನೆ ಮತ್ತು ವಸತಿ ರಹಿತರಿಗೆ 200 ನಿವೇಶನಗಳಿಗೆ ಸಹಕಾರ ಕೇಳಿದ್ದೇವೆ. ರಸ್ತೆ, ಚರಂಡಿ ಅಭಿವೃದ್ಧಿಗೆ ಅನುದಾನ ಒದಗಿಸಿ ಅಭಿವೃದ್ಧಿಗೆ ವಿಶೇಷವಾಗಿ ಆಶಕ್ತಿ ವಹಿಸಿದ್ದಾರೆ. ನಗರಸಭಾ ಅಧ್ಯಕ್ಷರು ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದು, ಹಂತ ಹಂತವಾಗಿ ಅಭಿವೃದ್ಧಿ ಕಾಣುತ್ತಿದೆ.

ವಾರ್ಡ್​ ಸದಸ್ಯೆ 17ನೇ ವಾರ್ಡ್​, ರಾಮನಗರ. ಮೊ : 9880194861.

* ವಾರ್ಡಿನ ಜನಸಂಖ್ಯೆ ಸುಮಾರು 3,000

* ಮತದಾರರು : 1900