ಜಿಲ್ಲೆ

ಅಡುಗೆ ಅನಿಲ ಮರುಪೂರಣ ದಂಧೆ ವಿರುದ್ಧ ಸಮರ, ಅಧಿಕಾರಿಗಳ ಚುರುಕಿನ ಕಾರ್ಯಾಚರಣೆ, ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಎಫ್‌ಐಆರ್ ದಾಖಲು

ವಿಜಯಪುರ: ನಗರದಲ್ಲಿ ಗ್ಯಾಸ್ ಮರುಪೂರಣ ದಂಧೆ ಜೋರಾಗಿದ್ದು, ಅಧಿಕಾರಿಗಳು ಚುರುಕಿನ ಕಾರ್ಯಾಚರಣೆ ನಡೆಸಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.

ನಗರದ ಸರ್ಕಾರಿ ಕಾಲೇಜ್ ಹಿಂಭಾಗದ ಪತ್ರಾಸ್ ಶೆಡ್‌ನಲ್ಲಿ ಶನಿವಾರ ಏಕಾಏಕಿ ದಾಳಿ ನಡೆಸಿರುವ ಆಹಾರ ಇಲಾಖೆ ಅಧಿಕಾರಿಗಳ ತಂಡ ರೂ.8260 ರೂಪಾಯಿ ಮೌಲ್ಯದ 14.2 ಕೆಜಿ ತೂಕದ ಎಚ್‌ಪಿ ಕಂಪನಿಯ 3 ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಎರಡು ಸಿಲಿಂಡರ್‌ಗಳು ತುಂಬಿದ್ದು, ಒಂದು ಅರ್ಧ ತುಂಬಿತ್ತು. ಇದರ ಜೊತೆಗೆ ಒಂದು ತೂಕ ಮಾಡುವ ಯಂತ್ರ, ಗ್ಯಾಸ್ ಮರುಪೂರಣ ಯಂತ್ರ ವಶಕ್ಕೆ ಪಡೆದಿದ್ದಾರೆ.

ಎಲ್‌ಪಿಜಿ ಸಿಲಿಂಡರ್‌ಗಳಲ್ಲಿಯ ಗ್ಯಾಸ್ ತೆಗೆದು ಮರುಪೂರಣ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಂಧೆ ನಡೆಸುತ್ತಿರುವುದು ಕಂಡು ಬಂದಿದೆ. ಇದೊಂದು ಅಪಾಯಕರ ಕೃತ್ಯ ಎಂಬುದು ಗೊತ್ತಿದ್ದೂ ಅಕ್ರಮವಾಗಿ ದಂಧೆಯಲ್ಲಿ ತೊಡಗಿಸಿಕೊಂಡಿರುವುದು ಕಾರ್ಯಾಚರಣೆ ವೇಳೆ ಸಾಬೀತಾಗಿದೆ. ಪತ್ರಾಸ್ ಶೆಡ್‌ನ ಮಾಲೀಕ ಸರ್ಪರಾಜ ಅಕ್ಬರಸಾಬ ಶೇಖ ಎಂಬಾತನ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಇಂಥದ್ದೇ ಇನ್ನೊಂದು ಪ್ರಕರಣ ಶಹಾಪೇಟಿಯಲ್ಲಿ ನಡೆದಿದ್ದು, ಅಮೀತ ಶ್ರೀಶೈಲ್ ವಜ್ರವಾಡ ಎಂಬಾತನ ಮೇಲೆ ಪ್ರಕರಣ ದಾಖಲಿಸಲಾಗಿದೆ. ಶಾಪೇಟಿಯಲ್ಲಿರುವ ಆಲೂರ ಬಿಲ್ಡಿಂಗ್‌ನಲ್ಲಿ ಗ್ಯಾಸ್ ಮರು ಪೂರಣ ಮಾಡುತ್ತಿದ್ದ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ರೂ.3060 ಮೌಲ್ಯದ 14.2 ಕೆಜಿ ತೂಕದ ಎಚ್‌ಪಿ ಕಂಪನಿಯ ಒಂದು ಗ್ಯಾಸ್ ತುಂಬಿದ ಗೃಹ ಬಳಕೆಯ ಸಿಲಿಂಡರ್, ರೂ.2200 ಮೌಲ್ಯದ ಎಚ್‌ಪಿ ಕಂಪನಿಯ ಒಂದು ಖಾಲಿ ಸಿಲಿಂಡರ್, ಗ್ಯಾಸ್ ಮರುಪೂರಣ ಯಂತ್ರ ವಶಕ್ಕೆ ಪಡೆದಿದ್ದಾರೆ. ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.