ಕಲಬುರಗಿ: ವಕ್ಫ್ ಕಾಯ್ದೆ ಮುಸ್ಲಿಮರ ಧಾರ್ಮಿಕ ಹಕ್ಕು. ಆದರೆ ನರೇಂದ್ರ ಮೋದಿ ಸರ್ಕಾರ ತಿದ್ದುಪಡಿ ತಂದು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸುತ್ತಿದ್ದು, ತಿದ್ದುಪಡಿ ಕಾಯ್ದೆ ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿ ನಗರದ ಪೀರ್ ಬಂಗಾಲಿ ಮೈದಾನದಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ವಕ್ಫ್ ಉಳಿಸಿ ಸಂವಿಧಾನ ರಸಿ ಬೃಹತ್ ಸಮಾವೇಶ ಆಗ್ರಹಿಸಿತು.
ರಾಜ್ಯ ಸೇರಿ ದೇಶದ ವಿವಿಧೆಡೆಯಿಂದ ಆಗಮಿಸಿದ ಸಜ್ಜಾದೆ, ಮೌಲಾನಾ, ಮೌಲ್ವಿಗಳು ಸೇರಿ ಮುಸ್ಲಿಂ ಧರ್ಮಗುರುಗಳು, ವಿವಿಧ ಪಕ್ಷಗಳ ರಾಜಕೀಯ ನಾಯಕರು ಕೇಂದ್ರದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಎಂ ನಾಯಕಿ, ರಾಜ್ಯಸಭೆ ಮಾಜಿ ಸದಸ್ಯೆ ಬೃಂದಾ ಕಾರಟ್ ಮಾತನಾಡಿ, ಮುಸ್ಲಿಮರ ಗುರಿಯಾಗಿಸಿದ ವಕ್ಫ್ ತಿದ್ದುಪಡಿ ಕರಾಳ ಕಾಯ್ದೆ. ಇದು ಕೇವಲ ಮುಸ್ಲಿಮರ ವಿರುದ್ಧವಲ್ಲ, ಸಂವಿಧಾನದ ವಿರುದ್ಧ. ದೇಶದ ಸಂವಿಧಾನದ ಮೇಲೆ ಬುಲ್ಡೋಜರ್ ನಡೆಸುತ್ತಿರುವ ಬಿಜೆಪಿ, ಆರ್ಎಸ್ಎಸ್ ವಿರುದ್ಧ ಸಂಸತ್ತಿನ ಒಳಗೆ ಮತ್ತು ಹೊರಗೆ, ಸುಪ್ರೀಂಕೋರ್ಟ್ನಲ್ಲೂ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.
ಧಾರ್ಮಿಕ ಸ್ಥಳಗಳ ರಕ್ಷಣೆ ಎಲ್ಲ ಧರ್ಮಗಳ ಹಕ್ಕು. ದೇಶದಲ್ಲಿ ಎಷ್ಟು ಮಂದಿರ, ಗುರುದ್ವಾರ, ಚರ್ಚ್, ಜೈನ ಮಂದಿರಗಳಿವೆಯೋ ಎಲ್ಲವೂ ಅವರವರ ಧರ್ಮದ ಆಧಾರದಲ್ಲಿ ನಡೆಯುತ್ತಿವೆ. ಇದೀಗ ಮುಸ್ಲಿಮರ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಸರಿಯಲ್ಲ ಎಂದು ಗುಡುಗಿದರು.
ಅಣದೂರಿನ ಭಂತೆ ವರಜ್ಯೋತಿ ಮಾತನಾಡಿ, ಕರಾಳ ಕಾಯ್ದೆ ಹಿಂಪಡೆಯಬೇಕು. ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸುವುದು ಅಧರ್ಮ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಸೇರಿ ಎಲ್ಲ ಧರ್ಮದವರು ದೇಶ ಮುಂದುವರಿಯಲು ಒಂದಾಗಬೇಕು ಎಂದರು.
ಸರ್ದಾರ್ ಗುರ್ಮಿತ್ ಸಲುಜಾ ಮಾತನಾಡಿ, ಜನರ ವಿರುದ್ಧ ಯಾವುದೇ ಕಾನೂನು ಜಾರಿಗೆ ತಂದರೂ ನಡೆಯುವುದಿಲ್ಲ. ಸಂವಿಧಾನಕ್ಕೆ ಧಕ್ಕೆ ತರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಮಾತನಾಡಿ, ಸಂವಿಧಾನದ ಪ್ರತಿ ಕಲಂ ಉಲ್ಲಂಘಿಸಿ ವಕ್ಫ್ ತಿದ್ದುಪಡಿ ಕಾಯ್ದೆ ತರಲಾಗಿದೆ. ಮೋದಿ ಸರ್ಕಾರ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿದೆ. ಸಂವಿಧಾನ ರಕ್ಷಣೆ ಹೊಣೆ ನಮ್ಮ ಮೇಲಿದೆ ಎಂದರು.
ಕೆಬಿಎನ್ ದರ್ಗಾದ ಸಜ್ಜಾದಾ ನಶೀನ್ ಸೈಯದ್ ಅಲಿ ಅಲ್ ಹುಸೇನಿ ಅಧ್ಯಕ್ಷತೆ ವಹಿಸಿದ್ದರು. ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಜ್ರತ್ ಮೌಲಾನಾ ರ್ಜುಹೀಮ್ ಮುಜದಿದೀ, ಜಾಮೀಯಾ ನಿಜಾಮಿಯಾ ಅಧ್ಯಕ್ಷ ಮೌಲಾನಾ ಮುಫ್ತಿ ಖಲೀಲ್ ಅಹ್ಮದ್, ಇತಿಹಾದ್ ಎ ಮಿಲ್ಲತ್ ಕೌನ್ಸಿಲ್ನ ಮೌಲಾನಾ ತೌಕೀರ್ ರರ ಖಾನ್, ಜಮಾತ್ ಉಲೇಮಾ ಹಿಂದ ಅಧ್ಯಕ್ಷ ಮಹ್ಮದ್ ಅಸದ್ ಮದನಿ, ಸಚಿವರಾದ ರೆಹೆಮಾನ್ ಖಾನ್, ಡಾ.ಶರಣಪ್ರಕಾಶ ಪಾಟೀಲ್, ರಾಜ್ಯಸಭೆ ಸದಸ್ಯ ಡಾ.ನಾಸೀರ್ ಹುಸೇನ್, ಎಂಪಿ ಇಮ್ರಾನ್ ಮಾಸೂದ್, ಮಾಜಿ ಸಚಿವ ಸಿಎಂ ಇಬ್ರಾಹಿಂ, ಶಾಸಕಿ ಕನೀಜ್ ಾತಿಮಾ, ಎಂಎಲ್ಸಿ ತಿಪ್ಪಣ್ಣಮ್ಮ ಕಮಕನೂರ, ಅಬು ತಾಲಿಬ್ ರೆಹೆಮಾನಿ, ಇಲಕಲ್ನ ಗುರುಮಹಾಂತ ಸ್ವಾಮೀಜಿ, ಆಳಂದದ ಶ್ರೀ ಕರುಣೇಶ್ವರ ಸ್ವಾಮೀಜಿ, ಸಿಪಿಐಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಿ.ರಾಜಾ, ಮುಜ್ತಬಾ ಾರೂಕ್, ಅಬ್ದುಲ್ ಬಾಸಿತ್, ಶ್ರೀ ಶಾಂತವೀರ ಸ್ವಾಮೀಜಿ, ಅಬ್ದುಲ್ ಮಜೀದ್, ಡಾ.ಮೊಹಮ್ಮದ್ ಸಾದ್, ಡಾ.ಸಯ್ಯದ್ ಮುಸ್ತಫಾ ಅಲ್ ಹುಸೈನಿ, ಅಕ್ಬಿಕ್ ಹುಸ್ಸೈನಿ, ಡಾ.ಅಸಗರ ಚುಲ್ಬುಲ್, ಗುರುನಾಥ ಪೂಜಾರಿ, ಲಚ್ಚಪ್ಪ ಜಮಾದಾರ ಇತರರಿದ್ದರು.